ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಡ್ಯುಲರ್‌ ಆಪರೇಷನ್ ಥಿಯೇಟರ್ ಖರೀದಿಯಲ್ಲಿ ಅವ್ಯವಹಾರ: ರವಿಕುಮಾರ್ ಆರೋಪ

ಷರತ್ತುಗಳನ್ನು ಸಡಿಲಗೊಳಿಸಿ ಟೆಂಡರ್‌: ಎನ್‌.ರವಿಕುಮಾರ್ ಆರೋಪ
Published : 22 ಸೆಪ್ಟೆಂಬರ್ 2024, 15:54 IST
Last Updated : 22 ಸೆಪ್ಟೆಂಬರ್ 2024, 15:54 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳು ಮತ್ತು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಪೂರೈಕೆ ಮಾಡುವ ಉದ್ದೇಶದಿಂದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಕರೆದಿದ್ದ ₹176 ಕೋಟಿ ವೆಚ್ಚದ 114 ಮಾಡ್ಯೂಲರ್ ಆಪರೇಷನ್ ಥಿಯೇಟರ್‌ (ಒಟಿ) ಉಪಕರಣ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ವಿಧಾನಪರಿಷತ್‌ ಸದಸ್ಯ ಎನ್.ರವಿಕುಮಾರ್ ಆರೋಪಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರಿಂದ ಅಥವಾ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ರೋಗಿಗಳಿಗೆ ಅತ್ಯುತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ನಿರ್ದೇಶನಾಲಯವು ಮಾಡ್ಯೂಲರ್‌ ಆಪರೇಷನ್ ಥಿಯೇಟರ್‌ ಉಪಕರಣಗಳ ಖರೀದಿಗೆ  ಅನುಮೋದನೆ ನೀಡುವಂತೆ ಕಳೆದ ವರ್ಷ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಸಹಮತಿ ಸೂಚಿಸಿದ ಸರ್ಕಾರವು, ಶೇ 60ರಷ್ಟು ವೆಚ್ಚವನ್ನು ತಾನು ಭರಿಸುವುದಾಗಿ ಹೇಳಿತ್ತು. ಶೇ40ರಷ್ಟನ್ನು ಸ್ವಾಯತ್ತ ಸಂಸ್ಥೆಗಳ ಆಂತರಿಕ ಸಂಪನ್ಮೂಲಗಳಿಂದ ಭರಿಸಿ ಖರೀದಿಸಲು ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿತ್ತು ಎಂದು ಅವರು ಹೇಳಿದರು.

ಮಾರ್ಚ್‌ 3 ರಂದು ಟೆಂಡರ್‌ಗೆ ದಾಖಲೆ ಸಲ್ಲಿಸುವ ಪ್ರಕ್ರಿಯೆ ಆರಂಭವಾಯಿತು. ಮಾ.13 ರಂದು ಪ್ರೀಬಿಡ್‌ ಸಭೆ ನಡೆಯಿತು. ಏ. 1 ದಾಖಲೆ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಏ.3 ರಂದು ತಾಂತ್ರಿಕ ಬಿಡ್‌ ತೆರೆಯಲಾಯಿತು. ಆದರೆ, ನಿರ್ದೇಶನಾಲಯದ ಅಧಿಕಾರಿಗಳು, ಕೆಟಿಪಿಪಿ ನಿಯಮದಂತೆ ಟೆಂಡರ್‌ ನಡೆಸುವ ಬದಲು, ಲಕ್ಷಣ್ಯಾ ವೆಂಚರ್ಸ್‌ ಪ್ರೈ.ಲಿ.ಗೆ ಅನುಕೂಲ ಮಾಡಿಕೊಡಲು ಟೆಂಡರ್‌ ಷರತ್ತುಗಳನ್ನೇ ಬದಲಾಯಿಸಿದರು. ಜೂನ್‌ 12 ರಂದು ₹176 ಕೋಟಿ ವೆಚ್ಚದ 114 ಮಾಡ್ಯೂಲರ್‌ ಆಪರೇಷನ್‌ ಥಿಯೇಟರ್‌ ಪೂರೈಸುವಂತೆ ಈ ಕಂಪನಿಗೆ ಕಾರ್ಯಾದೇಶ ನೀಡಲಾಯಿತು ಎಂದು ರವಿಕುಮಾರ್ ವಿವರಿಸಿದರು.

ಟೆಂಡರ್‌ನಲ್ಲಿ ಒಟ್ಟು ನಾಲ್ಕು ಕಂಪನಿಗಳು ಬಿಡ್‌ ಸಲ್ಲಿಸಿದ್ದವು. ಕಡಿಮೆ ದರಕ್ಕೆ ಬಿಡ್‌ ಮಾಡಿದವರಿಗೆ ಟೆಂಡರ್‌ ನೀಡಬೇಕಿತ್ತು. ಆದರೆ, ಮಾರುಕಟ್ಟೆಗಿಂತ ಹೆಚ್ಚು ದರ ನಮೂದಿಸಿದ ಲಕ್ಷಣ್ಯಾ ವೆಂಚರ್ಸ್‌ ಪ್ರೈ.ಲಿ.ಗೆ ಟೆಂಡರ್‌ ನೀಡಲಾಯಿತು. ಸಾಮಾನ್ಯವಾಗಿ ವೈದ್ಯಕೀಯ ಉಪಕರಣಗಳಿಗೆ 4 ರಿಂದ 5 ವರ್ಷ ವಾರೆಂಟಿ ಇರುತ್ತದೆ. ಆದರೆ, ಲಕ್ಷಾಂತರ ಮೌಲ್ಯದ ಮಾಡ್ಯೂಲರ್‌ ಒಟಿ ಉಪಕರಣಕ್ಕೆ ಕೇವಲ ಒಂದು ವರ್ಷ ಮಾತ್ರ ವಾರೆಂಟಿ ಇದೆ. ವಾರೆಂಟಿ ಅವಧಿಯಲ್ಲಿ ಉಚಿತವಾಗಿ ಸಾಫ್ಟ್‌ವೇರ್ ನವೀಕರಣ ಒದಗಿಸುವ ಕುರಿತು ಮಾಹಿತಿಯನ್ನೂ ನೀಡಿಲ್ಲ ಎಂದು ದೂರಿದರು.

ಟೆಂಡರ್‌ ಪಡೆಯುವ ಸಲುವಾಗಿ ಎನ್ಕಾರ್ಟಾ ಫಾರ್ಮಾ ಪ್ರೈ.ಲಿ ಎಂದು ಇದ್ದ ಹೆಸರನ್ನು ಲಕ್ಷಣ್ಯಾ ವೆಂಚರ್ಸ್‌ ಪ್ರೈ.ಲಿ ಎಂಬುದಾಗಿ ಬದಲಿಸಲಾಗಿದೆ ಎಂದು ಅವರು ಹೇಳಿದರು.

‘ಸರ್ಕಾರಕ್ಕೆ ₹117 ಕೋಟಿ ನಷ್ಟ’

ಈ ಟೆಂಡರ್‌ನಿಂದಾಗಿ ಸರ್ಕಾರದ ಬೊಕ್ಕಸಕ್ಕೆ ₹117 ಕೋಟಿ ನಷ್ಟವಾಗಿದೆ ಎಂದು ರವಿಕುಮಾರ್‌ ದೂರಿದರು.

ಕೇರಳದ ವೈದ್ಯಕೀಯ ಸೇವಾ ನಿಗಮದ ಎಂಎಸ್‌ ಕ್ರಿಯೇಟಿವ್ ಹೆಲ್ತ್‌ ಟೆಕ್‌ ಪ್ರೈ.ಲಿ ಪ್ರತಿ ಮಾಡ್ಯುಲರ್ ಆಪರೇಷನ್‌ ಥಿಯೇಟರ್‌ಗೆ ₹49.90 ಲಕ್ಷ ದಂತೆ 50 ಉಪಕರಣಗಳನ್ನು ಈ ಹಿಂದೆ ಪೂರೈಸಿದೆ. ಅದೇ ರೀತಿ ಬೆಳಗಾವಿಯ ಸ್ಮಾರ್ಟ್‌ ಸಿಟಿ ಲಿಮಿಟೆಡ್  ಬಿಐಎಂಎಸ್‌ ಆಸ್ಪತ್ರೆಯ ಟ್ರಾಮಾ ಸೆಂಟರ್‌ಗೆ ಪೂರೈಸುವಂತೆ ಪ್ರತು ಮಾಡ್ಯುಲರ್ ಆಪರೇಷನ್‌ ಥಿಯೇಟರ್‌ಗೆ ₹1.10 ಕೋಟಿಯಂತೆ ಶಿವೋನ್ ಇಂಡಿಯಾ ಕಂಪನಿಗೆ ಕಾರ್ಯಾದೇಶ ಪತ್ರವನ್ನು ಕೊಟ್ಟಿತ್ತು. ಆದರೆ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಲಕ್ಷಣ್ಯಾ ವೆಂಚರ್ಸ್‌ ಪ್ರೈ.ಲಿ.ಗೆ ಪ್ರತಿ ಮಾಡ್ಯುಲರ್‌ಗೆ ಜಿಎಸ್‌ಟಿ ಸೇರಿ ₹1.53 ಕೋಟಿಗಳಂತೆ 114 ಉಪಕರಣ ಪೂರೈಕೆ ಮಾಡಲು ಕಾರ್ಯಾದೇಶ ಪತ್ರ ಕೊಟ್ಟಿದೆ ಎಂದು ಹೇಳಿದರು.ಯಾವ ಆಸ್ಪತ್ರೆಗಳಿಗೆ ಉಪಕರಣ ಪೂರೈಕೆ?

ಹಾಸನ, ಯಾದಗಿರಿ, ಹುಬ್ಬಳ್ಳಿ, ಹಾವೇರಿ, ಬೀದರ್‌, ಕೊಪ್ಪಳ, ಕಲಬುರಗಿ, ಕಾರವಾರ, ಮಂಡ್ಯ, ಬೆಳಗಾವಿ, ಮೈಸೂರು ವೈದ್ಯಕೀಯ ಕಾಲೇಜು, ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ರಾಜೀವ್​ಗಾಂಧಿ ಎದೆರೋಗ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್​ ಆಸ್ಪತ್ರೆ, ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ, ಬೆಂಗಳೂರು ವೈದ್ಯಕೀಯ​ ಕಾಲೇಜು, ನೆಫ್ರೊ ಯುರಾಲಜಿ ಸಂಸ್ಥೆ, ಅಟಲ್​ ಬಿಹಾರಿ ವಾಜಪೇಯಿ ವೈದ್ಯಕಿಯ ಕಾಲೇಜುಗಳಿಗೆ ಮಾಡ್ಯುಲರ್​ ಆಪರೇಷನ್​ ಥಿಯೇಟರ್​ ಸರಬರಾಜು ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT