ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿ ಅವಘಢ ಸುರಕ್ಷತೆ ಪ್ರಮಾಣಪತ್ರ: ನಿಯಮ ಸಡಿಲಿಸಲು ‘ರುಪ್ಸ’ ಮನವಿ

Last Updated 9 ಜೂನ್ 2022, 7:36 IST
ಅಕ್ಷರ ಗಾತ್ರ

ಬೆಂಗಳೂರು: ‘ಖಾಸಗಿ, ಅನುದಾನಿತ, ಅನುದಾನರಹಿತ ಶಾಲೆಗಳು ಮತ್ತು ಪದವಿಪುರ್ವ ಕಾಲೇಜುಗಳ ಕಟ್ಟಡಗಳ ಸುರಕ್ಷತೆ ಪ್ರಮಾಣಪತ್ರ ಸಲ್ಲಿಸಬೇಕೆಂಬ ವಿಚಾರದಲ್ಲಿ ನಿಯಮ ಸಡಿಲಿಸಿರುವ ರಾಜ್ಯ ಸರ್ಕಾರ, ಅಗ್ನಿ ಅವಘಢ ಸುರಕ್ಷತೆ ಪ್ರಮಾಣಪತ್ರ ವಿಚಾರದಲ್ಲಿ ನಿಯಮ ಸಡಿಲಿಸದಿರುವುದು ಭ್ರಷ್ಟಾಚಾರ ಮತ್ತು ವಾಮಮಾರ್ಗಗಳಿಗೆ ದಾರಿ ಮಾಡಿಕೊಡಲಿದೆ’ ಎಂದು ನೋಂದಾಯಿತ ಅನುದಾನತಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸ) ಅಭಿಪ್ರಾಯಪಟ್ಟಿದೆ.

ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ‘ಅಗ್ನಿ ಅವಘಢ ಸುರಕ್ಷತೆ ಪ್ರಮಾಣಪತ್ರ ಸಲ್ಲಿಸಬೇಕೆಂಬ ನಿಯಮದಿಂದ ನೆಲ ಮಹಡಿ ಮತ್ತು ಒಂದೇ ಮಹಡಿ ಇರುವ ಶಾಲಾ ಕಟ್ಟಡಗಳನ್ನು ಹೊರಗಿಡಬೇಕು. ಒಂದೊಮ್ಮೆ ಸುರಕ್ಷತಾ ಪ್ರಮಾಣಪತ್ರ ಕಡ್ಡಾಯವಾಗಿ ನೀಡಲೇಬೇಕೆಂದರೆ ಕನಿಷ್ಠ ಸುರಕ್ಷತೆಯ ಸಲಕರಣೆಗಳ ಜೋಡಣೆ ಹೊಂದಿದ ಶಾಲೆಗಳಿಗೆ ಸ್ಥಳೀಯ ಅಗ್ನಿಶಾಮಕ ನಿರೀಕ್ಷಕರ ಮೂಲಕ ಪಡೆಯುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಯಿಂದಲೇ ಪ್ರಮಾಣಪತ್ರ ಪಡೆಯಬೇಕೆಂಬ ನಿಯಮದಿಂದ ಸಮಸ್ಯೆ ಆಗಲಿದೆ’ ಎಂದಿದ್ದಾರೆ.

‘ರಾಜ್ಯದಲ್ಲಿ 9 ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ (ಆರ್‌ಎಫ್‌ಒ) ಅಧಿಕಾರಿಗಳು ಹಾಗೂ 6 ಮುಖ್ಯ ಅಗ್ನಿಶಾಮಕ ಅಧಿಕಾರಿಗಳು (ಸಿಎಫ್‌ಒ) ಮಾತ್ರ ಇದ್ದಾರೆ. ರಾಜ್ಯದಲ್ಲಿರುವ 83 ಸಾವಿರ ಶಾಲೆಗಳು ಮತ್ತು 15 ಸಾವಿರ ಪದವಿಪೂರ್ವ ಕಾಲೇಜುಗಳಿಗೆ ಕಡಿಮೆ ಸಂಖ್ಯೆಯಲ್ಲಿರುವ ಈ ಅಧಿಕಾರಿಗಳು ಪ್ರತಿ ವರ್ಷ ಹೇಗೆ ಪ್ರಮಾಣಪತ್ರ ನೀಡಲು ಸಾಧ್ಯ? ರಾಜ್ಯದಲ್ಲಿ ಲಕ್ಷಾಂತರ ಕಾರ್ಖಾನೆಗಳು, ವಸತಿ ಸಮುಚ್ಚಯಗಳು, ಆಸ್ಪತ್ರೆಗಳಿಗೂ ಇದೇ ಅಧಿಕಾರಿಗಳು ಅಗ್ನಿ ಅವಘಡ ಸುರಕ್ಷತೆಯ ಪ್ರಮಾಣಪತ್ರ ಕೊಡಬೇಕಿದೆ. ಅದನ್ನೂ ಹೇಗೆ ನಿಭಾಯಿಸಬಲ್ಲರು? ಹೀಗಾಗಿ, ಈ ವ್ಯವಸ್ಥೆ ಅಕ್ರಮಕ್ಕೆ ಎಡೆ ಮಾಡಿಕೊಡಲಿದೆ’ ಎಂದು ಅವರು ಹೇಳಿದ್ದಾರೆ.

