ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತದಿಂದ ಕನ್ನಡವನ್ನು ಬೇರ್ಪಡಿಸಲಾಗದು: ಮಹೇಶ್‌ ಜೋಶಿ

ಮುಂದಿನ 5 ವರ್ಷದಲ್ಲಿ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ರಾಮನಗರದಲ್ಲಿ ಆಯೋಜಿಸಲು ಚಿಂತನೆ
Last Updated 3 ಮಾರ್ಚ್ 2023, 10:46 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ತಿಪ್ಪಸಂದ್ರ ಮಾರುತಿ ಪಬ್ಲಿಕ್‌ ಶಾಲೆ ಆವರಣದ ಎಚ್‌.ವಿ.ನಂಜುಂಡಯ್ಯ ಪ್ರಧಾನ ವೇದಿಕೆಯಲ್ಲಿ ಗುರುವಾರ ನಡೆದ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಕ.ಸಾ.ಪ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಚಾಲನೆ ನೀಡಿದರು.

ನಂತರ ಮಾತನಾಡಿ, ಕನ್ನಡ ಚಿರಂಜೀವಿ ಭಾಷೆ. ಹುಯಿಲುಗೋಳ ನಾರಾಯಣ ರಾಯರು ಹೇಳಿದಂತೆ ಇದು ಹನುಮನುದಿಸಿದ ನಾಡು. ಕನ್ನಡದ ಗುಣಗಳನ್ನು ಬಿಂಬಿಸಿದವನು ಆಂಜನೇಯ, ವಿವಿಧ ಬುಡುಕಟ್ಟು ಸಮುದಾಯಗಳನ್ನು ಒಳಗೊಂಡಿರುವ ಜಿಲ್ಲೆಯು ಜನಪದ ಕಲೆಗಳ ತೊಟ್ಟಿಲಿದ್ಷಂತೆ. ಸಂಸ್ಕೃತ ಪಂಡಿತರೊಬ್ಬರನ್ನು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸೂಕ್ತವಾಗಿದೆ. ಸಂಸ್ಕೃತದಿಂದ ಕನ್ನಡವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಕನ್ನಡ ಸಾಹಿತ್ಯ ಪರಿಷತ್‌ಗೆ ಅಡಿಪಾಯ ಹಾಕಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮತ್ತು ಎಚ್‌.ವಿ ನಂಜುಂಡಯ್ಯ ಅವರನ್ನು ಮರೆಯಬಾರದು ಎಂದರು.

ಮಾಗಡಿ ತಿಪ್ಪಸಂದ್ರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಮನಗರ ತಾ.ಪಂ ಇಒ ಪ್ರದೀಪ್‌, ರಂಗಕಲಾವಿದೆ ಸೌಭಾಗ್ಯ, ಶಿಲ್ಪಿ ಗಣೇಶ್‌ ಕುಂಬಾರ,            ಆರ್‌.ಕೆ.ಭೈರಲಿಂಗಯ್ಯ ಅವರನ್ನು ಸಮ್ಮೇಳನದ ಅಧ್ಯಕ್ಷ ಡಾ.ಸಿ.ನಂಜುಂಡಯ್ಯ ಸನ್ಮಾನಿಸಿದರು. ಮಹೇಶ್‌ ಜೋಶಿ ಇದ್ದರು
ಮಾಗಡಿ ತಿಪ್ಪಸಂದ್ರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಮನಗರ ತಾ.ಪಂ ಇಒ ಪ್ರದೀಪ್‌, ರಂಗಕಲಾವಿದೆ ಸೌಭಾಗ್ಯ, ಶಿಲ್ಪಿ ಗಣೇಶ್‌ ಕುಂಬಾರ, ಆರ್‌.ಕೆ.ಭೈರಲಿಂಗಯ್ಯ ಅವರನ್ನು ಸಮ್ಮೇಳನದ ಅಧ್ಯಕ್ಷ ಡಾ.ಸಿ.ನಂಜುಂಡಯ್ಯ ಸನ್ಮಾನಿಸಿದರು. ಮಹೇಶ್‌ ಜೋಶಿ ಇದ್ದರು

ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳಾದ ಕನ್ನಡದ ಸರ್ಕಾರಿ ಶಾಲೆ ಮುಚ್ಚಬಾರದು. ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು. ಸರ್ಕಾರ ಸಮಗ್ರ ಕನ್ನಡ ಭಾಷಾ ವಿಧೇಯಕ ಮಂಡಿಸಿದ್ದು, ಶಿಕ್ಷಣ ಮತ್ತು ವ್ಯಾಪಾರದಲ್ಲಿ ಕನ್ನಡ ಅಧಿಕೃತ ಭಾಷೆಯನ್ನಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ತೀರ್ಪು ನೀಡುವಂತಾಗಬೇಕು. ಕನ್ನಡ ಮಾತನಾಡುವವರ ಸಂಖ್ಯೆ ತೀರಾ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು.

ಸಮ್ಮೇಳನ ಕನ್ನಡದ ಮಹತ್ವ ಜನಮಾನಸದಲ್ಲಿ ಬಿತ್ತಿ ಬೆಳೆಸಲು ಮಾರ್ಗದರ್ಶಿಯಾಗಬೇಕು. ಮಕ್ಕಳು ಆಂಗ್ಲಮಾಧ್ಯಮ ಶಾಲೆಯಲ್ಲಿ ಕಲಿತರೂ ಕೂಡ ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡಬೇಕು. ಮುಂದಿನ 5 ವರ್ಷದಲ್ಲಿ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ರಾಮನಗರದಲ್ಲಿ ಆಯೋಜಿಸುವ ಬಗ್ಗೆ ಯೋಚನೆ ಇದೆ. ಎಚ್‌.ವಿ.ನಂಜುಂಡಯ್ಯ ಅವರಿದ್ದ ಹೆಬ್ಬಳಲು ಗ್ರಾಮದಲ್ಲಿ ಸ್ಮಾರಕ ರಚಿಸುವ ಆಲೋಚನೆ ಇದೆ ಎಂದರು.

ಕವಿ ಬಿ.ಆರ್‌.ಲಕ್ಷ್ಮಣ್‌ ರಾವ್‌ ಮಾತನಾಡಿ, ಸಂಸ್ಕೃತದ ಅಪಾರ ಜ್ಞಾನವನ್ನು ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸಿ.ನಂಜುಂಡಯ್ಯ ಕನ್ನಡದ ಮಕ್ಕಳಿಗೆ ಮೌಲಿಕ ಕೃತಿ ರಚಿಸುವ ಮೂಲಕ ಉಣಬಡಿಸಲಿ ಎಂದರು.

ನಿಕಟ ಪೂರ್ವ ಅಧ್ಯಕ್ಷ ಪ್ರೊ.ಎಂ.ಶಿವನಂಜಯ್ಯ ಪರಿಷತ್ತಿನ ಧ್ವಜ ಹಸ್ತಾಂತರಿಸಿ ಮಾತನಾಡಿ, ಸಾಹಿತ್ಯ ಸಮ್ಮೇಳನ ಆಚರಿಸಿ ಸಂಭ್ರಮಿಸುವುದರ ಜತೆಗೆ ವೈಜ್ಞಾನಿಕವಾಗಿ ಕನ್ನಡ ಭಾಷೆ ಬೆಳೆಸಬೇಕು. ಚಲನಚಿತ್ರ ನಟ, ನಟಿಯರು ಮತ್ತು ಟಿ.ವಿಗಳಲ್ಲಿ ನಿರೂಪಕರು ನಿತ್ಯ ಕನ್ನಡ ಕೊಲೆ ಮಾಡುತ್ತಿರುವುದರ ವಿರುದ್ಧ ಜನಜಾಗೃತಿ ಮೂಡಿಸಬೇಕು. ಟಿ.ವಿ.ಗಳಲ್ಲಿ ಇಂಗ್ಲಿಷ್‌ ಗೆ ಮೊದಲ ಆದ್ಯತೆ ನೀಡಿ, ಕನ್ನಡವನ್ನು ಹಿತ್ತಲ ಭಾಷೆ ಮಾಡುತ್ತಿದ್ದಾರೆ. ಕವಿಗಳು ಪಂಪನಂತೆ ಪ್ರಭುತ್ವಕ್ಕೆ ಅಂಕುಶ ಹಾಕಬೇಕು ಎಂದರು.

ಔಪಚಾರಿಕ ಸಮ್ಮೇಳನಕ್ಕಿಂತ ಮೌಲ್ವಿಕ ಸಮ್ಮೇಳನ ಹೆಚ್ಚಬೇಕು. ಜಿಲ್ಲೆಯಲ್ಲಿ ಪರಿಸರ ನಾಶವಾಗುತ್ತಿದೆ. ಮಣ್ಣು ವಿಷವಾಗುತ್ತಿದೆ. ಮುಸುಕಿನ ಜೋಳಕ್ಕೂ ವಿಷ ಸಿಂಪಡಿಸಲಾಗುತ್ತಿದೆ. ಹದ್ದುಗಳು ಮತ್ತು ಇತರ ಪಕ್ಷಿಗಳು ಕಡಿಮೆಯಾಗುತ್ತಿವೆ. ಕರಡಿ, ಚಿರತೆಗಳು ಜಾಸ್ತಿಯಾಗುತ್ತಿವೆ. ಜಿಲ್ಲೆಯಲ್ಲಿ ಹೊರ ರಾಜ್ಯದವರು ಅಕ್ರಮವಾಗಿ ಸರ್ಕಾರಿ ಭೂಮಿ ಕಬಳಿಕೆ ಮಾಡಿಕೊಳ್ಳುತ್ತಿದ್ದಾರೆ. ಬೆಟ್ಟಗುಡ್ಡಗಳೆಲ್ಲ ಕ್ರಷರ್‌ ಭಯದಿಂದ ನಾಶವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ತಹಶೀಲ್ದಾರ್‌ ಜಿ.ಸುರೇಂದ್ರ ಮೂರ್ತಿ ಮಾತನಾಡಿ, ತಿಪ್ಪಾನಾಯಕನ ಪಾಳೆ ಪಟ್ಟಾಗಿದ್ದ ತಿಪ್ಪಸಂದ್ರದಲ್ಲಿ ಚೆನ್ನಕೇಶವ ದೇವಾಲಯ ಉಳಿಸಲಾಗುವುದು ಎಂದರು.

ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಬಿ.ಟಿ ನಾಗೇಶ್‌ ಸ್ವಾಗತಿಸಿದರು. ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಪದ್ಮನಾಭ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತ್ತಿಂಗೆರೆ ಗ್ರಾಮದ ಕವಿ.ಸಿದ್ದಲಿಂಗಸ್ವಾಮಿ.ಆರ್‌, ರಚಿಸಿರುವ ನ್ಯಾಯಾಧೀಶ ವೀರ ಪವಾಡಯ್ಯ ಮತ್ತು ಗುರು ಎಡೆಯೂರು ತೋಂಟದ ಸಿದ್ದಲಿಂಗೇಶ್ವರ ಸಮಗ್ರ ವಚನಗಳ ಸಂಪಾದನೆ ಕೃತಿಗಳನ್ನು ಡಾ.ಮಹೇಶ್‌ ಜೋಶಿ ಬಿಡುಗಡೆಗೊಳಿಸಿದರು. ತಾ.ಪಂ ಇಒ ಚಂದ್ರು, ಸಾಹಿತಿ ಪಾಣ್ಯಂ ನಟರಾಜು, ಆರ್‌.ಕೆ.ಭೈರಲಿಂಗಯ್ಯ, ಜಿಲ್ಲಾ ಮತ್ತು ತಾಲ್ಲೂಕು ಕಸಾಪ ಪದಾಧಿಕಾರಿಗಳು ಇದ್ದರು.

ರಾಮನಗರ ತಾ.ಪಂ.ಇ. ಒಪ್ರದೀಪ್‌, ರಂಗಕಲಾವಿದೆ ಸೌಭಾಗ್ಯಮ್ಮ, ಗಣಪತಿ ಶಿಲ್ಪಿ ಗಣೇಶ್‌ ಕುಂಬಾರ, ಅವರನ್ನು
ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT