ಬೆಂಗಳೂರು: ‘ಜಾಮೀನಿನ ಮೇಲೆ ಹೊರಗೆ ಇರುವ ಆರೋಪಿ ಎಚ್.ಡಿ. ಕುಮಾರಸ್ವಾಮಿ ನನ್ನ ವಿರುದ್ಧ ಅವಹೇಳನಕಾರಿ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಜತೆಗೆ ಬೆದರಿಕೆಯನ್ನೂ ಹಾಕಿದ್ದಾರೆ’ ಎಂದು ಲೋಕಾಯುಕ್ತ ವಿಶೇಷ ತನಿಖಾ ತಂಡದ ಎಡಿಜಿಪಿ ಎಂ.ಚಂದ್ರಶೇಖರ್ ತಮ್ಮ ಸಹೋದ್ಯೋಗಿಗಳಿಗೆ ಶನಿವಾರ ಪತ್ರ ಬರೆದಿದ್ದಾರೆ.
ಕುಮಾರಸ್ವಾಮಿ ಮಾಡಿದ ಆರೋಪಗಳನ್ನು ಅಲ್ಲಗೆಳೆದಿರುವ ಅವರು, ‘ಎಷ್ಟೇ ಪ್ರಭಾವಿಯಾಗಿ
ದ್ದರೂ ಅವರು ಆರೋಪಿ. ನಿಷ್ಪಕ್ಷಪಾತ ತನಿಖೆಯಿಂದ ನಮ್ಮನ್ನು ಹಿಮ್ಮೆಟ್ಟಿಸಲು ಈ ತಂತ್ರ ಅನುಸರಿಸುತ್ತಿದ್ದಾರೆ. ನಿಮ್ಮ ಮೇಲೆ ಇಂತಹ ಬಾಹ್ಯ ಒತ್ತಡಗಳು ಬರದೇ ಇರುವ ರೀತಿಯಲ್ಲಿ ಎಚ್ಚರವಹಿ ಸುತ್ತೇನೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.
‘ಹಂದಿಗಳೊಂದಿಗೆ ಎಂದಿಗೂ ಗುದ್ದಾಡಬೇಡಿ. ಗುದ್ದಾಡಿದರೆ ಹೊಲಸು ನಿಮಗೂ ಮೆತ್ತಿಕೊಳ್ಳುತ್ತದೆ, ಹಂದಿಗೂ ಮೆತ್ತಿಕೊಳ್ಳುತ್ತದೆ. ಆದರದು ಹಂದಿಗೆ ಇಷ್ಟವಾಗುತ್ತದೆ’ ಎಂದು ಜಾರ್ಜ್ ಬರ್ನಾರ್ಡ್ ಶಾ ಮಾತನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ‘ಕರ್ತವ್ಯ ನಿರ್ವಹಣೆ ಯಲ್ಲಿ ಅಪರಾಧಿಗಳು, ಆರೋಪಿಗಳನ್ನು ಎದುರು ಹಾಕಿಕೊಳ್ಳದೇ ಇರಲು ಸಾಧ್ಯವಿಲ್ಲ. ಆದರೆ, ನಾವು ನಮ್ಮ ಹಾದಿಯನ್ನು ಬಿಡಬಾರದು’ ಎಂದು ಹೇಳಿದ್ದಾರೆ.