ಬೆಂಗಳೂರು: 'ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೇ ಕಾಂಗ್ರೆಸ್ ಪಕ್ಷ ಅವರನ್ನು ‘ಟಾರ್ಗೆಟ್’ ಮಾಡಿದೆ. ಇದು ಅವರ ದಲಿತ ವಿರೋಧಿ ನೀತಿಗೆ ಸ್ಪಷ್ಟ ಉದಾಹರಣೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ಕುಮಾರ್ ಆರೋಪಿಸಿದರು.
ಅಲ್ಲದೇ, ಬಾಂಗ್ಲಾ ದೇಶದ ಮಾದರಿಯಲ್ಲಿ ರಾಜಭವನಕ್ಕೆ ನುಗ್ಗುವುದಾಗಿಯೂ ಕಾಂಗ್ರೆಸ್ ನಾಯಕರು ಬೆದರಿಕೆ ಒಡ್ಡಿದ್ದಾರೆ. ಇದರ ಅರ್ಥ ಬಾಂಗ್ಲಾ ದೇಶ ಮತ್ತು ಶ್ರೀಲಂಕಾ ಮಾದರಿಯಲ್ಲಿ ಕರ್ನಾಟಕದಲ್ಲೂ ಗಲಭೆ ಮತ್ತು ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಸಂಚು ರೂಪಿಸಿದೆ ಎಂದು ಅವರು ಆಪಾದಿಸಿದರು.
ಪಕ್ಷದ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಪಕ್ಷದ ನಾಯಕರ ಸಭೆಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ಕಾಂಗ್ರೆಸ್ ಪಕ್ಷ ದಲಿತ ರಾಜ್ಯಪಾಲರನ್ನು ಗುರಿಯಾಗಿ ಗಲಭೆ ಸೃಷ್ಟಿಸಲು ಯತ್ನಿಸುತ್ತಿದೆ. ಈ ಸಂದರ್ಭದಲ್ಲಿ ಅವರ ಪರವಾಗಿ ನಿಲ್ಲಬೇಕು ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ತನ್ನ ಪ್ರತಿಭಟನೆಯ ವೇಳೆ ರಾಜ್ಯಪಾಲರ ಪ್ರತಿಕೃತಿಯನ್ನು ಸುಟ್ಟು ಹಾಕಿದೆ. ಅವಾಚ್ಯ ಪದಗಳಿಂದ ಬೆದರಿಕೆ ಹಾಕಿದ್ದಾರೆ. ರಾಜ್ಯಪಾಲರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಸೊಕ್ಕಿನಿಂದ ವರ್ತಿಸುತ್ತಿದ್ದಾರೆ. ಹಂಸರಾಜ್ ಭಾರದ್ವಾಜ್ ರಾಜ್ಯಪಾಲರಾಗಿದ್ದಾಗ ಅಂದಿನ ಸಿಎಂ ಯಡಿಯೂರಪ್ಪ ವಿರುದ್ಧ ಇದೇ ರೀತಿ ಅನುಮತಿ ನೀಡಿದ್ದರು. ಆಗ ಕಾಂಗ್ರೆಸ್‌ನವರು ರಾಜ್ಯಪಾಲರನ್ನು ಹಾಡಿ ಹೊಗಳಿದ್ದರು. ಭಾರದ್ವಾಜ್‌ಗೊಂದು ನೀತಿ, ದಲಿತ ಗೆಹಲೋತ್ ಒಂದು ನೀತಿನಾ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ದಂಗೆ ಸೃಷ್ಟಿ ಮಾಡಲು ಪ್ರಯತ್ನಿಸುತ್ತಿದೆ. ರಾಜ್ಯದ ಹಲವೆಡೆ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ, ಹಾನಿ ಮಾಡಲಾಗಿದೆ. ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಇದೇ 22 ರಂದು ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಕುರಿತು ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಬಾಂಗ್ಲಾ ದೇಶದ ಮಾದರಿಯಲ್ಲಿ ರಾಜಭವನಕ್ಕೆ ನುಗ್ಗುವುದಾಗಿ ಬೆದರಿಕೆ ಒಡ್ಡಿರುವುದನ್ನು ವಿರೋಧಿಸಿ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾವುದು. ಈ ಹೇಳಿಕೆ ನೀಡಿರುವ ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ವಿರುದ್ಧ ಈಗಾಗಲೇ ಮಂಗಳೂರಿನಲ್ಲಿ ದೂರು ದಾಖಲಿಸಲಾಗಿದೆ. ಇವರ ವಿರುದ್ಧ ಪೊಲೀಸ್ ಮಹಾನಿರ್ದೇಶಕರು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಪಶ್ಚಿಮ ಬಂಗಾಳ, ಬಾಂಗ್ಲಾ ದೇಶ ಮಾದರಿಯಾಗಿರುವುದು ನೋಡಿದರೆ ‘ಕರುನಾಡು’ ಇವರ ಕೈಲಿರುವುದು ಎಷ್ಟು ಅಪಾಯಕಾರಿ ಎಂಬುದನ್ನು ಸೂಚಿಸುತ್ತಿದೆ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.