ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಆರೋಪಿಗೆ ದುಬಾರಿ ವಕೀಲರು! ಹೈಕೋರ್ಟ್‌ನಲ್ಲಿ ಎನ್ಐಎ ಪ್ರಾಸಿಕ್ಯೂಷನ್ ಆತಂಕ

Last Updated 17 ಜೂನ್ 2022, 19:21 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆ– 1967ರ (ಯುಎಪಿಎ) ಅಡಿಯಲ್ಲಿ ಜೈಲಿನಲ್ಲಿರುವ ಕೈದಿಗಳು; ನಾವೆಲ್ಲಾ ಅತ್ಯಂತ ಬಡ ಕುಟುಂಬದಿಂದ ಬಂದಿದ್ದೇವೆ ಎಂದು ಕೋರ್ಟ್‌ಗಳಿಗೆ ಜಾಮೀನು ಅರ್ಜಿ, ಪ್ರಮಾಣ ಪತ್ರ, ಮೆಮೊ ಸಲ್ಲಿಸುವಾಗ ಹೇಳುತ್ತಾರೆ.

ಆದರೆ, ಇವರ ಪರವಾಗಿ ವಿಚಾರಣಾ ಮತ್ತು ಹೈಕೋರ್ಟ್‌ಗಳಲ್ಲಿ ವಾದ ಮಂಡಿಸಲು ಹತ್ತಾರುಲಕ್ಷ ರೂಪಾಯಿ ಶುಲ್ಕ ಪಡೆಯುವ ಪ್ರತಿಷ್ಠಿತ ಹಿರಿಯ ವಕೀಲರು ಹಾಜರಾಗುತ್ತಾರೆ. ಹಾಗಾದರೆ, ಈ ಬಡ ಆರೋಪಿಗಳು ಪ್ರತಿಷ್ಠಿತ ಹಿರಿಯ ವಕೀಲರನ್ನು ನಿಯೋಜಿಸಿ ಅವರಿಗೆ ಹತ್ತಾರು ಲಕ್ಷ ರೂಪಾಯಿಗಳನ್ನು ಎಲ್ಲಿಂದ ತಂದು ಕೊಡುತ್ತಾರೆ...?

ಇಂತಹದೊಂದು ಪ್ರಶ್ನೆಯನ್ನು ರಾಷ್ಟ್ರೀಯ ತನಿಖಾದಳದ (ಎನ್‌ಐಎ) ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನಕುಮಾರ್, ನ್ಯಾಯಮೂರ್ತಿ ಕೆ.ಸೋಮಶೇಖರ್ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಮಂಡಿಸಿ, ‘ಸ್ವಘೋಷಿತ ಬಡ ಆರೋಪಿಗಳ ಪರ ವಾದ ಮಂಡಿಸುವ ಹಿರಿಯ ವಕೀಲರಿಗೆ ಅಂತರರಾಷ್ಟ್ರೀಯವಾಗಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಯಾರು ಹಣ ಸಂದಾಯ ಮಾಡುತ್ತಾರೆ ಎಂಬ ಅಂಶವನ್ನು ದಯವಿಟ್ಟು ಸೂಕ್ಷ್ಮವಾಗಿ ಅವಲೋಕಿಸಬೇಕು’ ಎಂದು ಮನವಿ ಮಾಡಿದರು.

ಐಎಸ್‌ (ಇಸ್ಲಾಮಿಕ್‌ ಸ್ಟೇಟ್‌ ಆಫ್‌ ಇರಾಕ್‌ ಅಂಡ್‌ ಸಿರಿಯಾ) ಉಗ್ರ ಚಟುವಟಿಕೆಗಳಲ್ಲಿ ಸೇರ್ಪಡೆಯಾಗಲುಮುಗ್ಧ ಮುಸ್ಲಿಂ ಯುವಕರನ್ನುಪ್ರಚೋದಿಸುತ್ತಿದ್ದ ಮತ್ತು ಐಎಸ್‌ಗೆ ದೇಣಿಗೆ ಸಂಗ್ರಹ ಮಾಡಿ ಅವರನ್ನು ಸಿರಿಯಾಕ್ಕೆ ಕಳುಹಿಸಲು ನೆರವು ನೀಡುತ್ತಿದ್ದ ಆರೋಪದಡಿ ಸದ್ಯ ಜೈಲಿನಲ್ಲಿರುವ ನಗರದ ಫ್ರೇಜರ್‌ ಟೌನ್‌ ನಿವಾಸಿ 33 ವರ್ಷದ ಆರೋಪಿ ಇರ್ಫಾನ್‌ ನಾಸಿರ್ ಅಲಿಯಾಸ್ ಇರ್ಫಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಕೆ.ಸೋಮ ಶೇಖರ್ ಹಾಗೂ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಆರೋಪಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್‌ ಚೌಟ, ‘ಆರೋಪಿಗೆ ಜಾಮೀನು ಮಂಜೂರು ಮಾಡಬೇಕು’ ಎಂಬ ಮನವಿಯನ್ನು ಪ್ರಸನ್ನ ಕುಮಾರ್ ವಿರೋಧಿಸಿದರು. ನ್ಯಾಯಪೀಠ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದೆ.

‘ಕುರಾನ್‌ ಸರ್ಕಲ್‌’ ಹೆಸರಿನಲ್ಲಿ ಕೃತ್ಯ

‘ಆರೋಪಿಗಳು 2013ರಲ್ಲಿ ಬೆಂಗಳೂರಿನಲ್ಲಿ ‘ಕುರಾನ್ ಸರ್ಕಲ್‌’ ಹೆಸರಿ
ನಲ್ಲಿ ಸಂಘಟನೆ ರಚಿಸಿಕೊಂಡು ಅಮಾಯಕ ಮುಸ್ಲಿಂ ಯುವಕರನ್ನು
ಸೆಳೆದು ಅವರಿಗೆ ಹಣ ಕೊಟ್ಟು ವಿಮಾನದ ಟಿಕೆಟ್‌ಗಳನ್ನು ತೆಗೆಸಿ ಸಿರಿಯಾಕ್ಕೆ ಇಸ್ಲಾಮಿಕ್ ಸ್ಟೇಟ್‌ ಪರ ಹೋರಾಡಲು ಕಳುಹಿಸುತ್ತಿದ್ದರು’ ಎಂಬುದು ಎನ್‌ಐಎ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT