ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ ಎಂಟು ಕೇಂದ್ರ ಕಾರಾಗೃಹಗಳಿಗೆ ಅತ್ಯಾಧುನಿಕ ಜಾಮರ್ ಶೀಘ್ರ

Published : 4 ಸೆಪ್ಟೆಂಬರ್ 2024, 1:07 IST
Last Updated : 4 ಸೆಪ್ಟೆಂಬರ್ 2024, 1:07 IST
ಫಾಲೋ ಮಾಡಿ
Comments

ಬಳ್ಳಾರಿ: ರಾಜ್ಯದ ಎಂಟು ಕೇಂದ್ರ ಕಾರಾಗೃಹಗಳಿಗೆ ಮೊಬೈಲ್ ಫೋನ್ ಕರೆ ನಿಯಂತ್ರಣ ವ್ಯವಸ್ಥೆ (ಥ್ರೀ ಟವರ್‌ ಹಾರ್ಮೋನಿಯಸ್‌ ಕಾಲ್‌ ಬ್ಲಾಕಿಂಗ್‌ ಸಿಸ್ಟಮ್‌) ಎಂಬ ಅತ್ಯಾಧುನಿಕ ಜಾಮರ್‌ಗಳ ಅಳವಡಿಕೆ ಕಾರ್ಯ ಶೀಘ್ರವೇ ನೆರವೇರಲಿದ್ದು, ಈ ಸಂಬಂಧ ಟೆಂಡರ್‌ ಪ್ರಕ್ರಿಯೆ ನಡೆದಿದೆ.

ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಈಗಾಗಲೇ ಈ ಜಾಮರ್ ವ್ಯವಸ್ಥೆಯಿದೆ. ದಕ್ಷಿಣ ವಲಯದ ಮೈಸೂರು, ಶಿವಮೊಗ್ಗ ಕಾರಾಗೃಹ, ಮಹಿಳಾ ಕಾರಾಗೃಹ, ಉತ್ತರ ವಲಯದ ಬಳ್ಳಾರಿ, ಧಾರವಾಡ, ಬೆಳಗಾವಿ, ವಿಜಯಪುರ ಮತ್ತು ಕಲಬುರಗಿಯ ಕೇಂದ್ರ ಕಾರಾಗೃಹಗಳಲ್ಲಿ ಜಾಮರ್‌ ಅಳವಡಿಕೆ ಆಗಬೇಕಿದೆ.

ಜಾಮರ್ ಅಳವಡಿಕೆಗೆ ಸಂಬಂಧಿಸಿದಂತೆ ಆಯಾ ಕಾರಾಗೃಹಗಳ ವಿನ್ಯಾಸ, ಸ್ಥಿತಿಗತಿ ಮತ್ತು ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹ ಪ್ರಕ್ರಿಯೆ ನಡೆದಿದೆ.

ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿ ಈ ಮೊದಲು 2ಜಿ ಸಾಮರ್ಥ್ಯದ ಜಾಮರ್‌ಗಳಿದ್ದವು. ತಂತ್ರಜ್ಞಾನ ಅಭಿವೃದ್ಧಿ ಆದ ಬಳಿಕ ಅವು ಸಮರ್ಥವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾದವು. 3ಜಿ ಸಾಮರ್ಥ್ಯಕ್ಕೆ ನವೀಕರಿಸಿದರೂ ಹೆಚ್ಚು ಪ್ರಯೋಜನ ಆಗಲಿಲ್ಲ. ಇದರ ಹಿನ್ನೆಲೆಯಲ್ಲಿ ಅತ್ಯಾಧುನಿಕ ಮಾದರಿಯ ಜಾಮರ್‌ಗಳ ಅಳವಡಿಕೆ ಬಗ್ಗೆ ಸರ್ಕಾರ ಚಿಂತನೆ ನಡೆಸಿತ್ತು. ಬೆಂಗಳೂರಿನ ಕಾರಾಗೃಹದಲ್ಲಿನ ನಟ ದರ್ಶನ್ ಚಿತ್ರ, ವಿಡಿಯೊಗಳು ವೈರಲ್ ಆದ ಬಳಿಕ ಅತ್ಯಾಧುನಿಕ ಮಾದರಿಯ ಜಾಮರ್‌ಗಳ ಅಳವಡಿಕೆ ಅನಿವಾರ್ಯ ಎಂಬ ಚರ್ಚೆ ನಡೆಯಿತು.  

