ಬೆಂಗಳೂರು: ‘ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳ ಮಧ್ಯದ ವ್ಯಾಜ್ಯಗಳನ್ನು ಸೂಕ್ತ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಬೇಕೇ ಹೊರತು ಕೋರ್ಟ್ ಮೊರೆ ಹೋಗುವುದು ಸರಿಯಲ್ಲ’ ಎಂದು ಹೈಕೋರ್ಟ್ ಹೇಳಿದೆ.
ಬಿನ್ನಿಪೇಟೆಯಲ್ಲಿನ ಹಣ್ಣು, ಹೂವು ಮತ್ತು ತರಕಾರಿ ಕುರಿತ ವಿಶೇಷ ಎಪಿಎಂಸಿಯ ಕಾರ್ಯದರ್ಶಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಭೂ ಸ್ವಾಧೀನ ಪರಿಹಾರ ಸಂಬಂಧಿತ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ಮಧ್ಯದ ಈ ವ್ಯಾಜ್ಯವನ್ನು ಮೂರು ತಿಂಗಳಲ್ಲಿ ಪರಿಹರಿಸಬೇಕು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಗೆ ನಿರ್ದೇಶಿಸಿದೆ.
‘ಕೋರ್ಟ್‌ಗಳು ಈಗಾಗಲೇ ಪ್ರಕರಣಗಳ ಭಾರದಿಂದ ನಲುಗುತ್ತಿವೆ. ಆದ್ದರಿಂದ, ರಾಜ್ಯ ಸರ್ಕಾರ ಮತ್ತು ಅದರ ಅಂಗಸಂಸ್ಥೆಗಳ ಮಧ್ಯದ ವ್ಯಾಜ್ಯಗಳನ್ನು ಪ್ರತ್ಯೇಕ ವೇದಿಕೆಗಳಲ್ಲಿ ಬಗೆಹರಿಸಿಕೊಳ್ಳಬೇಕು. ಅವುಗಳನ್ನು ಕೋರ್ಟ್‌ಗಳ ಮುಂದೆ ತರುವುದು ಸರಿಯಲ್ಲ. ಸಾಧ್ಯವಾದಷ್ಟೂ ಕೋರ್ಟ್‌ಗಳಲ್ಲಿರುವ ವ್ಯಾಜ್ಯಗಳ ಹೊರೆಯನ್ನು ಇಳಿಸುವುದಕ್ಕೆ ಸರ್ಕಾರ ಸಹಕರಿಸಬೇಕಿದೆ’ ಎಂದು ಹೇಳಿದೆ.
‘ರಾಜ್ಯ ಸರ್ಕಾರ ಮತ್ತು ಅದರ ಅಂಗಸಂಸ್ಥೆಗಳ ನಡುವೆ ವ್ಯಾಜ್ಯಗಳಿದ್ದ ಸಂದರ್ಭದಲ್ಲಿ ಅವುಗಳನ್ನು ಪರಿಹರಿಸಲು ಕರ್ನಾಟಕ ರಾಜ್ಯ ವ್ಯಾಜ್ಯ ಪರಿಹಾರ ನೀತಿ-2021 ಅನ್ನು ಅಳವಡಿಸಿಕೊಳ್ಳಲಾಗಿದೆ. ಅದರಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಈ ವ್ಯಾಜ್ಯವನ್ನು ಪರಿಹರಿಸಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.