ಬೆಂಗಳೂರು: ಮನೆಯ ಯಜಮಾನಿಗೆ ತಿಂಗಳಿಗೆ ₹2 ಸಾವಿರ ನೀಡುವ ಗೃಹ ಲಕ್ಷ್ಮಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಪ್ರಜಾ ಪ್ರತಿನಿಧಿಗಳನ್ನು ನೇಮಿಸಿಕೊಳ್ಳಲು ಸರ್ಕಾರ ಮುಂದಾಗಿದೆ.
‘ಅರ್ಜಿ ಸ್ವೀಕರಿಸಲು ಅನುಕೂಲವಾಗುವಂತೆ ಪ್ರತಿ ಜಿಲ್ಲೆಯಲ್ಲಿ 50ರಿಂದ 100 ಜನರನ್ನು ಪ್ರಜಾ ಪ್ರತಿನಿಧಿಗಳನ್ನು ನೇಮಿಸಲಾಗುತ್ತದೆ. ಇದರ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ವಹಿಸಲಾಗುವುದು. ಯೋಜನೆ ಅನುಷ್ಠಾನಕ್ಕೆ ಅಗತ್ಯವಾದ ತಂತ್ರಾಂಶ ‘ಗೃಹಲಕ್ಷ್ಮಿ’ ಆ್ಯಪ್ ಅನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಪ್ರತಿನಿಧಿಗಳಾಗಿ ನೇಮಕಗೊಂಡವರ ಮೊಬೈಲ್‌ಗೆ ಈ ಆ್ಯಪ್ ಅಳವಡಿಸಿ, ಲಾಗಿನ್ ಆಗಲು ಪಾಸ್‌ವರ್ಡ್ ಕೊಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಗಳು ಹೇಳಿವೆ.
ಈ ಪ್ರಜಾ ಪ್ರತಿನಿಧಿಗಳು ಆ್ಯಪ್‌ಗೆ ಲಾಗಿನ್ ಆಗಿ ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ, ಪೂರಕ ದಾಖಲೆಗಳನ್ನು (ರೇಷನ್ ಕಾರ್ಡ್, ಆಧಾರ್, ಬ್ಯಾಂಕ್ ಖಾತೆ ವಿವರ) ಅಪ್‌ಲೋಡ್ ಮಾಡಲಿದ್ದಾರೆ. ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿಯನ್ನು ಫಲಾನುಭವಿಗೆ ತಲುಪಿಸಲಿದ್ದಾರೆ. ಹೀಗೆ ತಲುಪಿಸಿದ ಪ್ರಜಾ ಪ್ರತಿನಿಧಿಗೆ ಸೇವಾ ಶುಲ್ಕವಾಗಿ ಪ್ರತಿ ಅರ್ಜಿಗೆ ಒಟ್ಟು ₹15ರಂತೆ (ಅರ್ಜಿ ಸಲ್ಲಿಕೆಗೆ ₹10, ಮುದ್ರಿತ ಪ್ರತಿಗೆ ₹5) ಇಲಾಖೆಯಿಂದ ನೀಡಲಾಗುತ್ತದೆ. ಅರ್ಜಿದಾರರು ಯಾವುದೇ ಶುಲ್ಕ ನೀಡಬೇಕಿಲ್ಲ.
‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಜುಲೈ 14ರಂದು ಆರಂಭವಾಗಲಿದೆ. ಆಗಸ್ಟ್ 15ರಂದು ಫಲಾನುಭವಿಗಳ ಆಧಾರ್ ಜೋಡಣೆ ಆಗಿರುವ ಬ್ಯಾಂಕ್ ಖಾತೆಗೆ ಹಣ ಜಮೆ ಆಗಲಿದೆ.
ಎಪಿಎಲ್ ಮತ್ತು ಬಿಪಿಎಲ್ ರೇಷನ್ ಕಾರ್ಡ್‌ನಲ್ಲಿ ಕುಟುಂಬದ ‘ಯಜಮಾನಿ’ ಎಂದು ಗುರುತಿಸಿಕೊಂಡ ಮಹಿಳೆಯ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಈ ಯೋಜನೆಯಡಿ ಪ್ರತಿ ತಿಂಗಳು ಅಂದಾಜು 1.28 ಕೋಟಿ ಮಹಿಳೆಯರ ಖಾತೆಗೆ ಹಣ ಸಂದಾಯವಾಗಲಿದೆ. ರಾಜ್ಯದಲ್ಲಿರುವ ಮಹಿಳೆಯರ ಪೈಕಿ ಶೇ 70ರಿಂದ 75ರಷ್ಟು ಮಂದಿ ಯೋಜನೆಯ ವ್ಯಾಪ್ತಿಗೆ ಬರುವ ನಿರೀಕ್ಷೆಯಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಯೋಜನೆಗೆ ಸುಮಾರು ₹30 ಸಾವಿರ ಕೋಟಿ ಅಗತ್ಯವಿದೆ ಎಂದು ಇಲಾಖೆ ಅಂದಾಜಿಸಿದೆ.
‘ಬೆಂಗಳೂರು ಒನ್, ಗ್ರಾಮ ಒನ್, ನಾಡ ಕಚೇರಿಗಳಲ್ಲೂ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಇರಲಿದೆ, ಸೇವಾ ಸಿಂಧು ಪೋರ್ಟಲ್ ಮೂಲಕವೂ ಅರ್ಜಿ ಸ್ವೀಕರಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.
ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ತಲಾ 5 ಕೆ.ಜಿ ಅಕ್ಕಿಯ ಹಣವನ್ನು ಜುಲೈ 10ರಿಂದ ಪಾವತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಅನ್ನ ಭಾಗ್ಯ ಮತ್ತು ಗೃಹ ಜ್ಯೋತಿ ಎರಡೂ ಯೋಜನೆಗಳು ಜುಲೈ ತಿಂಗಳಲ್ಲೇ ಅನುಷ್ಠಾನಕ್ಕೆ ಬರುತ್ತಿವೆ. ಗೃಹ ಜ್ಯೋತಿ ಯೋಜನೆ ಶನಿವಾರದಿಂದಲೇ ಜಾರಿಯಾಗಿದೆ. ಈ ಯೋಜನೆಯಡಿ ಮೊದಲ ವಿದ್ಯುತ್ ಬಿಲ್ ಅನ್ನು ಆಗಸ್ಟ್ ತಿಂಗಳಿನಲ್ಲಿ ನೀಡಲಾಗುವುದು’ ಎಂದು ಹೇಳಿದರು.
‘ಅನ್ನ ಭಾಗ್ಯ ಯೋಜನೆಯ ಈ ತಿಂಗಳ ಬಾಬ್ತಿನ ಹಣವನ್ನು ಇದೇ ತಿಂಗಳಲ್ಲಿ ಪಾವತಿಸುತ್ತೇವೆ. ಜುಲೈ 10ರ ನಂತರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.