‘ಅತ್ಯಾಧುನಿಕ ಜಾಮರ್‌ಗಳ ಅಳವಡಿಕೆ ಬಳಿಕ ಕಾರಾಗೃಹಗಳಲ್ಲಿ ಮೊಬೈಲ್ ಫೋನ್‌ ಮತ್ತು ಅಂತರ್ಜಾಲ ಬಳಕೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತದೆ. ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂವಹನಕ್ಕೆ ಸ್ಥಿರ ದೂರವಾಣಿ ಸೌಲಭ್ಯ, ಇ–ಮೇಲ್, ವಾಕಿಟಾಕಿ ಮಾತ್ರ ಬಳಸಬೇಕಾಗುತ್ತದೆ' ಎಂದು ಕಾರಾಗೃಹದ ಅಧಿಕಾರಿಯೊಬ್ಬರು ತಿಳಿಸಿದರು.

ಕೇಂದ್ರ ಕಾರಾಗೃಹಗಳಲ್ಲಿ ಟಿ–ಎಚ್‌ಸಿಬಿಎಸ್‌ ಎಂಬ ಜಾಮರ್‌ಗಳ ಅಳವಡಿಸಲಾಗುವುದು. ಅನಧಿಕೃತ ಸಂವಹನ ತಡೆಗೆ ಟಿ–ಎಚ್‌ಸಿಬಿಎಸ್‌ ವ್ಯವಸ್ಥೆ ನೆರವಾಗಲಿದೆ.
–ಟಿ.ಪಿ ಶೇಷ ಉಪ ಮಹಾನಿರೀಕ್ಷಕರು ಕಾರಾಗೃಹ ಇಲಾಖೆ ಉತ್ತರ ವಲಯ

ಜಾಮರ್‌ ಹೇಗೆ ಪರಿಣಾಮಕಾರಿ?

ದೂರವಾಣಿ ಕರೆ ನಿಯಂತ್ರಣ ವ್ಯವಸ್ಥೆ (ಟಿ–ಎಚ್‌ಸಿಬಿಎಸ್) ಕಾರಾಗೃಹಗಳಲ್ಲಿ ಅಳವಡಿಸುವ ಮುನ್ನ ಟೆಲಿಕಾಂ ಸೇವಾ ಪೂರೈಕೆದಾರರು ಆಯಾ ಪ್ರದೇಶದಲ್ಲಿನ ಸಿಗ್ನಲ್‌ಗಳ ವ್ಯಾಪ್ತಿ ಸಾಮರ್ಥ್ಯ ಮತ್ತು ಗುಣಮಟ್ಟ ಪರಿಶೀಲಿಸುತ್ತಾರೆ. ನಂತರ ನಿರ್ದಿಷ್ಟ ಪ್ರದೇಶದ ಸಿಗ್ನಲ್ ಪ್ರಮಾಣ ಹೊಂದಾಣಿಕೆ ಮಾಡುತ್ತಾರೆ. ಈ ಜಾಮರ್ ಮೊಬೈಲ್ ಫೋನ್ ಕರೆ ನಿಯಂತ್ರಣದ ಜೊತೆಗೆ ಎಸ್‌ಎಂಎಸ್ ಮತ್ತು ಅಂತರ್ಜಾಲ ಬಳಕೆ ನಿರ್ಬಂಧಿಸುತ್ತದೆ. ಇದು ಕಾರಾಗೃಹಕ್ಕೆ ಸೀಮಿತವಾಗಿ ಸಮರ್ಪಕವಾಗಿ  ಅಳವಡಿಕೆ ಆಗಬೇಕು. ಇಲ್ಲದಿದ್ದರೆ ಆಯಾ ಕಾರಾಗೃಹದ ಸುತ್ತಮುತ್ತಲ ಪ್ರದೇಶದಲ್ಲಿ ದೂರವಾಣಿ ಸೇವೆಯಲ್ಲಿ ವ್ಯತ್ಯಯವಾಗುತ್ತದೆ.  ಜಮ್ಮು ಕಾಶ್ಮೀರ ಬಿಹಾರ ತಮಿಳುನಾಡು ರಾಜಸ್ಥಾನ ಮತ್ತು ಉತ್ತರ ಪ್ರದೇಶದ ತಿಹಾರ್‌ ಕಾರಾಗೃಹ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಈ ಜಾಮರ್ ವ್ಯವಸ್ಥೆಯನ್ನು ಈಗಾಗಲೇ ಅಳವಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT