ಬೆಂಗಳೂರು: ‘ದೇಶದಲ್ಲೇ ಬೆಂಗಳೂರು ವಕೀಲರ ಸಂಘ ಅತ್ಯುತ್ತಮವಾದುದು, ಅಂತೆಯೇ, ಬೆಂಗಳೂರು ಒಂದು ಸುಂದರ ನಗರಿ, ಇಲ್ಲಿನ ಹಿರಿಯ ವಕೀಲರ ಕೌಶಲ ಕಂಡು ನಾನು ಬೆರಗಾಗಿದ್ದೇನೆ. ಎಲ್ಲ ಸಹೃದಯಿಗಳ ಪ್ರೀತಿಯ ಮಧುರ ನೆನಪುಗಳನ್ನು ಹೊತ್ತು ತೆರಳುತ್ತಿದ್ದೇನೆ‘ ಎಂದು ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿರುವ ಅಲೋಕ್ ಆರಾಧೆ ಭಾವುಕ ನುಡಿಗಳನ್ನಾಡಿದರು.
ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಯಾಗಿದ್ದ ಅವರಿಗೆ ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘ ಶುಕ್ರವಾರ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆರಾಧೆ, ‘ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಮತ್ತು ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿಯಂತಹವರ ಯುವ ಶಕ್ತಿಯಿಂದ ಹೈಕೋರ್ಟ್ ಸಶಕ್ತವಾಗಿ ಕಾರ್ಯ ನಿರ್ವಹಿಸುತ್ತಿದೆ‘ ಎಂದರು.
‘ಎಲ್ಲರಿಗೂ ನಮಸ್ಕಾರ‘ ಎಂದು ಕನ್ನಡದಲ್ಲೇ ತಮ್ಮ ಭಾಷಣ ಆರಂಭಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ, ‘ಆರಾಧೆ ಒಬ್ಬ ಕಠಿಣ ಪರಿಶ್ರಮ ಜೀವಿ. ಕಿರಿಯರಿಗೆ ಮಾದರಿಯಾಗಬಲ್ಲ ವೃತ್ತಿ ಬದ್ಧತೆ ವ್ಯಕ್ತಿತ್ವ ಅವರದ್ದು. ನ್ಯಾಯದಾನದ ವಿಚಾರದಲ್ಲೂ ಅವರು ಹಿಂದೆ ಬಿದ್ದಿಲ್ಲ. ತೆಲಂಗಾಣದಲ್ಲಿ ಅವರು ಪ್ರಸಿದ್ಧ ನ್ಯಾಯಮೂರ್ತಿಯಾಗಿ ಇನ್ನಷ್ಟು ಹೆಸರು ಪಡೆಯಲಿ‘ ಎಂದು ಆಶಿಸಿದರು.
ವಿವೇಕ್ ರೆಡ್ಡಿ ಮಾತನಾಡಿ, ‘ಅಲೋಕ್ ಆರಾಧೆ ಒಬ್ಬ ಸರಳ ಜೀವಿ. ಜಮ್ಮು ಕಾಶ್ಮೀರ ಹೈಕೋರ್ಟ್‌ನಿಂದ ಇಲ್ಲಿಗೆ ಯಾವ ರೀತಿ ಸರಳವಾಗಿ ಬಂದರೋ ಅಷ್ಟೇ ಸರಳತೆಯಿಂದ ತೆಲಂಗಾಣಕ್ಕೆ ತೆರಳುತ್ತಿರುವುದು ಅವರ ವಿಶೇಷತೆ‘ ಎಂದರು.
ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ‘ಆರಾಧೆ ಒಬ್ಬ ಶಿಕ್ಷಕ, ಲೇಖಕ ಮತ್ತು ಪ್ರೀತಿಪಾತ್ರ ಸಜ್ಜನ ವ್ಯಕ್ತಿತ್ವದ ನ್ಯಾಯಮೂರ್ತಿ‘ ಎಂದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಎನ್.ಪಿ. ಅಮೃತೇಶ್, ರಾಜು ಮತ್ತು ಹೇಮಲತಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.