ಬೆಂಗಳೂರು: ‘ಎಲ್ಲ ಇಲಾಖೆಗಳು ಮತ್ತು ಇಲಾಖೆಗಳ ಅಧೀನದಲ್ಲಿರುವ ನಿಗಮ, ಮಂಡಳಿ, ಪ್ರಾಧಿಕಾರಗಳ ಮುಂದುವರಿದ ಕಾಮಗಾರಿಗಳ ಬಿಲ್‌ಗಳ ನೈಜತೆ ಖಚಿತಪಡಿಸಿಕೊಂಡು, ನಿಯಮದ ಅನ್ವಯ ಇರುವ ಬಿಲ್‌ಗಳಿಗೆ ಆಯಾ ಇಲಾಖೆಯ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡಬೇಕು’ ಎಂದು ಆರ್ಥಿಕ ಇಲಾಖೆ ಬುಧವಾರ ಸುತ್ತೋಲೆ ಹೊರಡಿಸಿದೆ.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ 40ರಷ್ಟು ಲಂಚ ಆರೋಪದ ಕುರಿತು ಈಗಿನ ಕಾಂಗ್ರೆಸ್ ಸರ್ಕಾರ ಯಾವ ಕ್ರಮವನ್ನೂ ಜರುಗಿಸಿಲ್ಲ. ಹಿಂದಿನ ಸರ್ಕಾರ ಮಂಜೂರಾತಿ ನೀಡಿದ್ದ ಕಾಮಗಾರಿಗಳು ಮತ್ತು ಪೂರ್ಣಗೊಂಡ ಕಾಮಗಾರಿಗಳ ಬಿಲ್ ತಡೆ ಹಿಡಿಯುವುದಕ್ಕೆ ಈ ಸರ್ಕಾರದ ಕ್ರಮ ಸೀಮಿತವಾಗಿದೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೆ, ಆರ್ಥಿಕ ಇಲಾಖೆ ಈ ಸುತ್ತೋಲೆ ಹೊರಡಿಸಿದೆ.
‘ಎಲ್ಲ ಶಾಸನಬದ್ಧ ಪಾವತಿಗಳನ್ನು ಮತ್ತು ಬಾಹ್ಯ ನೆರವಿನ ಮುಂದುವರೆದ ಯೋಜನೆಗಳಿಗೆ ಸಂಬಂಧಿಸಿದಂತೆ ಹಣ ಬಿಡುಗಡೆ ಮಾಡಬೇಕು. ಮುಂದುವರಿದ ಕಾರ್ಯಕ್ರಮ, ಯೋಜನೆಗಳಿಗೆ ಸಂಬಂಧಿಸಿದ ಸರಕು ಮತ್ತು ಸೇವೆಗಳ ಸಂಗ್ರಹಣೆಗಳ ಸಂಬಂಧವೂ ಹಣ ಬಿಡುಗಡೆ ಮಾಡಬಹುದು. ಆದರೆ, ಇನ್ನೂ ಆರಂಭ ಆಗದಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೇ 22ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿರುವ ನಿರ್ದೇಶನಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ’ ಎಂದು ಇಲಾಖೆಯ ಕಾರ್ಯದರ್ಶಿ ಏಕ್‌ರೂಪ್ ಕೌರ್ ಅವರು ಸುತ್ತೋಲೆಯಲ್ಲಿ ವಿವರಿಸಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ಧ ಶೇ 40 ಲಂಚ ಆರೋಪ ಮಾಡಿದ್ದ ಕಾಂಗ್ರೆಸ್ ಭಾವಾವೇಶ ಮಾತಿಗಷ್ಟೇ ಸೀಮಿತ ಆಗಿರುವ ಬಗ್ಗೆ ಮಾರ್ಚ್ 27ರ ‘ಪ್ರಜಾವಾಣಿ’ ಸಂಚಿಕೆಯ ಮುಖಪುಟದಲ್ಲಿ ಪ್ರಕಟವಾದ ವರದಿಗೆ ಪ್ರತಿಕ್ರಿಯಿಸಿದ್ದ ಕೆಂಪಣ್ಣ, ಬಿಲ್ ತಡೆಹಿಡಿದಿರುವ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಕೆಂಪಣ್ಣ ನೇತೃತ್ವದ ನಿಯೋಗ, ‘ಗುತ್ತಿಗೆದಾರರಿಗೆ ₹ 15,000 ಕೋಟಿಗೂ ಹೆಚ್ಚಿನ ಬಿಲ್ ಪಾವತಿ ಬಾಕಿ ಇರುವುದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಕಿ ಬಿಲ್ ಪಾವತಿಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.