ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರು, ಐಶಾರಾಮಿ ಕಾರು ಇರುವವರ ಬಳಿಯೂ ಬಿಪಿಎಲ್ ಕಾರ್ಡ್

Published 30 ಮೇ 2023, 17:18 IST
Last Updated 30 ಮೇ 2023, 17:18 IST
ಅಕ್ಷರ ಗಾತ್ರ

–ಶಹೀನ್ ಮೊಕಾಶಿ

ಬೆಂಗಳೂರು: ಕಳೆದ ಎರಡು ವರ್ಷಗಳಲ್ಲಿ ಅಕ್ರಮ ಪಡಿತರ ಚೀಟಿದಾರರ ವಿರುದ್ಧ ರಾಜ್ಯದಾದ್ಯಂತ ನಡೆಸಿದ ಕಾರ್ಯಾಚರಣೆಯಲ್ಲಿ ಸರ್ಕಾರಿ ನೌಕರರು ಮತ್ತು ಐಷಾರಾಮಿ ಕಾರು ಮಾಲೀಕರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವುದು ಕಂಡುಬಂದಿದೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಜನವರಿ, 2021ರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ₹13 ಕೋಟಿ ದಂಡವನ್ನು ಸಂಗ್ರಹಿಸಿತ್ತು, ಇದರಲ್ಲಿ ಕೇವಲ 17,521 ಸರ್ಕಾರಿ ನೌಕರರಿಂದ ₹11ಕೋಟಿ ದಂಡ ವಸೂಲಿ ಮಾಡಲಾಗಿದೆ.

ಅನರ್ಹರಾಗಿದ್ದರೂ ಅಂತ್ಯೋದಯ ಅನ್ನ ಯೋಜನೆ (ಎವೈವೈ) ಮತ್ತು ಆದ್ಯತಾ ಕುಟುಂಬಗಳ (ಪಿಎಚ್‌ಎಚ್) ಕಾರ್ಡ್‌ಗಳನ್ನು ಹೊಂದಿರುವ 4.63 ಲಕ್ಷ ಕುಟುಂಬಗಳನ್ನು ಇಲಾಖೆ ಇದುವರೆಗೆ ಗುರುತಿಸಿದೆ.

ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಕುಟುಂಬಗಳು, ಸರ್ಕಾರಿ ನೌಕರರು, ಇತರ ಆದಾಯ ತೆರಿಗೆ ಪಾವತಿದಾರರು, ಸಾರ್ವಜನಿಕ ವಲಯದ ಸಂಸ್ಥೆಗಳು (ಪಿಎಸ್‌ಯು) ಅಥವಾ ಸರ್ಕಾರಿ ನೆರವಿನ ಸ್ವಾಯತ್ತ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್‌ಗಿಂತ ಹೆಚ್ಚು ಭೂಮಿ ಹೊಂದಿರುವ ಕುಟುಂಬಗಳು ಮತ್ತು ₹1.2 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್‌ಗಳಿಗೆ ಅನರ್ಹರಾಗಿರುತ್ತಾರೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಆಯುಕ್ತ (ಪ್ರಭಾರ) ಮತ್ತು ವಿಜಿಲೆನ್ಸ್ ಹಾಗೂ ಐಟಿ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹೇಳುತ್ತಾರೆ.

ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ(ಎಚ್‌ಆರ್‌ಎಂಎಸ್) ಡೇಟಾಬೇಸ್ ಬಳಸಿ ಸರ್ಕಾರಿ ನೌಕರರನ್ನು ಗುರುತಿಸಲಾಗಿದ್ದು, ಆಧಾರ್ ವಿವರಗಳೊಂದಿಗೆ ವಿವರಗಳನ್ನು ಪರಿಶೀಲಿಸಲಾಗಿದೆ.

ಹೆಚ್ಚುವರಿಯಾಗಿ, ನಾಲ್ಕು ಚಕ್ರ ವಾಹನಗಳನ್ನು ಹೊಂದಿರುವ ಕುಟುಂಬಗಳು ಪಿಎಚ್‌ಎಚ್‌ ಕಾರ್ಡ್ ಪಡೆದಿರುವುದನ್ನು ಗುರುತಿಸಲು ಇಲಾಖೆಯು ಪ್ರಾದೇಶಿಕ ಸಾರಿಗೆ ಕಚೇರಿಗಳೊಂದಿಗೆ ಕೆಲಸ ಮಾಡಿದೆ. ಆಶ್ಚರ್ಯಕರವಾಗಿ, 12,012 ಐಷಾರಾಮಿ ಕಾರು ಮಾಲೀಕರು ಪಿಎಚ್‌ಎಚ್‌ ಕಾರ್ಡ್‌ಗಳನ್ನು ಹೊಂದಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

‘ಕಾರ್ಡ್ ಹೊಂದಿರುವ ಅನರ್ಹರಿಗೆ ಇಲಾಖೆಯು ನೋಟಿಸ್‌ಗಳನ್ನು ನೀಡಿದ್ದು, ದಂಡ ಪಾವತಿಸಿದ ನಂತರ ಕಾರ್ಡ್‌ಗಳನ್ನು ಹಿಂತಿರುಗಿಸುವಂತೆ ಅಥವಾ ಪರಿವರ್ತಿಸುವಂತೆ ಸೂಚಿಸಿದೆ’ ಎಂದು ಅವರು ಹೇಳಿದರು.

ನಿಯಮ ಉಲ್ಲಂಘಿಸಿದವರ ಪಾವತಿ ಸಾಮರ್ಥ್ಯ ಮತ್ತು ಮಾರ್ಗಸೂಚಿಗಳ ಉಲ್ಲಂಘನೆಯ ಆಧಾರದ ಮೇಲೆ ದಂಡವನ್ನು ಸಂಗ್ರಹಿಸಲಾಗುತ್ತಿದೆ ಎಂದು ಗಂಗ್ವಾರ್ ಹೇಳಿದ್ದಾರೆ.

ಆದ್ದರಿಂದ, ಇತರ ಆದಾಯ ತೆರಿಗೆ ಪಾವತಿದಾರರಿಂದ (ಸರ್ಕಾರಿ ನೌಕರರನ್ನು ಹೊರತುಪಡಿಸಿ) ₹88 ಲಕ್ಷ, ದೂರುಗಳ ಆಧಾರದ ಮೇಲೆ ಅನರ್ಹ ಕಾರ್ಡುದಾರರಿಂದ ₹85 ಲಕ್ಷ ಮತ್ತು ನಾಲ್ಕು ಚಕ್ರದ ಮಾಲೀಕರಿಂದ ₹28 ಲಕ್ಷ ದಂಡ ವಸೂಲಿ ಆಗಿದೆ.

‘4.63 ಲಕ್ಷ ಅನರ್ಹ ಕಾರ್ಡ್ ಹೊಂದಿರುವವರ ಪೈಕಿ 3.33 ಲಕ್ಷ ಕಾರ್ಡ್‌ಗಳನ್ನು ಅರ್ಹತಾ ಮಾನದಂಡಗಳನ್ನು ಅನುಸರಿಸಿ ಎಪಿಎಲ್‌ಗೆ ಮೇಲ್ದರ್ಜೆಗೇರಿಸಲಾಗಿದೆ. ಪಡಿತರ ಚೀಟಿಗಳ ದುರುಪಯೋಗವನ್ನು ತಡೆಯಲು ಇಲಾಖೆಯು ನಿಯಮಿತವಾಗಿ ಕಾರ್ಯಾಚರಣೆ ನಡೆಸುತ್ತದೆ’ಎಂದು ಗಂಗ್ವಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT