ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಮೊಕದ್ದಮೆ ವಾಪಸ್: ಸಿಎಂ ಸಿದ್ದರಾಮಯ್ಯ

Published 29 ಮೇ 2023, 15:57 IST
Last Updated 29 ಮೇ 2023, 15:57 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ನಾಡಿನ ಸೌಹಾರ್ದ ಮತ್ತು ಜಾತ್ಯತೀತ ಪರಂಪರೆಯ ರಕ್ಷಣೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ದ್ವೇಷ ರಾಜಕಾರಣವನ್ನು ಬಲಿ ಹಾಕಿ, ಭಯದ ವಾತಾವರಣವನ್ನು ನಿವಾರಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸಾಹಿತಿಗಳು, ಬರಹಗಾರರು ಮತ್ತು ವಿವಿಧ ಜನಪರ ಸಂಘಟನೆಗಳ ಮುಖ್ಯಸ್ಥರ ಜತೆ ಸೋಮವಾರ ನಡೆದ ಸಭೆಯಲ್ಲಿ ಅವರು ಈ ಭರವಸೆ ನೀಡಿದರು.

ಸಾಹಿತಿಗಳು, ಬರಹಗಾರರು ನೀಡಿದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ, ‘ಮನವಿಯಲ್ಲಿರುವ ಎಲ್ಲ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ’ ಎಂದರು.

‘ಮತೀಯ ಗೂಂಡಾಗಿರಿ, ದ್ವೇಷದ ರಾಜಕಾರಣ, ತೇಜೋವಧೆ ಮಾಡುವ ಟ್ರೋಲ್‌ಗಳು ಮತ್ತು ಸಾಹಿತಿಗಳಿಗೆ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಈಗಾಗಲೇ ಖಡಕ್ ಸೂಚನೆ ನೀಡಿದ್ದೇನೆ. ಕನ್ನಡ ಹೋರಾಟಗಾರರು, ರೈತ, ಕಾರ್ಮಿಕ, ದಲಿತ ಚಳವಳಿಗಳ ಹೋರಾಟಗಾರರು ಮತ್ತು ಸಾಹಿತಿ, ಬರಹಗಾರರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗುವುದು’ ಎಂದರು.

‘ಹೊಸ ಶಿಕ್ಷಣ ನೀತಿ ಹೆಸರಲ್ಲಿ ಶಿಕ್ಷಣ ಕ್ಷೇತ್ರವನ್ನು ಗಬ್ಬೆಬ್ಬಿಸಲು ಅವಕಾಶ ಕೊಡುವುದಿಲ್ಲ. ಮತ್ತೊಮ್ಮೆ ಪ್ರತ್ಯೇಕವಾದ ಸಭೆ ಕರೆದು ಸಮಗ್ರವಾಗಿ ಚರ್ಚಿಸಿ, ನಿಷ್ಠುರವಾದ ಮತ್ತು ಖಚಿತ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು’ ಎಂದೂ ಹೇಳಿದರು.

ಹಿಜಾಬ್: ಆದೇಶ ಪರಿಷ್ಕರಣೆಗೆ ಮನವಿ

ಶಿಕ್ಷಣ ಸುಧಾರಣೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂದು ‘ಸಮಾನ ಮನಸ್ಕರ ಒಕ್ಕೂಟ’ ಮುಖ್ಯಮಂತ್ರಿಗೆ ನೀಡಿದ ಸಲಹೆಯಲ್ಲಿ ವಿವರಿಸಿದೆ.

l ಹಿಜಾಬ್‌ ವಿವಾದದಿಂದ ಸಾವಿರಾರು ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಿದ್ದು, ಸಮವಸ್ತ್ರ ಕುರಿತ ಆದೇಶ ಪರಿಷ್ಕರಿಸಬೇಕು

l ಸಂವಿಧಾನ ವಿರೋಧಿ, ಕೋಮುವಾದಿ ಪಠ್ಯಪುಸ್ತಕಕ್ಕೆ ‌ ತಕ್ಷಣ ತಿದ್ದುಪಡಿ ಮಾಡಿ, ಪರಿಷ್ಕರಿಸಬೇಕು

l ರಾಷ್ಟ್ರೀಯ ಶಿಕ್ಷಣ ನೀತಿ ಹಿಂಪಡೆದು, ಸಮ ಸಮಾಜಕ್ಕಾಗಿ ಸಮಾನ ಶಿಕ್ಷಣ ಆಶಯ ಸಾಕಾರಗೊಳಿಸಬೇಕು‌

l ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಕುರಿತ ಸರ್ಕಾರಿ ಆದೇಶ ಹಿಂಪಡೆಯಬೇಕು

l ರದ್ದಾಗಿರುವ ವಿದ್ಯಾರ್ಥಿವೇತನ ಮರು ಜಾರಿಗೊಳಿಸಬೇಕು

l ಸಾಂಸ್ಕೃತಿಕ ಪ್ರತಿಷ್ಠಾನಗಳಲ್ಲಿ ಪ್ರತಿಭಾವಂತರಿಗೆ ಅವಕಾಶ ನೀಡಬೇಕು

l ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಅಧ್ಯಯನ ಸಮಿತಿಯ ವರದಿಯ ಶಿಫಾರಸುಗಳನ್ನು ಜಾರಿ ಮಾಡಬೇಕು.

l ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆ ರಕ್ಷಿಸಲು ಮಸೂದೆ ಮಂಡಿಸಬೇಕು

l ಸಾಹಿತಿ, ಚಿಂತಕರಿಗೆ ನಿರಂತರವಾಗಿ ಬೆದರಿಕೆ ಪತ್ರ ಬರೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು

l ವಿಶ್ವವಿದ್ಯಾಲಯಗಳ ಸಿಂಡಿಕೇಟ್‌, ಅಕಾಡೆಮಿಕ್‌ ಕೌನ್ಸಿಲ್‌ಗಳಲ್ಲಿ ನಿರ್ದಿಷ್ಟ ಸಮುದಾಯದವರು ಮಾತ್ರ ನೇಮಕಗೊಳ್ಳುವುದಕ್ಕೆ ಕಡಿವಾಣ ಹಾಕಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT