ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ ಪರಿಹಾರ: ಎಂಎಸಿಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Published 18 ಮೇ 2023, 20:34 IST
Last Updated 18 ಮೇ 2023, 20:34 IST
ಅಕ್ಷರ ಗಾತ್ರ

ಬೆಂಗಳೂರು: ಬೈಕ್‌ನಲ್ಲಿ ಟ್ರಿಪಲ್ ರೈಡ್ (ಮೂವರ ಸವಾರಿ) ಹೋಗುತ್ತಿದ್ದ ವೇಳೆ ಕಾರಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರ ಮೇಲೆ ನಿರ್ಲಕ್ಷ್ಯದ ಹೊಣೆ ಹೊರಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯ (ಎಂಎಸಿಟಿ) ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

‘ಎಂಎಸಿಟಿ ಆದೇಶ ರದ್ದುಪಡಿಸಿ, ಪರಿಹಾರದ ಮೊತ್ತ ಹೆಚ್ಚಿಸಬೇಕು’ ಎಂದು ಕೋರಿ ಮೂವರು ಬೈಕ್ ಸವಾರರು ಹಾಗೂ ‘ನಿರ್ಲಕ್ಷ್ಯದ ಸಂಪೂರ್ಣ ಹೊಣೆಯನ್ನು ಬೈಕ್ ಸವಾರರ ಮೇಲೆಯೇ ಹೊರಿಸಬೇಕು’ ಎಂದು ಕೋರಿ ಕಾರಿನ ವಿಮಾ ಕಂಪನಿ ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಎನ್.ಎಸ್. ಸಂಜಯ್‌ಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

‘ಪ್ರಕರಣದಲ್ಲಿ ಮೋಟಾರ್ ಬೈಕ್‌ ಸವಾರರು ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಬಿ ವರದಿ ಸಲ್ಲಿಸಲಾಗಿದೆ. ಹೀಗಿರುವಾಗ, ಬೈಕ್ ಸವಾರರ ನಿರ್ಲಕ್ಷ್ಯ ಸಾಬೀತುಪಡಿಸಬೇಕು ಎಂದರೆ ಕಾರು ಚಾಲಕನನ್ನೂ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ.  ಆದರೆ, ಕಾರು ಚಾಲಕ ನ್ಯಾಯಮಂಡಳಿ ವಿಚಾರಣೆಯಿಂದ ದೂರ ಉಳಿದಿದ್ದಾರೆ. ಇದರಿಂದ ಅಪಘಾತಕ್ಕೆ ಯಾರು ಹೊಣೆ ಎಂಬುದನ್ನು ನಿರ್ಧರಿಸಲು ಸಾಧ್ಯವಾಗಬಹುದಾದ ಉತ್ತಮ ಸಾಕ್ಷಿಯೊಂದು ನ್ಯಾಯಮಂಡಳಿಗೆ ಅಲಭ್ಯವಾದಂತಾಗಿದೆ. ಆದ್ದರಿಂದ, ಕಾರಿನ ಮಾಲೀಕ ಹಾಗೂ ಬೈಕ್ ಸವಾರರನ್ನು ಸಮಾನ ಹೊಣೆಗಾರರನ್ನಾಗಿಸಿರುವ ಎಂಎಸಿಟಿ ಕ್ರಮ ಸೂಕ್ತವಾಗಿದೆ‘ ಎಂದು ನ್ಯಾಯ‍ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ಮಂಡ್ಯದ ಬಿ.ಸಿ. ಮಹೇಂದ್ರ, ಬಿ.ಎಸ್. ಜಗದೀಶ್ ಹಾಗೂ ಬಿ.ಎಚ್. ವಿಶ್ವಾಸ್ ಬೆಂಗಳೂರಿನ ಮಹದೇವಪುರದ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಶಿವಕುಮಾರ್ ರಾಘವನ್ ಎಂಬುವರಿಗೆ ಸೇರಿದ್ದ ಕಾರು ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ, ಬೈಕ್‌ನಲ್ಲಿದ್ದ ಮೂವರೂ ಗಾಯಗೊಂಡಿದ್ದರು. ಗಾಯಾಳುಗಳು ಪರಿಹಾರ ಕೋರಿ ಎಂಎಸಿಟಿಗೆ ಅರ್ಜಿ ಸಲ್ಲಿಸಿದ್ದರು. ಕಾರಿನ ಮಾಲೀಕ ಶಿವಕುಮಾರ್ ವಿಚಾರಣೆಗೆ ಗೈರಾಗಿದ್ದರು.

ವಿಚಾರಣೆ ನಡೆಸಿದ್ದ ನ್ಯಾಯಮಂಡಳಿ ವಿಶ್ವಾಸ್‌ಗೆ ₹ 2.02 ಲಕ್ಷ, ಜಗದೀಶ್‌ಗೆ ₹ 1.47 ಲಕ್ಷ ಹಾಗೂ ಮಹೇಂದ್ರ ಪ್ರಸಾದ್‌ಗೆ ₹ 15 ಸಾವಿರ ಪರಿಹಾರ ಘೋಷಿಸಿ 2018 ರ ಜನವರಿ 17 ರಂದು ಆದೇಶಿಸಿತ್ತು. ‘ಅಪಘಾತಕ್ಕೆ ಬೈಕ್ ಸವಾರರ ನಿರ್ಲಕ್ಷ್ಯವೂ ಕಾರಣ’ ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದ ಎಂಎಸಿಟಿ, ಬೈಕ್ ಸವಾರರು ಹಾಗೂ ಕಾರು ಮಾಲೀಕನ ಮೇಲೆ 50:50ರ ಅನುಪಾತದಲ್ಲಿ ನಿರ್ಲಕ್ಷ್ಯದ ಹೊಣೆ ಹೊರಿಸಿತ್ತು. ‘ಪರಿಹಾರದ ಮೊತ್ತದಲ್ಲಿ ಶೇ 50ರಷ್ಟು ಪ್ರಮಾಣವನ್ನು ಗಾಯಾಳುಗಳಿಗೆ ಪಾವತಿಸಬೇಕು’ ಎಂದು ಕಾರಿಗೆ ವಿಮೆ ಮಾಡಿಸಿದ್ದ ಕಂಪನಿಗೆ ನಿರ್ದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT