ಕಲಬುರಗಿ: ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಆಸ್ತಿಗಳ ತೆರಿಗೆ ವಸೂಲಿ ಪ್ರಮಾಣ ಶೇ 58ಕ್ಕೆ ಹೆಚ್ಚಳವಾಗಿದೆ. ಶೇ 50ರಷ್ಟು ಹೆಚ್ಚುವರಿ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆರಿಗೆ ವಸೂಲಿಗೆ ಗುರಿ ನಿಗದಿ ಮಾಡುವುದರ ಜೊತೆಗೆ ತೆರಿಗೆ ಹಣವನ್ನು ಆನ್‌ಲೈನ್ ಮೂಲಕ ಪಾವತಿಸಲು ಅನುವಾಗಲು ಪಿಒಎಸ್ ಸಾಧನಗಳನ್ನು ನೀಡಲಾಗಿದೆ. ಇದರಿಂದಾಗಿ ತೆರಿಗೆ ಪ್ರಮಾಣ ಹೆಚ್ಚಳವಾಗುತ್ತಿದೆ ಎಂದರು.
ಮುಂಚೆ ತೆರಿಗೆ ಪಾವಸದೇ ಇದ್ದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಿದ್ದರಿಂದ ತೆರಿಗೆ ಸಂಗ್ರಹ ಕ್ರಮೇಣ ಸುಧಾರಣೆಯಾಗುತ್ತಿದೆ ಎಂದರು.
ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ರಾಜ್ಯ ಸರ್ಕಾರವನ್ನು ಬುಡಮೇಲು ಮಾಡಲು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆದರೆ ರಾಜ್ಯದ ಸಿದ್ದರಾಮಯ್ಯ ಸರ್ಕಾರ ಸುಭದ್ರವಾಗಿದೆ. ಎಂ.ಬಿ. ಪಾಟೀಲ ಅವರೇ ಈಗ ಸಿ.ಎಂ. ಕುರ್ಚಿ ಖಾಲಿ ಇಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಮುಂದಿನ ದಿನಗಳಲ್ಲಿ ತಾವು ಸಿಎಂ ಆಕಾಂಕ್ಷಿ ಎಂದು ಹೇಳಿದ್ದಾರೆಯೇ ಹೊರತು ಈಗಲೇ ತಮಗೆ ಸಿಎಂ ಪಟ್ಟ ಬೇಕು ಎಂದಿಲ್ಲ. ಎಂ.ಬಿ. ಪಾಟೀಲ ಅವರ ಮಾತುಗಳನ್ನು ಇಡಿಯಾಗಿ ಗ್ರಹಿಸುವ ಬದಲು ಒಂದು ಎಳೆ ಇಟ್ಟುಕೊಂಡು ಮಾಧ್ಯಮಗಳು ವರದಿ ಮಾಡುತ್ತಿವೆ ಎಂದರು.
ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನಲ್ಲಿ ಭೂಮಿಯನ್ನು ನಿಯಮಾನುಸಾರವೇ ಖರೀದಿಸಲಾಗಿದೆ. ಕೈಗಾರಿಕಾ ಸಚಿವರು ಸ್ಪಷ್ಟಪಡಿಸಿದ ಬಳಿಕ ಬಿಜೆಪಿಯವರ ಧ್ವನಿ ಕ್ಷೀಣವಾಗಿದೆ. ಅವರಿಗೆ ಪ್ರಿಯಾಂಕ್ ಖರ್ಗೆ ಹೆಸರೇ ಸಮಸ್ಯೆಯಾಗಿ ಕಾಡುತ್ತಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರ ವಿರುದ್ಧ ಸಲ್ಲಿಕೆಯಾದ ದೂರನ್ನು ರಾಜ್ಯಪಾಲರು ತಮ್ಮ ಕಚೇರಿಯಲ್ಲೇ ಅನುವಾದ ಮಾಡಿಸಿಕೊಂಡರು. ಆದರೆ, ಕುಮಾರಸ್ವಾಮಿ ವಿರುದ್ಧದ ದೂರನ್ನು ಅನುವಾದಿಸಿಕೊಡಲು ಸರ್ಕಾರಕ್ಕೆ ಕಳಿಸಿದ್ದಾರೆ. ಈ ದೂರನ್ನೂ ತಮ್ಮ ಸಿಬ್ಬಂದಿಯಿಂದ ಅನುವಾದ ಮಾಡಿಸಿಕೊಳ್ಳಲು ಅಡ್ಡಿ ಏನು ಎಂದು ಪ್ರಿಯಾಂಕ್ ಪ್ರಶ್ನಿಸಿದರು.
ಕಲಬುರಗಿ ಜಿಲ್ಲೆಯ ರಸ್ತೆಗಳು ಮಳೆಯಿಂದ ಹಾಳಾಗಿರುವುದು ಗಮನಕ್ಕೆ ಬಂದಿದ್ದು, ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ರಸ್ತೆ ದುರಸ್ತಿಗಾಗಿ ₹2 ಕೋಟಿ ಹಂಚಿಕೆ ಮಾಡಲಾಗಿದೆ. ಮಳೆ ಕಡಿಮೆಯಾದ ಬಳಿಕ ದುರಸ್ತಿ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.