‘ಅಲ್ಲದೆ, ಅಗ್ನಿ ಅವಘಢ ಸುರಕ್ಷತೆ ಪ್ರಮಾಣಪತ್ರಕ್ಕೆ ಪ್ರತಿವರ್ಷ ₹ 20 ಸಾವಿರ ಶುಲ್ಕ ವಿಚಾರ ಮತ್ತು ಪ್ರತಿ ವರ್ಷ ಪ್ರಮಾಣ ಪತ್ರ ಪಡೆಯಬೇಕೆಂಬ ವಿಚಾರದಲ್ಲಿ ವಿನಾಯಿತಿ ಕೇಳಿದ್ದೆವು. ಅಗ್ನಿ ಅವಘಢ ಸುರಕ್ಷತೆಯ ಪ್ರಮಾಣಪತ್ರ ಪಡೆಯಲು ರಾಜ್ಯದ ಎಲ್ಲ ಶಾಲೆಗಳು 10 ಸಾವಿರ ಲೀಟರ್‌ ನೀರಿನ ಟ್ಯಾಂಕ್‌ ಇರಬೇಕೆಂದಿದೆ. ರಾಜ್ಯದ ಬಹುತೇಕ ಶಾಲೆಗಳು ನೆಲಮಹಡಿ ಹಾಗೂ ಕೆಂಪು ಹೆಂಚು ಅಥವಾ ಸಿಮೆಂಟ್‌ ಶೀಟ್‌ ಕಟ್ಟಡಗಳಾಗಿವೆ. ಅವುಗಳು ಇಷ್ಟು ದೊಡ್ಡ ನೀರಿನ ಟ್ಯಾಂಕ್‌ ಅಳವಡಿಸಿಕೊಳ್ಳಲು ಸಾಧ್ಯವೇ’ ಎಂದೂ ಅವರು ಪ್ರಶ್ನಿಸಿದ್ದಾರೆ.

‘ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಅವಧಿ 10 ವರ್ಷ ಎಂದು ಸರ್ಕಾರವೇ ಹೈಕೋರ್ಟ್‌ಗೆ ಮುಚ್ಚಳಿಕೆ ನೀಡಿದೆ. ಆದರೆ, ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆಗೆ ಸಂಬಂಧಿಸಿದಂತೆ ಇದೇ 6ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಈ ಬಗ್ಗೆ ಪ್ರಸ್ತಾವ ಇಲ್ಲ. ಇದರಿಂದಾಗಿ ಸುಮರು 15 ಸಾವಿರಕ್ಕೂ ಹೆಚ್ಚು ಶಾಲೆಗಳು ನವೀಕರಣಕ್ಕಾಗಿ ಇಲಾಖೆಗೆ ಅಲೆದಾಡಬೇಕಾಗುತ್ತದೆ’ ಎಂದೂ ಅವರು ಸಮಾಧಾನ ವ್ಯಕ್ತಪಡಿಸಿದ್ದಾರೆ.

‘ರಾಜ್ಯದಲ್ಲಿ ಈ ಹಿಂದೆ ಸಾವಿರಾರು ಶಾಲೆಗಳ ನಿವೇಶನಗಳು ಶೈಕ್ಷಣಿಕ ಉದ್ದೇಶಕ್ಕೆ ಭೂ ಪರಿವರ್ತನೆ ಪಡೆಯದೆ, ವಾಣಿಜ್ಯ ಅಥವಾ ವಾಸ ನಿವೇಶನದ ಭೂ ಪರಿವರ್ತನೆ ಪಡೆದು ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಅಂಥ ಶಾಲೆಗಳಿಗೆ ಶೈಕ್ಷಣಿಕ ಉದ್ದೇಶಕ್ಕೆ ಭೂ ಪರಿವರ್ತನೆ ಕಡ್ಡಾಯಗೊಳಿಸಿರುವುದು ಶಾಲಾ– ಕಾಲೇಜುಗಳ ಅಸ್ತಿತ್ವಕ್ಕೇ ಸಂಚಕಾರ ತಂದಿದೆ. ಈ ವಿಚಾರದಲ್ಲಿ ವಿನಾಯಿತಿ ನೀಡವಂತೆ ಮನವಿ ಮಾಡಿದ್ದರೂ, ಸರ್ಕಾರ ಸ್ಪಂದಿಸಿಲ್ಲ. ಇದರಿಂದ ಸಾವಿರಾರು ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ, ಶಿಕ್ಷಣ ಇಲಾಖೆ ಜೂನ್‌ 5ರಂದು ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆದು ಎಸ್‌.ವಿ. ಸಂಕನೂರ್ ಅವರ ಸಮಿತಿ ನೀಡಿರುವ ಶಿಫಾರಸ್ಸುನ್ನು ಯಥಾವತ್ತಾಗಿ ಜಾರಿಗೊಳಿಸಬೇಕು‘ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT