ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪತ್ರಕರ್ತ ಕುಮಾರ್ ಮೇಲ್ಮನವಿ ಅರ್ಜಿ ವಜಾ: ಶರಣಾಗುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ

Published : 4 ಆಗಸ್ಟ್ 2024, 13:25 IST
Last Updated : 4 ಆಗಸ್ಟ್ 2024, 13:25 IST
ಫಾಲೋ ಮಾಡಿ
Comments

ನವದೆಹಲಿ: ಅಕ್ರಮವಾಗಿ ಕೋಟ್ಯಂತರ ರೂಪಾಯಿಗಳ ಮೊತ್ತವನ್ನು ಮೂರನೇ ವ್ಯಕ್ತಿಗೆ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಕನ್ನಡದ ಸುದ್ದಿ ವಾಹಿನಿ ‘ಬಿ’ ಟಿವಿ ವ್ಯವಸ್ಥಾಪಕ ನಿರ್ದೇಶಕ ಗಂಗಾಧರಪ್ಪ ಮುನೀಂದ್ರ ಕುಮಾರ್ ಅಲಿಯಾಸ್‌ ಜಿ.ಎಂ.ಕುಮಾರ್‌ (50) ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. 

ಸೆಷನ್ಸ್ ನ್ಯಾಯಾಲಯ ನೀಡಿದ್ದ ಜಾಮೀನನ್ನು ಏಪ್ರಿಲ್‌ 19ರಂದು ರದ್ದುಪಡಿಸಿದ್ದ ಕರ್ನಾಟಕ ಹೈಕೋರ್ಟ್‌, ಆರೋಪಿಯನ್ನು ಕೂಡಲೇ ವಶಕ್ಕೆ ಪಡೆದು ಸಂಬಂಧಿಸಿದ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸುವಂತೆ ಸಿಸಿಬಿ ಪೊಲೀಸರಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕುಮಾರ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಹಾಗೂ ಅಹ್ಸಾನುದ್ದೀನ್‌ ಅಮಾನುಲ್ಲಾ ಪೀಠ, ಅರ್ಜಿದಾರರು ಆಗಸ್ಟ್‌ 13ರೊಳಗೆ ನ್ಯಾಯಾಲಯಕ್ಕೆ ಶರಣಾಗಬೇಕು ಎಂದು ನಿರ್ದೇಶನ ನೀಡಿದೆ. 

ಕರ್ನಾಟಕ ಸರ್ಕಾರದ ಪರ ವಕೀಲರು, ‘ಅರ್ಜಿದಾರರು ₹10 ಕೋಟಿಗೂ ಹೆಚ್ಚು ಹಣವನ್ನು ದುರುಪಯೋಗಪಡಿಸಿಕೊಂಡಿರುವುದರಿಂದ ಕಸ್ಟಡಿ ವಿಚಾರಣೆಯ ಅಗತ್ಯವಿದೆ’ ಎಂದು ವಾದ ಮಂಡಿಸಿದರು. 

ಪ್ರಕರಣವೇನು?: ‘ಬಿ’ ಟಿವಿ ಮಾತೃ ಸಂಸ್ಥೆ ಈಗಲ್‌ ಸೈಟ್‌ ಮೀಡಿಯಾ ಪ್ರೈವೆಟ್‌ ಲಿಮಿಟೆಡ್‌ನಿಂದ ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದಡಿ ಜಿ.ಎಂ.ಕುಮಾರ್‌ ವಿರುದ್ಧ ಬೆಂಗಳೂರಿನ ವಿಜಯನಗರ ಪೊಲೀಸ್‌ ಠಾಣೆಯಲ್ಲಿ 2022ರಲ್ಲಿ ದೂರು ದಾಖಲಾಗಿತ್ತು. ಭಾರತೀಯ ದಂಡ ಸಂಹಿತೆಯ ಕಾಯ್ದೆಯಡಿ, ನಂಬಿಕೆಯ ಉಲ್ಲಂಘನೆ ಮತ್ತು ವಂಚನೆ ಆರೋಪಗಳ ಕುರಿತು ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಈ ಸಂಬಂಧ ಜಿ.ಎಂ.ಕುಮಾರ್‌ ನಿರೀಕ್ಷಣಾ ಜಾಮೀನು ಕೋರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ 2023ರ ಆಗಸ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. ನಂತರ ಪೊಲೀಸರು ಆರೋಪಿಯನ್ನು 2023ರ ನವೆಂಬರ್‌ 25ರಂದು ಬಂಧಿಸಿದ್ದರು. ನ್ಯಾಯಾಂಗ ವಶಕ್ಕೆ ಒಪ್ಪಿಸಿ ಕೋರ್ಟ್‌ ಆದೇಶಿಸಿತ್ತು. ಅನಾರೋಗ್ಯದ ಕಾರಣ ನೀಡಿದ್ದ ಆರೋಪಿಯು ಜೈಲುವಾಸದ ಬದಲಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಏತನ್ಮಧ್ಯೆ, 56ನೇ ಸೆಷನ್ಸ್‌ ನ್ಯಾಯಾಲಯ 2023ರ ಡಿಸೆಂಬರ್‌ 13ರಂದು ಜಾಮೀನು ಮಂಜೂರು ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT