ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವಿಶೇಷ| ಪಶ್ಚಿಮಘಟ್ಟದ ಹೃದಯ ಸೀಳಿದ ಗಣಿಗಾರಿಕೆ

Last Updated 8 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಪಶ್ಚಿಮಘಟ್ಟದಲ್ಲಿ ಪ್ರತಿ ಮಳೆಗಾಲದಲ್ಲೂ ತೀವ್ರ ಸ್ವರೂಪದ ಭೂಕುಸಿತ, ಜೀವಹಾನಿಗಳಿಗೆ ಈ ಭಾಗದಲ್ಲಿ ನಡೆಯುತ್ತಿರುವ ಅವ್ಯಾಹತ, ಅಕ್ರಮ ಗಣಿಗಾರಿಕೆಯೇ ಕಾರಣ ಎಂದು ತಜ್ಞರ ಸಮಿತಿಯ ವರದಿ ಹೇಳಿದೆ.

ರಾಜ್ಯ ಸರ್ಕಾರ ರಚಿಸಿದ್ದ ಭೂಕುಸಿತ ಅಧ್ಯಯನ ಸಮಿತಿ ನಡೆಸಿದ ಅಧ್ಯಯನದ ವೇಳೆ,ಭೂಕುಸಿತ ಸಂಭವಿಸಿರುವ ಪ್ರದೇಶದ ಆಸುಪಾಸಿನಲ್ಲಿ ಸಾಕಷ್ಟು ಗಣಿಗಾರಿಕೆ ನಡೆಯುತ್ತಿರುವುದು ಪತ್ತೆಯಾಗಿದೆ. ಸಮಿತಿಯು 2021ರಲ್ಲಿಯೇ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿ ಆಧರಿಸಿ, ಈವರೆಗೆ ಯಾವುದೇ ಕ್ರಮವನ್ನೂ ಸರ್ಕಾರ ಕೈಗೊಂಡಿಲ್ಲ.

ಕೊಡಗಿನಲ್ಲಿ ನಿರಂತರ ಎರಡು ವರ್ಷ ಭಾರೀ ಭೂಕುಸಿತ ಸಂಭವಿಸಿತ್ತು. ಅದೇ ರೀತಿಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರದೇಶದಲ್ಲೂ ವಿವಿಧ ಪ್ರಮಾಣದ ಭೂಕುಸಿತವಾಗಿತ್ತು. ಅಚ್ಚರಿ ಎಂದರೆಗಣಿಗಾರಿಕೆ ನಡೆದ ಪ್ರದೇಶದ ಸುತ್ತಮುತ್ತಲೇ ಭೂಕುಸಿತ ಆಗುತ್ತಿದೆ ಎಂಬುದನ್ನು ತಜ್ಞರು ಗುರುತಿಸಿದ್ದಾರೆ.

ಈ ಪ್ರದೇಶದಲ್ಲಿ ಶೇ 10 ರಷ್ಟು ಗಣಿಗಾರಿಕೆಗಳು ಅಧಿಕೃತವಾಗಿ ನಡೆಯುತ್ತಿದ್ದರೆ, ಶೇ 90 ರಷ್ಟು ಅನಧಿಕೃತವಾಗಿ ನಡೆಯುತ್ತಿವೆ. ಅಂದರೆ 10 ಗುಂಟೆಗೆ ಅನುಮತಿ ಪಡೆದು 5 ರಿಂದ 10 ಎಕರೆಯಷ್ಟು ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಸರ್ಕಾರಕ್ಕೆ ಇದರ ಅರಿವೂ ಇಲ್ಲ ರಾಯಧನವೂ ಸಿಗುವುದಿಲ್ಲ ಎಂಬ ಅಂಶ ವರದಿಯಲ್ಲಿದೆ.

ಗಣಿಗಾರಿಕೆ ಪೂರ್ಣಗೊಂಡ ಬಳಿಕ ಆ ಜಾಗವನ್ನು ಸುಸ್ಥಿರಗೊಳಿಸಬೇಕು ಎಂಬಮಾರ್ಗಸೂಚಿ ಇದೆ. ಆದರೆ, ಆ ಪ್ರಕ್ರಿಯೆ ಪಾಲಿಸದೇ ಬರಿದಾದ ಗಣಿ ಪ್ರದೇಶ ಹಾಗೇ ಬಿಟ್ಟು ಹೋಗುವುದರಿಂದ ಹೊಂಡಗಳಲ್ಲಿ ನೀರು ತುಂಬಿಕೊಂಡು ಕುಸಿತವಾಗುತ್ತಿದೆ. ಬೇಕಾಬಿಟ್ಟಿ ಸ್ಫೋಟಕಗಳನ್ನು ಬಳಸುತ್ತಿರುವುದರಿಂದ ಪಶ್ಚಿಮಘಟ್ಟದ ಹೃದಯ ಭಾಗವೇ ಸೀಳಿ ಹೋಗುತ್ತಿದೆ. ಪ್ರೊ.ಮಾಧವ ಗಾಡ್ಗೀಳ್ ಅವರು ತಮ್ಮ ವರದಿಯಲ್ಲಿ ವಾಸ್ತವ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ. ಪಶ್ಚಿಮಘಟ್ಟ ವನ್ನು ಉಳಿಸಬೇಕಾದರೆ, ಗಣಿಗಾರಿಕೆಗೆ ನಿಷೇಧ ಹೇರುವುದೇ ಸರಿಯಾದ ಕ್ರಮ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.

ಪಶ್ಚಿಮಘಟ್ಟದ ಕುರಿತು ಪ್ರೊ.ಮಾಧವಗಾಡ್ಗೀಳ್ ಮತ್ತು ಡಾ.ಕಸ್ತೂರಿರಂಗನ್‌ ಅವರು ಸಲ್ಲಿಸಿರುವ ವರದಿಗಳಲ್ಲಿ ಗಣಿಗಾರಿಕೆಯನ್ನು ಸಂಪೂರ್ಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿತ್ತು. ಆದರೆ, ಕರ್ನಾಟಕವೂ ಸೇರಿ ಪಶ್ಚಿಮಘಟ್ಟದ ವ್ಯಾಪ್ತಿಗೆ ಬರುವ ಎಲ್ಲ ರಾಜ್ಯಗಳೂ ಈ ವರದಿಯನ್ನು ತಿರಸ್ಕರಿಸಿವೆ.

ಎಲ್ಲಿ ಗಣಿಗಾರಿಕೆಯೋ, ಅಲ್ಲಿ ಭೂಕುಸಿತ

* ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಮುಠ್ಠಳ್ಳಿಯಲ್ಲಿ ಇದೇ ಆಗಸ್ಟ್‌ನಲ್ಲಿ ಸಂಭವಿಸಿದ ಭೂಕುಸಿತದಿಂದ ನಾಲ್ವರು ಮೃತಪಟ್ಟರು. ಇದಕ್ಕೆ ಈ ಪ್ರದೇಶದಲ್ಲಿ ನಡೆಯುತ್ತಿದ್ದ ಕೆಂಪು ಕಲ್ಲು ಗಣಿಗಾರಿಕೆಯೇ ಕಾರಣ. ಯಲ್ಲಾಪುರ ತಾಲ್ಲೂಕು ಕಳಚೆ ಕಣಿವೆಯಲ್ಲಿ ಜುಲೈನಲ್ಲಿ ನಡೆದ ಭೂಕುಸಿತದ ತೀವ್ರತೆ ಕೊಡಗಿನ ಘಟನೆಗಳನ್ನು ಮೀರಿಸುವಂತಹದ್ದು. ಮನೆಗಳು, ತೋಟಗಳು ಸೇರಿ ಇಡೀ ಗ್ರಾಮವೇ ಮಣ್ಣಿನಡಿ ಸಿಲುಕಿತು. ಈ ಪ್ರದೇಶದಲ್ಲಿ ಮೂರು ದಶಕಗಳ ಹಿಂದೆ ಮೈಸೂರು ಮಿನರಲ್ಸ್‌ ಲಿಮಿಟೆಡ್‌(ಎಂಎಂಎಲ್‌) ನಡೆಸಿದ ಗಣಿಗಾರಿಕೆಯೇ ಕಾರಣ. 1975 ರಿಂದ 1997 ರವರೆಗೆ ಬೃಹತ್ ಮ್ಯಾಂಗನೀಸ್‌ ಗಣಿಗಾರಿಕೆಗೆ ಜನಾಂದೋಲನದಿಂದ ಕಡಿವಾಣ ಬಿದ್ದಿತ್ತು.

*ಇದೇ ಜೂನ್‌– ಜುಲೈನಲ್ಲಿ ಗೇರುಸೊಪ್ಪಾ ಬಳಿ ಭಾರಿ ಭೂಕುಸಿತ ಸಂಭವಿಸಿತು. ಶರಾವತಿ ಅಭಯಾರಣ್ಯ, ಗೇರುಸೊಪ್ಪಾ ಕಣಿವೆಯಲ್ಲಿ ಶರಾವತಿ ಟೇಲ್‌ರೇಸ್‌ ಜಲವಿದ್ಯುತ್‌ ಯೋಜನೆಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ದೀರ್ಘಕಾಲ ನಡೆದ ಕಲ್ಲು ಕ್ವಾರಿಗಳೇ ಇದಕ್ಕೆ ಕಾರಣ. ಇಲ್ಲಿ 1995 ರಿಂದ 2005 ರವರೆಗೆ ಕಲ್ಲು ಗಣಿಗಾರಿಕೆ ನಡೆಯಿತು. ಈ ಹಿಂದೆಯೂ ಗೇರುಸೊಪ್ಪಾ ಕಣಿವೆಯಲ್ಲಿ ಅರಣ್ಯಗಳ ಮಧ್ಯೆ ಎರಡು ಬಾರಿ ಭೂಕುಸಿತ ಆಗಿತ್ತು. ಅದು ಹೊರ ಜಗತ್ತಿನ ಗಮನಕ್ಕೆ ಬರಲಿಲ್ಲ.

