ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆ ನಡೆಸಲು ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಸಿಬಿಐಗೆ ಅನುಮತಿ ನೀಡಿದ್ದ ಆದೇಶವನ್ನು ಈಗಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಪ್ರಶ್ನಿಸಿರುವುದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಇದೇ 12ಕ್ಕೆ ಮುಂದೂಡಿದೆ.
ಈ ಕುರಿತಂತೆ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಲ್ಲಿಸಿರುವ ಅರ್ಜಿಗಳು, ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ಶುಕ್ರವಾರ ವಿಚಾರಣೆಗೆ ನಿಗದಿಯಾಗಿದ್ದವು.
ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು, ‘ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಬೇಕಿರುವ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಇಂದು ವಿಚಾರಣೆಗೆ ಹಾಜರಾಗುತ್ತಿಲ್ಲ. ಹೀಗಾಗಿ, ವಿಚಾರಣೆಯನ್ನು ಇದೇ 9ಕ್ಕೆ ಮುಂದೂಡಬೇಕು’ ಎಂದು ಕೋರಿದರು.
ಇದೇ ವೇಳೆ, ಅರ್ಜಿದಾರ ಬಸನಗೌಡ ಪಾಟೀಲ ಯತ್ನಾಳ್ ಪರ ಹಾಜರಾಗಿದ್ದ ವಕೀಲ ವೆಂಕಟೇಶ್ ಪಿ.ದಳವಾಯಿ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಮನವಿಯನ್ನು ಪುಷ್ಟೀಕರಿಸುವ ಸುಪ್ರೀಂ ಕೋರ್ಟ್‌ನ ಪೂರ್ವನಿದರ್ಶನದ ಸಾರಾಂಶವನ್ನು ಒಳಗೊಂಡ ದಾಖಲೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ದಾಖಲೆ ಪಡೆದ ನ್ಯಾಯಪೀಠ, ‘ಸಂವಿಧಾನದ 135ನೇ ವಿಧಿಯ ಉದ್ದೇಶ, ಕೇಂದ್ರ ವಿಚಕ್ಷಣಾ ಆಯೋಗ ಕಾಯ್ದೆ–2003ರ ನೆಲೆಯಲ್ಲಿ ಕೇಂದ್ರ ವಿಚಕ್ಷಣಾ ಆಯೋಗದ ಪಾತ್ರವೇನು ಎಂಬುದೂ ಸೇರಿದಂತೆ ಹಲವು ವಿಚಾರಗಳು ಕುರಿತು ಉಭಯ ಪಕ್ಷಗಳ ವಕೀಲರಿಂದ ವಾದ ಆಲಿಸಬೇಕಿದೆ’ ಎಂದು ಆದೇಶಿಸಿತು. ಅಂತೆಯೇ, ಅಡ್ವೊಕೇಟ್ ಜನರಲ್ ಅವರ ಮನವಿಯನ್ನು ಪುರಸ್ಕರಿಸಿ ಇದೇ 12ಕ್ಕೆ ವಿಚಾರಣೆ ಮುಂದೂಡಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ಆಲಿಸಿದ್ದ ನ್ಯಾಯಪೀಠವು 2024ರ ಮೇ 31ರಂದು ಆದೇಶವನ್ನು ಕಾಯ್ದಿರಿಸಿತ್ತು. ಕೆಲವು ಅಂಶಗಳಿಗೆ ಸ್ಪಷ್ಟನೆ ಬೇಕಿದೆ ಎಂಬ ಹಿನ್ನೆಲೆಯಲ್ಲಿ ಮುಂದುವರಿದ ವಿಚಾರಣೆಗಾಗಿ ಶುಕ್ರವಾರಕ್ಕೆ (ಆ.2) ವಿಚಾರಣೆಯನ್ನು ನಿಗದಿಗೊಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.