ಬೆಂಗಳೂರು: ಹದಿನೇಳು ವರ್ಷದ ಹಿಂದೆ ಬೆಂಗಳೂರಿನ ಐಐಎಸ್ಸಿ (ಭಾರತೀಯ ವಿಜ್ಞಾನ ಸಂಸ್ಥೆ) ನಿವೃತ್ತ ಪ್ರಾಧ್ಯಾಪಕ ಮತ್ತು ಖ್ಯಾತ ಗಣಿತಜ್ಞ ಪುರುಷೋತ್ತಮ ಲಾಲ್ ಸಚ್ದೇವ್, ಅವರ ಪತ್ನಿ ರೀಟಾ ಮತ್ತು ಪುತ್ರ ಮುನ್ನಾ ಅವರ ತ್ರಿವಳಿ ಕೊಲೆ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ನಾಲ್ವರು ವಲಸೆ ಕಾರ್ಮಿಕ ಆರೋಪಿಗಳಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಬೆಂಗಳೂರಿನ 65ನೇ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಪಶ್ಚಿಮ ಬಂಗಾಳದ 24 ಪರಗಣ ಹಾಗೂ ಮುಜಫ್ಫರ್ ನಗರ ಜಿಲ್ಲೆಯ ದೀಪಕ್ ಹಲ್ದಾರ್, ಇವರ ಪತ್ನಿ ಸುಚಿತ್ರಾ ಹಲ್ದಾರ್, ಮೊಹಮ್ಮದ್ ಸರ್ಬಾಲ್ ಮತ್ತು ಬಿದನ್ ಶಿಕಾರಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಆರೋಪಿಗಳು.

‘ಆರೋಪಿಗಳು ಮೂವರನ್ನೂ ಕತ್ತು ಹಿಸುಕಿ ಕೊಂದು ನಗದು, ಒಡವೆ ವಸ್ತು ದೋಚಿದ್ದಾರೆ. ಮೊದಲನೇ ಆರೋಪಿ ದೀಪಕ್ ಹಲ್ದಾರ್ ಮತ್ತು ಎರಡನೇ ಆರೋಪಿ ಸುಚಿತ್ರಾ ಹಲ್ದಾರ್ ಕೊಲೆಯಾದ ಮನೆಯಲ್ಲಿ ಮನೆಗೆಲಸದವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಣ ಹಾಗೂ ಚಿನ್ನಾಭರಣಕ್ಕಾಗಿ ಮೂವರು ಅಮಾಯಕರನ್ನು ಹತ್ಯೆ ಮಾಡಿರುವ ಆರೋಪಿಗಳು ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆಗೆ ಕಂಟಕರಾಗಿದ್ದು ಅವರ ಈ ಕುಕೃತ್ಯ ಸಮಾಜಕ್ಕೆ ದೊಡ್ಡ ಅಪಾಯವಾಗಿದೆ’ ಎಂದು ನ್ಯಾಯಪೀಠ ಆಘಾತ ವ್ಯಕ್ತಪಡಿಸಿದೆ.

‘ಸದ್ಯ ಹೊರಗಿರುವ ನಾಲ್ವರು ಆರೋಪಿಗಳು ಎರಡು ವಾರಗಳಲ್ಲಿ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಬೇಕು. ಉಳಿದ ಅವಧಿಯ ಶಿಕ್ಷೆಯನ್ನು ಪೂರೈಸಲು ಅವರನ್ನು ಕಾರಾಗೃಹಕ್ಕೆ ಕಳುಹಿಸಬೇಕು’ ಎಂದು ನ್ಯಾಯಪೀಠ ತೀರ್ಪಿನಲ್ಲಿ ವಿವರಿಸಿದೆ. ಪ್ರಾಸಿಕ್ಯೂಷನ್ ಪರ ರಶ್ಮಿ ಪಟೇಲ್ ವಾದ ಮಂಡಿಸಿದ್ದರು.

ಘಟನೆ: ಪುರುಷೋತ್ತಮ ಲಾಲ್ ಸಚ್ದೇವ್ (71), ಪತ್ನಿ ರೀಟಾ (62), ಪುತ್ರ ಮುನ್ನಾ(35) ಜತೆ ಆರ್.ಟಿ.ನಗರದ 80 ಅಡಿ ರಸ್ತೆಯಲ್ಲಿರುವ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆರೋಪಿಗಳು 2009ರ ಫೆಬ್ರುವರಿ 16ರಂದು ಮೂವರನ್ನೂ ಕತ್ತು ಹಿಸುಕಿ ಕೊಂದು ಚಿನ್ನಾಭರಣ ನಗದು ದೋಚಿ ಪರಾರಿಯಾಗಿದ್ದರು.

‘ವಲಸೆ ಕಾರ್ಮಿಕರ ನಿಗಾ ವಹಿಸಲು ಸಕಾಲ’

‘ಇತ್ತೀಚಿನ ವರ್ಷಗಳಲ್ಲಿ ವಲಸೆ ಕಾರ್ಮಿಕರು ಮನೆಗೆಲಸ ನೆಪದಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗುವ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ನಿಗಾ ಇರಿಸಲು ವಲಸೆ ಕಾರ್ಮಿಕ ಮತ್ತು ಕ್ರಿಮಿನಲ್ ನಿಯಂತ್ರಣ ಕಾರ್ಯತಂತ್ರಗಳಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

‘ಬಹುತೇಕ ಪ್ರಕರಣಗಳಲ್ಲಿ ವಲಸೆ ಕಾರ್ಮಿಕರ ಹಿನ್ನೆಲೆಯನ್ನು ಮತ್ತು ಅವರ ಗುರುತನ್ನು ಮನೆಗಳ ಮಾಲೀಕರು ಅಥವಾ ಉದ್ಯೋಗದಾತರು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ, ಕೆಲವು ವಲಸಿಗರು ಆಗ್ಗಾಗ್ಗೆ ಅಪರಾಧ ಕೃತ್ಯಗಳನ್ನು ಎಸಗಿ ಪರಾರಿಯಾಗುತ್ತಾರೆ. ಅದಕ್ಕಾಗಿ ಮುನ್ನೆಚ್ಚರಿಕೆ ಕ್ರಮವಾಗಿ, ಕಾರ್ಮಿಕ ಮತ್ತು ಅಪರಾಧ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ವಲಸೆ ಕಾರ್ಮಿಕರ ಹಿನ್ನೆಲೆಯನ್ನು ಪೊಲೀಸರು ಕಡ್ಡಾಯವಾಗಿ ಪರಿಶೀಲಿಸಬೇಕು. ಅವರ ನೋಂದಣಿಗೆ ಪೋರ್ಟಲ್ ವ್ಯವಸ್ಥೆ ಮಾಡಬೇಕು. ಅದರ ಮಾಹಿತಿ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕು’ ಎಂದು ನ್ಯಾಯಪೀಠ ತಾಕೀತು ಮಾಡಿದೆ.

‘ಈ ಪ್ರಕರಣದಲ್ಲಿ ಘಟನೆ ನಡೆದ 20 ತಿಂಗಳ ನಂತರ ಆರೋಪಿಗಳ ಬಂಧನವಾಗಿದೆ. ಹಾಗಾಗಿ, ವಲಸೆ ಕಾರ್ಮಿಕರ ನಿಯಮಗಳನ್ನು ಬಿಗಿಗೊಳಿಸಲು ಇದು ಸಕಾಲ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ಆದೇಶದ ಪ್ರತಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರವಾನಿಸಬೇಕು’ ಎಂದು ರಿಜಿಸ್ಟ್ರಿಗೆ ನಿರ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.