ನವದೆಹಲಿ: ಕೇಂದ್ರ ಪರಿಸರ ಇಲಾಖೆಯ ತಜ್ಞರ ಸಮಿತಿಯ ಶಿಫಾರಸಿನ ಪ್ರಕಾರವೇ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಹೊಸ ಪ್ರಸ್ತಾವನೆ ಸಲ್ಲಿಸಬೇಕು ಎಂದು ರಾಷ್ಟ್ರೀಯ ವನ್ಯಜೀವಿ ಮಂಡಳಿ ಸೂಚಿಸಿದ್ದು, ಹೊಸ ಪ್ರಸ್ತಾವನೆ ಸಲ್ಲಿಕೆಯಾಗುವ ತನಕ ಯಾವುದೇ ನಿರ್ಧಾರ ಕೈಗೊಳ್ಳದಿರಲು ನಿರ್ಧರಿಸಿದೆ.
ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಕಳೆದ ವಾರ ನಡೆದ ಮಂಡಳಿಯ 73ನೇ ಸ್ಥಾಯಿ ಸಮಿತಿ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಯಿತು.
ಕರ್ನಾಟಕದ 108 ಕಿ.ಮೀ. ದಟ್ಟ ಅರಣ್ಯಗಳ ನಡುವೆ ಸಾಗುವ ಈ ಯೋಜನೆಗೆ ಈಗಿನ ಸ್ವರೂಪದಲ್ಲಿ ಯೋಜನೆಗೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದ ತಜ್ಞರ ಸಮಿತಿ, ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ಅನುಷ್ಠಾನಕ್ಕೆ ರೈಲ್ವೆ ಇಲಾಖೆಯು ಹೊಸ ಪ್ರಸ್ತಾವನೆ ಸಿದ್ಧಪಡಿಸುವಂತೆ ಸಲಹೆ ನೀಡಿತ್ತು. ಈ ಯೋಜನೆ ಅನುಷ್ಠಾನ ಮಾಡಿದರೆ ಅಪಾರ ಪ್ರಮಾಣದ ಕಾಡು ನಾಶವಾಗಲಿದೆ ಎಂದು 2022ರ ಹುಲಿ ಗಣತಿ ವರದಿಯಲ್ಲೂ ಎಚ್ಚರಿಸಲಾಗಿದೆ.
ಯೋಜನೆಗೆ ವನ್ಯಜೀವಿ ಅನುಮೋದನೆ ನೀಡುವಂತೆ ಕರ್ನಾಟಕ ಸರ್ಕಾರವು ಸಚಿವಾಲಯಕ್ಕೆ 2017ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಹುಬ್ಬಳ್ಳಿ–ಅಂಕೋಲಾ ನಡುವೆ ಬ್ರಾಡ್‌ಗೇಜ್ ಮಾರ್ಗ ನಿರ್ಮಾಣಕ್ಕೆ 595.64 ಹೆಕ್ಟೇರ್ ಅರಣ್ಯ ಬಳಕೆಯಾಗಲಿದೆ ಎಂದು ರಾಜ್ಯ ಸರ್ಕಾರ ಪ್ರಸ್ತಾಪಿಸಿತ್ತು. ಶರಾವತಿ ವನ್ಯಜೀವಿ ಧಾಮ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಈ ಯೋಜನೆ ಹಾದು ಹೋಗಲಿದೆ ಎಂದೂ ಉಲ್ಲೇಖಿಸಿತ್ತು.
ಯೋಜನೆಯ ಸಾಧಕ ಬಾಧಕಗಳ ಪರಿಶೀಲನೆಗೆ ಪರಿಸರ ಸಚಿವಾಲಯವು ಕಳೆದ ವರ್ಷ ಮೇ 30ರಂದು ಏಳು ಜನರ ತಜ್ಞರ ಸಮಿತಿ ರಚಿಸಿತ್ತು. ಈ ಸಮಿತಿಯು ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಗಳಿಗೆ ಭೇಟಿ ನೀಡಿ ಸಂಭಾವ್ಯ ಯೋಜನಾ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯರು, ಜನಪ್ರತಿನಿಧಿಗಳು ಹಾಗೂ ಪರಿಸರ ಹೋರಾಟಗಾರರ ಅಭಿಪ್ರಾಯ ಸಂಗ್ರಹಿಸಿತ್ತು. 2022ರ ಡಿಸೆಂಬರ್ 26ರಂದು ವರದಿ ಸಲ್ಲಿಸಿತ್ತು. ಈಗಿನ ಸ್ವರೂಪದಲ್ಲಿ ಯೋಜನೆ ಅನುಷ್ಠಾನ ಮಾಡಿದರೆ ಉತ್ತರ ಕನ್ನಡದ ಜೀವವೈವಿಧ್ಯ ವ್ಯವಸ್ಥೆ ಮೇಲೆ ಭಾರಿ ಹಾನಿಯಾಗಲಿದೆ ಎಂದು ಸಮಿತಿ ಎಚ್ಚರಿಸಿತ್ತು. ಇದನ್ನೆಲ್ಲ ಸರಿಪಡಿಸಿ ಪ್ರಸ್ತಾವ ಸಲ್ಲಿಸಿದರೆ ಯೋಜನೆಯನ್ನು ಪರಿಗಣಿಸಬಹುದು ಎಂದೂ ತಿಳಿಸಿತ್ತು.
ಡಿಸೆಂಬರ್ ಅಂತ್ಯದಲ್ಲಿ ನಡೆದ ವನ್ಯಜೀವಿ ಮಂಡಳಿಯ 71ನೇ ಸ್ಥಾಯಿ ಸಮಿತಿ ಸಭೆಯಲ್ಲಿ ಯೋಜನೆ ಬಗ್ಗೆ ಮತ್ತೊಮ್ಮೆ ಚರ್ಚಿಸಲಾಗಿತ್ತು. ಪರಿಸರ, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಜಂಟಿ ಸಭೆ ನಡೆಸಿ ಸಮಾಲೋಚನೆ ನಡೆಸಬೇಕು ಎಂದು ನಿರ್ದೇಶನ ನೀಡಲಾಗಿತ್ತು. ಎಲ್ಲ ಇಲಾಖೆಗಳು ಜತೆಗೂಡಿ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯನ್ನು ರೂಪಿಸಲು ತಾಕೀತು ಮಾಡಲಾಗಿತ್ತು.
ಕೇಂದ್ರ ಪರಿಸರ ಸಚಿವರ ಅಧ್ಯಕ್ಷತೆಯಲ್ಲಿ ಜೂನ್ 27ರಂದು ನಡೆದ ಪರಿಸರ, ದೂರಸಂಪರ್ಕ ಹಾಗೂ ದೂರಸಂಪರ್ಕ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಯೋಜನೆ ಬಗ್ಗೆ ಮತ್ತೊಮ್ಮೆ ಚರ್ಚಿಸಲಾಯಿತು. ಪರಿಷ್ಕೃತ ಯೋಜನಾ ಪ್ರಸ್ತಾವ ಸಲ್ಲಿಸಲು ಸಿದ್ಧರಿರುವುದಾಗಿ ರೈಲ್ವೆ ಇಲಾಖೆ ಅಧಿಕಾರಿಗಳು ಒಪ್ಪಿದರು. ಸಮಗ್ರ ಜೀವವೈವಿಧ್ಯದ ಪರಿಣಾಮದ ಮೌಲ್ಯಮಾಪನ ನಡೆಸಿ ಮಾರ್ಗದಲ್ಲಿ ಬದಲಾವಣೆ ಮಾಡಲಾಗುವುದು ಎಂದೂ ಹೇಳಿದರು. ಕರ್ನಾಟಕ ಸರ್ಕಾರವು ಸಾರಿಗೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಸಿದ್ಧಪಡಿಸುತ್ತಿದೆ ಎಂದೂ ಮಾಹಿತಿ ನೀಡಿದರು.
‘ಪಶ್ಚಿಮಘಟ್ಟದಲ್ಲೇ ಸುಮಾರು 2 ಲಕ್ಷ ಮರಗಳ ಹನನಕ್ಕೆ ಕಾರಣವಾಗುವ ಈ ಯೋಜನೆಯನ್ನು ಕೈಬಿಡಬೇಕು’ ಎಂದು ಆಗ್ರಹಿಸಿ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್ ಕುಲಕರ್ಣಿ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.