ಬೆಂಗಳೂರು: 'ಮಹಿಳೆಯರಿಗೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಉಚಿತ ಪ್ರಯಾಣ ನೀಡುವ ಬಗ್ಗೆ ಹಾಗೂ ಅದಕ್ಕೆ ತಗುಲುವ ವೆಚ್ಚದ ಬಗ್ಗೆ ವರದಿ ಸಿದ್ಧವಾಗಿದೆ. ಬುಧವಾರ ಮಧ್ಯಾಹ್ನ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಲಾಗುವುದು' ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಗ್ಯಾರಂಟಿಗಳು ಖಂಡಿತ ಈಡೇರುತ್ತವೆ. ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವೆಂದು ಹೇಳಿದ್ದೇವೆ. ಅದನ್ನು ಈಡೇರಿಸುತ್ತೇವೆ' ಎಂದರು.
'ಉಚಿತ ಪ್ರಯಾಣದ ಅನುಕೂಲ ಹಾಗೂ ಅನನುಕೂಲ ಬಗ್ಗೆ ಅಧಿಕಾರಿಗಳು ವಿಸ್ತೃತ ವರದಿ ಸಿದ್ಧಪಡಿಸಿದ್ದಾರೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ನಿಗಮಗಳಿಂದ ಮಾಹಿತಿ ಪಡೆಯಲಾಗಿದೆ. ಎಷ್ಟು ಮಹಿಳೆಯರು ಓಡಾಡುತ್ತಾರೆ. ಅದಕ್ಕೆ ತಗುಲುವ ವೆಚ್ಚ ಎಷ್ಟು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ವರದಿಯಲ್ಲಿದೆ' ಎಂದು ತಿಳಿಸಿದರು.
'ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದೆ. ಅಲ್ಲಿಯೂ ಗ್ಯಾರಂಟಿ ಬಗ್ಗೆ ಚರ್ಚರಯಾಗಿ,ಘೋಷಣೆ ಆಗುವ ಸಾಧ್ಯತೆ ಇದೆ' ಎಂದೂ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.