ಬೆಂಗಳೂರು: ‘ದೋಷಾರೋಪ ಹೊರಿಸಿ ಸಾಕ್ಷಿ ವಿಚಾರಣೆ ನಡೆಸಲು 2023ರ ಏಪ್ರಿಲ್ 20ರಂದು ಸೆಷನ್ಸ್ ನ್ಯಾಯಾಲಯ ನೀಡಿರುವ ಆದೇಶ ದೋಷಪೂರಿತವಾಗಿದೆ ಎಂಬ ಅರ್ಜಿಗಳ ಮೇಲಿನ ನಿಮ್ಮ ವಾದವನ್ನು ಆದಷ್ಟು ಬೇಗ ಮುಗಿಸಿಬಿಡಿ. ಏನೇ ಇದ್ದರೂ ಅದನ್ನು ಮುಂದಿನ ವಿಚಾರಣೆಯಲ್ಲಿ ನಾನು ಸಂಪೂರ್ಣ ಆಲಿಸಿ ಆಖೈರುಗೊಳಿಸುತ್ತೇನೆ. ಪುನಃ ಸಮಯ ಕೇಳಬೇಡಿ...‘
ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದ ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯ್ದೆ, ಧಾರ್ಮಿಕ ಸಂಸ್ಥೆಗಳ ದುರ್ಬಳಕ ತಡೆ ಕಾಯ್ದೆ ಮತ್ತು ಸಾಕ್ಷ್ಯ ನಾಶ ಕುರಿತಾದ ಆರೋಪಗಳಿಗೆ ಸಂಬಂಧಿಸಿದ ಸೆಷನ್ಸ್ ಕೋರ್ಟ್ ವಿಚಾರಣೆಗೆ ನೀಡಲಾಗಿದ್ದ ತಡೆಯಾಜ್ಞೆ ವಿಸ್ತರಿಸುವ ಮುನ್ನ ಶರಣರ ಪರ ವಕೀಲರಿಗೆ ಹೈಕೋರ್ಟ್ ಮಾಡಿದ ತಾಕೀತು ಇದು.
ಈ ಸಂಬಂಧ ಆರೋಪಿ ಶಿವಮೂರ್ತಿ ಶರಣರು ಸಲ್ಲಿಸಿರುವ ನಾಲ್ಕು ಕ್ರಿಮಿನಲ್ ಅರ್ಜಿಗಳನ್ನು (ಸಿಆರ್‌ಎಲ್‌ಪಿ:4511/2023, ಸಿಆರ್‌ಎಲ್‌ಪಿ:4388/2023, ಸಿಆರ್‌ಎಲ್‌ಪಿ:4391/2023 ಮತ್ತು ಸಿಆರ್‌ಎಲ್‌ಪಿ:4513/2023) ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಆರೋಪಿ ಶರಣರ ಪರ ವಕೀಲ ಪಿ.ಎನ್. ಹೆಗ್ಡೆ, ‘ಶರಣರ ವಿರುದ್ಧ ದಾಖಲಿಸಿರುವ ಎರಡನೇ ದೂರಿಗೆ ಸಂಬಂಧಿಸಿದ ಪ್ರಕರಣದಲ್ಲಿ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ 207ರ ಪ್ರಕಾರ ವಿಚಾರಣಾ ನ್ಯಾಯಾಲಯವು; ಆರೋಪಿಗೆ ಪೊಲೀಸ್ ವರದಿಯ ನಕಲು ಮತ್ತು ಇತರ ದಾಖಲೆಗಳನ್ನು ಸರಬರಾಜು ಮಾಡಿಲ್ಲ‘ ಎಂದು ಆಕ್ಷೇಪಿಸಿದರು. ಅಂತೆಯೇ, ‘ಉಳಿದ ಇನ್ನೆರಡು ಪ್ರಕರಣಗಳಲ್ಲಿ ಹಿರಿಯ ವಕೀಲರು ಬಂದು ವಾದ ಮಾಡಬೇಕಿದ್ದು, ಅವರು ವೈಯಕ್ತಿಕ ಕಾರಣಗಳಿಂದ ಹಾಜರಾಗಿಲ್ಲ. ಹೀಗಾಗಿ, ಸಾಕ್ಷಿ ವಿಚಾರಣೆಗೆ ನೀಡಲಾಗಿರುವ ತಡೆಯಾಜ್ಞೆ ವಿಸ್ತರಿಸಿ ಇನ್ನೂ 10 ದಿನಗಳ ಕಾಲಾವಕಾಶ ನೀಡಬೇಕು‘ ಎಂದು ಕೋರಿದರು.
ಇದಕ್ಕೆ ಕೊಂಚ ಅತೃಪ್ತಿಯಿಂದಲೇ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಅಂತಿಮ ವರದಿಯಲ್ಲಿನ ದೋಷಗಳನ್ನು ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಹೊರತುಪಡಿಸಿ, ಉಳಿದಂತೆ ಪೊಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಪ್ರಕರಣದ ವಿಚಾರಣೆ ಮುಂದುವರಿಯಲಿ. ಸಾಕ್ಷಿ ವಿಚಾರಣೆಯಲ್ಲಿ ಒಮ್ಮೆ ವಿಚಾರಣೆ ಆರಂಭವಾದರೆ ಅದನ್ನು ನಿಲ್ಲಿಸಲು ಆಗುವುದಿಲ್ಲವಲ್ಲಾ, ಈ ಮಾತನ್ನು ನಾನು ಈ ಹಿಂದೆಯೂ ಹೇಳಿದ್ದೇನಲ್ಲಾ‘ ಎಂದರು.
ಇದೇ ವೇಳೆ ರಾಜ್ಯ ಪ್ರಾಸಿಕ್ಯೂಷನ್ ಪರ ಹಾಜರಿದ್ದ ಕೆ.ಪಿ.ಯಶೋದಾ, ‘ರಾಜ್ಯ ಪ್ರಾಸಿಕ್ಯೂಟರ್ ಹುದ್ದೆಗಳಿಗೆ ನಿನ್ನೆಯಷ್ಟೇ (ಜು.10) ಹೊಸ ನೇಮಕ ನಡೆದಿರುವ ಕಾರಣ; ಪ್ರಾಸಿಕ್ಯೂಷನ್ ಪ್ರತಿನಿಧಿಸಲು ಇನ್ನೊಂದಿಷ್ಟು ಸಮಯ ಬೇಕು‘ ಎಂದು ಮನವಿ ಮಾಡಿದರು.
‘ಮುಂದಿನ ಮುದ್ದತಿನಂದು ನೀವು ವಾದ ಮಂಡಿಸಲು ತಯಾರಿರಬೇಕು. ಆವತ್ತು ವಿಚಾರಣೆ ಮುಗಿಸುತ್ತೇನೆ‘ ಎಂದು ಆರೋಪಿ ಪರ ವಕೀಲರಿಗೆ ತಾಕೀತು ಮಾಡಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿದರು.
ಪ್ರಕರಣವೇನು?: ಶಿವಮೂರ್ತಿ ಶರfಣರ ವಿರುದ್ಧ ಪೊಕ್ಸೊ ಕಾಯ್ದೆ–2012, ಭಾರತೀಯ ದಂಡ ಸಂಹಿತೆ–1860, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ-1988, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989 ಮತ್ತು ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯ್ದೆ–2015ರ ವಿವಿಧ ಕಲಂಗಳ ಅಡಿಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದ್ದು ಸೆಷನ್ಸ್ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗಿದೆ.
‘ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ 2022ರ ಆಗಸ್ಟ್ 26ರಂದು ದೂರು ದಾಖಲಿಸಿದ ನಂತರ ಪೊಲೀಸರು ಶರಣರನ್ನು 2022ರ ಸೆಪ್ಟೆಂಬರ್ 1ರಂದು ಚಿತ್ರದುರ್ಗದ ಬೃಹನ್ಮಠದಲ್ಲಿ ಬಂಧಿಸಿದರು. ಅಂದಿನಿಂದಲೂ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು (ವಿಚಾರಣಾಧೀನ ಬಂದಿ ಸಂಖ್ಯೆ: 2261) ಕಾನೂನು ವಿಚಾರಣೆಯ ವಿವಿಧ ಹಂತಗಳ ಪ್ರಕ್ರಿಯೆಯನ್ನು ಎದುರಿಸುತ್ತಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.