* ಕಾರವಾರ– ಅಂಕೋಲಾ ಮಧ್ಯೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಕಲ್ಲು ತೆಗೆಯುತ್ತಿರುವ ಹಲವು ಕಡೆಗಳಲ್ಲಿ ಭೂಕುಸಿತ ಸಂಭವಿಸುತ್ತಲೇ ಇದೆ. 2009–10 ರಲ್ಲಿ ಕಾರವಾರ ಸಮೀ‍ಪದ ಕಡವಾಡ ಪ್ರದೇಶದಲ್ಲಿ ಗುಡ್ಡು ಕುಸಿತದಿಂದ 19 ಮಂದಿ ಸಾವನ್ನಪ್ಪಿದ್ದರು.

* ಯಲ್ಲಾಪುರದ ಅರೇಬೈಲು ಘಟ್ಟದಲ್ಲಿ ಈ ಮಳೆಗಾಲದಲ್ಲಿ ಸರಣಿ ಭೂಕುಸಿತವಾಗಿದ್ದು, ಇಲ್ಲಿ ಹಲವು ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕೊಡಸಳ್ಳಿ ಜಲವಿದ್ಯುತ್‌ ಯೋಜನೆಯ ಕದ್ರಾ ಅಣೆಕಟ್ಟೆ ಮೇಲ್ಭಾಗದಲ್ಲಿ ಸೂಳೆಗೇರಿ ಬಳಿ ಎರಡು ಅರಣ್ಯಗಳ ಮಧ್ಯೆ ಭೂಕುಸಿತವಾಗಿದೆ. ಯೋಜನಾ ಪ್ರದೇಶದ ಸಮೀಪದಲ್ಲೇ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.

* ಹೊನ್ನಾವರ ಬಳಿ ಅಪ್ಸರಕೊಂಡ ಬೆಟ್ಟದ ಪ್ರದೇಶದಲ್ಲಿ ಆಗಸ್ಟ್‌ನಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಸ್ಥಳೀಯರಲ್ಲಿ ಆತಂಕವುಂಟು ಮಾಡಿದೆ. ಯಾವುದೇ ಸಂದರ್ಭದಲ್ಲಿ ಭೂಕುಸಿತ ಆಗುವ ಸಾಧ್ಯತೆ ಇರುವುದರಿಂದ ಪ್ರದೇಶ ತೆರವುಗೊಳಿಸುವಂತೆ ಸ್ಥಳೀಯರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಪ್ರದೇಶದಲ್ಲಿ ಬಹಳ ಹಿಂದೆ ಮ್ಯಾಂಗನೀಸ್‌ ಗಣಿಗಾರಿಕೆ ನಡೆದಿತ್ತು.

* ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಬೇದೂರಿನಲ್ಲಿ ಭೂಕುಸಿತದಿಂದ ನಾಲ್ಕು ಮನೆಗಳು ನಾಶವಾಗಿವೆ. ಕೊಡಚಾದ್ರಿ– ಅಂಬಾರಗುಡ್ಡದಲ್ಲಿ ಕಳೆದ 2– 3 ವರ್ಷಗಳಿಂದ ಭೂಕುಸಿತ ಆಗುತ್ತಿದ್ದು, ಜನವಸತಿ ಇಲ್ಲದ ಕಾರಣ ಮಾಹಿತಿ ಹೊರ ಬರಲಿಲ್ಲ. ಇಲ್ಲಿ 2004–05 ರಲ್ಲಿ ಮ್ಯಾಂಗನೀಸ್‌ ಗಣಿಗಾರಿಕೆ ಆರಂಭಿಸಲಾಗಿತ್ತು. 2009–10 ರಲ್ಲಿ ಅಂಬಾರಗುಡ್ಡವನ್ನು ಪಾರಂಪರಿಕ ಜೀವ ವೈವಿಧ್ಯ ತಾಣ ಎಂದು ಘೋಷಿಸಲಾಗಿದೆ.

* ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಭೂಕುಸಿತವಾಗಿದ್ದು, ಇದಕ್ಕೆ ಕೆಂಪು ಕಲ್ಲು ಗಣಿಗಾರಿಕೆ ನಡೆದಿರುವುದೇ ಕಾರಣ ಎಂದು ಪರಿಸರ ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT