ಚಾಮರಾಜನಗರ: ರಾಜ್ಯದ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ರೈತ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಂತೇಮರಹಳ್ಳಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಜಾಲಹಳ್ಳಿಹುಂಡಿಯಲ್ಲಿ ವಾಹನಗಳನ್ನು ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟು ಬಿಡದೇ ಇದ್ದಾಗ, ಪೊಲೀಸರು ಪ್ರತಿಭಟನಕಾರರನ್ನು ಬಲವಂತವಾಗಿ ತಮ್ಮ ವಶಕ್ಕೆ ಪಡೆದರು. ಕೆಲ ಹೊತ್ತಿನ ನಂತರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಮೈಸೂರು– ಚಾಮರಾಜನಗರ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ‘ತಮಿಳುನಾಡಿಗೆ 14,500 ಕ್ಯುಸೆಕ್‌ಗಳಷ್ಟು ನೀರು ಬಿಡುವುದರ ಮೂಲಕ ರಾಜ್ಯದ ರೈತರ ಮರಣ ಶಾಸನ ಬರೆಯಲು ಸರ್ಕಾರ ಹೊರಟಿದೆ. ಮೇಕೆದಾಟು ಯೋಜನೆಗೆ ಪ್ರಾಶಸ್ತ್ರ್ಯ ನೀಡುತ್ತೇವೆ ಎಂದು ಹೇಳಿ 2019 ಪಾದಯಾತ್ರೆ ಮಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ರಾಜ್ಯದ ರೈತರನ್ನು ಬಲಿಕೊಡುವುದಕ್ಕೆ ಹೊರಟಿದ್ದಾರೆ. ಇವರಿಗೆ ಅಧಿಕಾರದ ಆಸೆ ಇಲ್ಲದಿದ್ದರೆ ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.
‘ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಲ್ಲ. ರಾಜ್ಯದಲ್ಲಿ ಸರಿಯಾಗಿ ಮಳೆಯಾಗಿಲ್ಲ. ಜಲಾಶಯಗಳ ನೀರಿನ ಮಟ್ಟ ಕುಸಿದಿದೆ. ಕೆರೆ ಕಟ್ಟೆಗಳಿಗೆ ನೀರು ಬಿಡುವ ಕೆಲಸ ಮಾಡಿಲ್ಲ’ ಎಂದು ದೂರಿದರು.
‘ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆಗುವ ಅನಾಹುತಕ್ಕೆ ಕರ್ನಾಟಕ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ. ಅಕ್ಕಿಗಾಗಿ ಬೇರೆ ರಾಜ್ಯಗಳನ್ನು ಬೇಡುವ ಪರಿಸ್ಥಿತಿ ಸರ್ಕಾರಕ್ಕೆ ಇದೆ. ರಾಜ್ಯದ ರೈತರಿಗೆ ಸರಿಯಾಗಿ ನೀರು ಬಿಟ್ಟಿದ್ದರೆ ಇಲ್ಲೇ ಭತ್ತ ಬೆಳೆಯಬಹುದಿತ್ತು. ಅದರ ಜೊತೆಗೆ ಅಂತರ್ಜಲ ವೃದ್ಧಿಯಾಗುತ್ತಿತ್ತು’ ಎಂದರು.
ವಶಕ್ಕೆ, ಬಿಡುಗಡೆ: ತಮಿಳುನಾಡಿಗೆ ಬಿಟ್ಟಿರುವ ಕಾವೇರಿ ನೀರನ್ನು ನಿಲ್ಲಿಸುವ ತನಕ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡುವುದಾಗಿ ರೈತರು ಪಟ್ಟು ಹಿಡಿದರು. ಸಂಚಾರಕ್ಕೆ ಅಡಚಣೆಯಾಗಿ ವಾಹನಗಳು ಸಾಲಾಗಿ ನಿಲ್ಲಬೇಕಾಯಿತು. ಪ್ರತಿಭಟನಾನಿರತರ ಮನವೊಲಿಕೆ ಪೊಲೀಸರು ಮುಂದಾದರು. ಆದರೆ, ಪಟ್ಟು ಬಿಡದೇ ಇದ್ದಾಗ ಪೊಲೀಸರು 20ಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ರೈತ ಸಂಘದ ಹೊನ್ನೂರು ಬಸವಣ್ಣ, ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಹಾಲಿನ ನಾಗರಾಜು, ಪಟೇಲ್ ಶಿವಮೂರ್ತಿ, ಹರ್ಷ, ಮಹೇಶ್, ಸತೀಶ್, ಚನ್ನಪ್ಪ, ಹೆಗ್ಗೋಠಾರ ಮಹೇಶ್, ಬಸವರಾಜಪ್ಪ, ಮಹೇಂದ್ರ, ಮಂಜು, ಪ್ರವೀಣ್, ಉಡಿಗಾಲ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ್, ಗುರು, ಮಲ್ಲಪ್ಪ, ಮಹದೇವಸ್ವಾಮಿ, ರೇವಣ್ಣ, ಸ್ವಾಮಿ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.