ಬೆಂಗಳೂರು: ‘ಬಾಲ್ಯ ವಿವಾಹವನ್ನು (18 ವರ್ಷಕ್ಕಿಂತ ಕಡಿಮೆ) ಕಾನೂನು ನಿಷೇಧಿಸಿದೆ ಎಂಬ ಫಲಕಗಳನ್ನು ದೇವಸ್ಥಾನಗಳು, ವಿವಾಹ ಮಂಟಪಗಳು ಮತ್ತು ಅಂತಹುದೇ ಇತರ ಸ್ಥಳಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು’ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

‘ನಮ್ಮ ವಿರುದ್ಧ ದೇವನಹಳ್ಳಿ ಕೋರ್ಟ್ನಲ್ಲಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಎನ್.ಮಂಜುನಾಥ (ಬಾಲಕಿಯ ಗಂಡ) ಸೇರಿದಂತೆ ಕುಟುಂಬದ ಒಟ್ಟು ಐವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿ ಈ ಕುರಿತಂತೆ ಆದೇಶಿಸಿದೆ.

‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ, 2012 (ಪೋಕ್ಸೊ) ಅಥವಾ ಬಾಲ್ಯವಿವಾಹ ನಿಷೇಧ ಕಾಯ್ದೆ–2006ರ ನಿಬಂಧನೆಗಳ ಅಡಿಯಲ್ಲಿ ಉದ್ಭವಿಸುತ್ತಿರುವ ಮೊಕದ್ದಮೆಗಳ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ನ್ಯಾಯಪೀಠ ಇದೇ ವೇಳೆ ತೀವ್ರ ಕಳವಳ ವ್ಯಕ್ತಪಡಿಸಿದೆ.

‘ಬಾಲ್ಯ ವಿವಾಹ ನಿರ್ಮೂಲನೆ ಕೇವಲ ಶಾಸನಬದ್ಧ ಗುರಿಯಲ್ಲ, ಇದು ಸಾಂವಿಧಾನಿಕವಾಗಿ ಕಡ್ಡಾಯವಾದ ಅಂಶ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಸಮಾಜವನ್ನು ಸಂವೇದನಾಶೀಲಗೊಳಿಸುವಲ್ಲಿ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ತಮ್ಮ ಪಾತ್ರವನ್ನು ಇನ್ನಷ್ಟು ಕಾಳಜಿಯಿಂದ ನಿರ್ವಹಿಸಬೇಕು’ ಎಂದು ಸೂಚಿಸಿದೆ.

‘ಬಾಲ್ಯವಿವಾಹ ಎಂಬುದು ಸೌಮ್ಯವಾದ ಸಾಂಸ್ಕೃತಿಕ ಪದ್ಧತಿಯೇನೂ ಅಲ್ಲ. ಬದಲಾಗಿ ಮೂಲಭೂತ ಮಾನವ ಹಕ್ಕುಗಳ ನಿರಾಕರಣೆ. ಇದು ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸುತ್ತದೆ. ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಮಗುವನ್ನು ಭಾವನಾತ್ಮಕ, ಸಾಮಾಜಿಕ ಮತ್ತು ಆರ್ಥಿಕ ಶೋಷಣೆಗೆ ಒಳಪಡಿಸುತ್ತದೆ. ಈ ದಿಸೆಯಲ್ಲಿ ದೊಡ್ಡವರು ಮಕ್ಕಳ ಕಲಿಕೆ, ಸ್ವಯಂ ಅನ್ವೇಷಣೆ ಮತ್ತು ಬೌದ್ಧಿಕ ವಿಕಸನದ ಬೆಳವಣಿಗೆಯ ವರ್ಷಗಳಲ್ಲಿ ತಮ್ಮ ಜವಾಬ್ದಾರಿಯನ್ನು ಮೆರೆಯುವ ಮೂಲಕ ಅವರ ಭವ್ಯ ಭವಿಷ್ಯವನ್ನು ರೂಪಿಸಲು ಅನುವು ಮಾಡಿಕೊಡಬೇಕು’ ಎಂದು ಹೇಳಿದೆ.

ತೀರ್ಪಿನಲ್ಲಿ ಕೇರಳ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ‘ಬಾಲ್ಯ ವಿವಾಹವು ಹೆಚ್ಚಾಗಿ ಹುಡುಗಿಯರು ಶಾಲೆಯನ್ನು ತೊರೆಯುವಂತೆ ಮಾಡುತ್ತದೆ. ಇದು ಅವರ ಶಿಕ್ಷಣ ಮತ್ತು ಭವಿಷ್ಯದ ಅವಕಾಶಗಳನ್ನು ಸೀಮಿತಗೊಳಿಸುತ್ತದೆ. ಬಾಲ್ಯ ವಧುಗಳು ಕೌಟುಂಬಿಕ ಹಿಂಸೆ ಮತ್ತು ದೌರ್ಜನ್ಯಕ್ಕೆ ಹೆಚ್ಚು ಗುರಿಯಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದೆ.

‘ಇದು ಬಡತನವನ್ನು ಶಾಶ್ವತಗೊಳಿಸುತ್ತದೆ ಮತ್ತು ವ್ಯಕ್ತಿಗಳು ಮತ್ತು ಸಮುದಾಯಗಳಿಗೆ ಆರ್ಥಿಕ ಅವಕಾಶಗಳನ್ನು ಸೀಮಿತಗೊಳಿಸುತ್ತದೆ. ಮಕ್ಕಳಲ್ಲಿ ಖಿನ್ನತೆ ಮತ್ತು ಆತಂಕವೂ ಸೇರಿದಂತೆ ಭಾವನಾತ್ಮಕ ಮತ್ತು ಮಾನಸಿಕ ಆಘಾತಗಳಿಗೆ ಕಾರಣವಾಗಬಹುದು. ಸಾಮಾಜಿಕ ಪ್ರತ್ಯೇಕತೆ ಮತ್ತು ಕುಟುಂಬ ಮತ್ತು ಸಮುದಾಯದಿಂದ ಸಂಪರ್ಕ ಕಡಿತಕ್ಕೂ ಕಾರಣವಾಗಬಹುದು’ ಎಂದು ತಿಳಿಸಿದೆ.

‘ದಂಪತಿ ಸಾಮರಸ್ಯ ಬದುಕುತ್ತಿದ್ದಾರೆ ಎಂದು ಅರ್ಥೈಸುವುದನ್ನು ಒಪ್ಪಲು ಸಾಧ್ಯವಿಲ್ಲ. ಬಾಲ್ಯವಿವಾಹ ನಡೆಯದಂತೆ ನೋಡಿಕೊಳ್ಳಬೇಕಾದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಬಾಲ್ಯವಿವಾಹ ನಡೆಯುವ ಸಾಧ್ಯತೆಯ ಬಗ್ಗೆ ಯಾವುದೇ ಮಾಹಿತಿ ಬಂದರೆ, ಬಾಲ್ಯವಿವಾಹ ನಿಷೇಧ ಅಧಿಕಾರಿಗೆ ತಿಳಿಸುವುದು ಸರ್ಕಾರೇತರ ಸಂಸ್ಥೆಗಳ ಕರ್ತವ್ಯವೂ ಆಗಿದೆ. ನ್ಯಾಯಾಂಗ ಅಧಿಕಾರಿಗಳು, ಮ್ಯಾಜಿಸ್ಟ್ರೇಟ್ ಕೂಡ ಜಾಗರೂಕರಾಗಿರಬೇಕು. ಈ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿ ಅಥವಾ ಮಾಹಿತಿ ಬಂದರೆ ಸ್ವಯಂಪ್ರೇರಿತವಾಗಿ ಗಮನ ಹರಿಸಬೇಕು’ ಎಂದು ನಿರ್ದೇಶಿಸಿದೆ. ಪ್ರಾಸಿಕ್ಯೂಷನ್ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ವಾದ ಮಂಡಿಸಿದ್ದರು.

ಪ್ರಕರಣ: ‘ಕೋವಿಡ್ ಸಾಂಕ್ರಾಮಿಕ ಯಾರನ್ನು ಯಾವಾಗ ಬಲಿತೆಗೆದುಕೊಳ್ಳುವುದೋ ಏನೊ; ನಾವು ಕಣ್ಮುಚ್ಚುವುದರೊಳಗೆ ಈಕೆಯ ಮದುವೆ ಮಾಡಿಬಿಡೋಣ’ ಎಂದು 16 ವರ್ಷದ ಬಾಲಕಿಯನ್ನು 27ರ ವರನಿಗೆ ಕೊಟ್ಟು 2021ರಲ್ಲಿ ಮದುವೆ ಮಾಡಿದ್ದ ಕುಟುಂಬದ ವಿರುದ್ಧ ದೇವನಹಳ್ಳಿ ತಾಲ್ಲೂಕು, ಶಿಶು ಅಭಿವೃದ್ಧಿ ಯೋಜನಾ ನೀಡಿದ್ದ ದೂರಿನ ಅನ್ವಯ ಐವರು ಸದಸ್ಯರು ಈಗ ವಿಚಾರಣೆ ಎದುರಿಸುವಂತಾಗಿದೆ.

ಪುರೋಹಿತರೂ ಕಂಬಿ ಎಣಿಸಬೇಕಾಗುತ್ತದೆ..!

‘ಬಾಲ್ಯ ವಿವಾಹ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಮತ್ತು ಸಂಪ್ರದಾಯಗಳ ಸ್ಪಷ್ಟ ಉಲ್ಲಂಘನೆ. ಇದು ಖಾಸಗಿ ಕುಟುಂಬದ ನಿಶ್ಚಿತಾರ್ಥವಲ್ಲ. ಸಾಮಾಜಿಕ ತಪ್ಪು ನಡೆ. ಇಂತಹ ಮದುವೆಗಳಲ್ಲಿನ ಭಾಗವಹಿಸುವಿಕೆ ಪ್ರತಿಯೊಂದು ಹಂತದಲ್ಲೂ ಹೊಣೆಗಾರಿಕೆಯನ್ನು ಬೇಡುತ್ತದೆ’ ಎಂದು ನ್ಯಾಯಪೀಠ ತಿಳಿ ಹೇಳಿದೆ.

‘ಬಾಲ್ಯ ವಿವಾಹ ನಡೆಸುವ, ನಿರ್ದೇಶಿಸುವ ಅಥವಾ ಪ್ರಚೋದಿಸುವ ಯಾರಾದರೂ ಆಗಲಿ ಅದಕ್ಕೆ ಸಮಾನ ಹೊಣೆಗಾರರಾಗುತ್ತಾರೆ. ಸಮಾರಂಭವನ್ನು ಆಚರಿಸುವ ಪುರೋಹಿತ, ಅದನ್ನು ಏರ್ಪಡಿಸುವ ಸಂಬಂಧಿ, ಅದನ್ನು ಸುಗಮಗೊಳಿಸುವ ಆಯೋಜಕರು ಸೇರಿದಂತೆ ಎಲ್ಲರೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಚೌಕಟ್ಟಿನಲ್ಲಿ ಶಿಕ್ಷಾರ್ಹ ಅಪರಾಧಿಗಳಾಗಿ ಕಂಬಿ ಎಣಿಸಬೇಕಾಗುತ್ತದೆ. ಕಾನೂನು ಅಜ್ಞಾನವನ್ನು ಕ್ಷಮಿಸುವುದಿಲ್ಲ. ಹಾಗಾಗಿ, ವಿವಾಹಗಳು ಜರುಗುವ ಪ್ರತಿಯೊಂದು ಸ್ಥಳದಲ್ಲಿ ಕ್ರಿಮಿನಲ್ ಹೊಣೆಗಾರಿಕೆಯ ಅರಿವು ಇರುವಂತೆ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ನೋಡಿಕೊಳ್ಳತಕ್ಕದ್ದು’ ಎಂದು ಎಚ್ಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.