ಬೆಂಗಳೂರು: ‘ನಿವೇಶನ ನೀಡುವುದಾಗಿ ಹಣ ಪಡೆದು, ಹೇಳಿದ್ದ ಅಳತೆಯ ನಿವೇಶನ ಹಂಚಿಕೆ ಮಾಡದೆ ಬೇರೊಂದು ಅಳತೆಯ ನಿವೇಶನ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ, ‘ಶ್ರೀ ಆದಿಚುಂಚನಗಿರಿ ಗೃಹ ನಿರ್ಮಾಣ ಸಹಕಾರ ಸಂಘ'ವು ಪ್ರಕರಣದಲ್ಲಿನ ದೂರುದಾರರಿಗೆ ₹ 10 ಲಕ್ಷ ಮೊತ್ತವನ್ನು ಪರಿಹಾರ ರೂಪದಲ್ಲಿ ಪಾವತಿಸಬೇಕು‘ ಎಂದು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಈ ಕುರಿತಂತೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆದಿ ಚುಂಚನಗಿರಿ ಕ್ಷೇತ್ರದ, ‘ಶ್ರೀ ಆದಿಚುಂಚನಗಿರಿ ಗೃಹ ನಿರ್ಮಾಣ ಸಹಕಾರ ಸಂಘ‘ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಆಯೋಗದ ನ್ಯಾಯಾಂಗ ಸದಸ್ಯ ರವಿಶಂಕರ್ ಮತ್ತು ಸದಸ್ಯೆ ಸುನೀತಾ ಸಿ.ಬಾಗೇವಾಡಿ ಅವರಿದ್ದ ಹೆಚ್ಚುವರಿ ವಿಭಾಗೀಯ ಪೀಠವು, ಮೇಲ್ಮನವಿಯನ್ನು ವಜಾಗೊಳಿಸಿದೆ.
‘ಸೊಸೈಟಿಯು, ದೂರುದಾರ ಕೆ.ಎಸ್. ಪಾಪೇಗೌಡ ಅವರಿಗೆ ಪರಿಹಾರ ರೂಪದಲ್ಲಿ ₹ 10 ಲಕ್ಷ ಪರಿಹಾರ ಮತ್ತು ವ್ಯಾಜ್ಯದ ವೆಚ್ಚವಾಗಿ ₹ 25 ಸಾವಿರ ನೀಡಬೇಕು. ಈ ಆದೇಶ ಹೊರಬಿದ್ದ 45 ದಿನಗಳ ಒಳಗಾಗಿ ಪಾಪೇಗೌಡರ ಹೆಸರಿಗೆ ಎಲ್ಲ ಮೂಲಸೌಕರ್ಯ ಅಭಿವೃದ್ಧಿಪಡಿಸಿದ 60X40 ಚದರ ಅಡಿಯ ನಿವೇಶನವನ್ನು ನೋಂದಣಿ ಮಾಡಿಸಿಕೊಡಬೇಕು. ಈ ಆದೇಶ ಪಾಲನೆ ಮಾಡಲು ತಪ್ಪಿದಲ್ಲಿ, ಪರಿಹಾರದ ಮೊತ್ತಕ್ಕೆ ಶೇ 12ರ ಬಡ್ಡಿ ದರದಲ್ಲಿ ಹಣ ಪಾವತಿ ಮಾಡಬೇಕಾಗುತ್ತದೆ‘ ಎಂದು ಎಚ್ಚರಿಸಿದೆ. ದೂರುದಾರ ಪಾಪೇಗೌಡರ ಪರ ವಾದ ಮಂಡಿಸಿದ್ದ ಹೈಕೋರ್ಟ್ ವಕೀಲ ಪ್ರಶಾಂತ್ ಟಿ.ಪಂಡಿತ್ ಅವರ ವಾದವನ್ನು ಪುರಸ್ಕರಿಸಿದೆ.
ಪ್ರಕರಣವೇನು?: ಮೈಸೂರು ಜಿಲ್ಲೆ ವರುಣ ಹೋಬಳಿಯ ವಾಜಮಂಗಲದ ಸರ್ವೇ ನಂಬರ್ 205/1ರಲ್ಲಿ ಮೂಲಸೌಕರ್ಯ ಕಲ್ಪಿಸಿ ಅಭಿವೃದ್ಧಿಪಡಿಸಿದ 60X40 ಚದರ ಅಡಿಯ ನಿವೇಶನ ಪಡೆಯಲು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಮುತ್ತುರಾಯ ಸ್ವಾಮಿ ಲೇಔಟ್ ನಿವಾಸಿಯಾದ ಕೆ.ಎಸ್.ಪಾಪೇಗೌಡ (69) 2006ರಿಂದ ಸೊಸೈಟಿಗೆ ಒಟ್ಟು ₹ 11.40 ಲಕ್ಷ ಮೊತ್ತವನ್ನು ಪಾವತಿ ಮಾಡಿದ್ದರು.
ಆದರೆ, ಸೊಸೈಟಿಯು ನಿವೇಶನ ಹಂಚಿಕೆ ಮಾಡಿರಲಿಲ್ಲ. ನಂತರ ಪಾಪೇಗೌಡರಿಗೆ ಸೂಚನೆಯೊಂದನ್ನು ನೀಡುವ ಮೂಲಕ, ’ಸೊಸೈಟಿ ವತಿಯಿಂದ ನಿಮಗೆ 60X40 ಚದರ ಅಡಿ ನಿವೇಶನ ಹಂಚಿಕೆ ಮಾಡಲು ಆಗುತ್ತಿಲ್ಲ. ಇದರ ಬದಲಿಗೆ 30x50ರ ನಿವೇಶನವನ್ನು ₹ 6,90,175ರ ಮೊತ್ತಕ್ಕೆ ನೀಡಲಾಗುವುದು‘ ಎಂದು ತಿಳಿಸಿತ್ತು. ಇದನ್ನು ಒಪ್ಪದ ಪಾಪೇಗೌಡ, ‘ನನಗೆ 60X40 ಚದರ ಅಡಿ ನಿವೇಶನವನ್ನೇ ನೀಡಬೇಕು‘ ಎಂದು ಕೋರಿದ್ದರು. ಆದರೆ, ಈ ಕೋರಿಕೆಯನ್ನು ಸೊಸೈಟಿ ಒಪ್ಪದೇ ಇದ್ದಾಗ ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು.
ದೂರಿನ ವಿಚಾರಣೆ ನಡೆಸಿದ್ದ ಮಂಡ್ಯ ಜಿಲ್ಲಾ ಗ್ರಾಹಕರ ನ್ಯಾಯಾಲಯ 2022ರ ಡಿಸೆಂಬರ್ 3ರಂದು, ‘ಸೊಸೈಟಿಯು 2011ರ ಮೇ 3ರಿಂದ 2019ರ ಜುಲೈ 3ರವರೆಗೆ ಬಾಕಿ ₹ 4,56,000 ಮೊತ್ತವನ್ನು ಶೇ 9ರ ಬಡ್ಡಿ ದರದಲ್ಲಿ ಪಾಪೇಗೌಡರಿಗೆ ನೀಡಬೇಕು. ಅಂತೆಯೇ, ₹ 1.50 ಲಕ್ಷವನ್ನು ವ್ಯಾಜ್ಯದ ವೆಚ್ಚವಾಗಿ ಪಾವತಿಸಬೇಕು‘ ಎಂದು ಆದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿದ್ದ ಸೊಸೈಟಿ ರಾಜ್ಯ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ವಜಾಗೊಳಿಸಿರುವ ಆಯೋಗವು, ‘ಪಾಪೇಗೌಡರು ಸೊಸೈಟಿ ಆದೇಶದ ಅನುಸಾರ 60X40 ಚದರ ಅಡಿಯ ಅಭಿವೃದ್ಧಿಪಡಿಸಿದ ನಿವೇಶನ ಪಡೆಯಲು ಸಂಪೂರ್ಣ ಹಣವನ್ನು ಸಕಾಲದಲ್ಲಿ ಭರ್ತಿ ಮಾಡಿದ್ದಾರೆ. ಆದರೆ, ಸೊಸೈಟಿ ತನ್ನ ಸಾಮಾನ್ಯ ಸಭೆಯಲ್ಲಿ ಪಾಪೇಗೌಡರಿಗೆ ನೀಡಬೇಕಾದ 60X40 ಚದರ ಅಡಿಯ ನಿವೇಶನ ಹಂಚಿಕೆಯನ್ನು ರದ್ದುಪಡಿಸಿರುವುದಾಗಿ ತಿಳಿಸಿದೆ. ಇದು ನ್ಯಾಯಯುತವಲ್ಲ‘ ಎಂದು ಹೇಳಿದೆ.
‘ಪಾಪೇಗೌಡ ಹಿರಿಯ ನಾಗರಿಕರಿದ್ದು, ಸೊಸೈಟಿಗೆ 2006ರ ಅಕ್ಟೋಬರ್‌ನಲ್ಲಿ ಆರಂಭಿಕ ₹ 1.75 ಲಕ್ಷ ಮೊತ್ತವನ್ನು ಪಾವತಿಸಿ ತದನಂತರ ಕಾಲಕಾಲಕ್ಕೆ ಸೊಸೈಟಿ ಸೂಚನೆಯ ಅನುಸಾರ ಒಟ್ಟು ₹ 11.40 ಲಕ್ಷ ಮೊತ್ತವನ್ನು ಕಂತಿನಲ್ಲಿ ಪಾವತಿಸಿದ್ದಾರೆ. ಆದರೆ, ಸೊಸೈಟಿ 60X40 ಚದರ ಅಡಿಯ ನಿವೇಶನ ನೀಡದೆ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ. ಈ ಕುರಿತಂತೆ ಪಾಪೇಗೌಡ ಸಲ್ಲಿಸಿದ್ದ ದೂರನ್ನು ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ನ್ಯಾಯಾಲಯ ನೀಡಿರುವ ಆದೇಶದಲ್ಲಿ ನ್ಯೂನತೆ ಕಂಡು ಬರುತ್ತಿದೆ. ಹೀಗಾಗಿ, ಈ ಆದೇಶವನ್ನು ಮಾರ್ಪಾಡು ಮಾಡಲಾಗುತ್ತಿದೆ‘ ಎಂದು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.