ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ನೀತಿ ಸಂಹಿತೆ: ₹379 ಕೋಟಿ ಮೌಲ್ಯದ ಸ್ವತ್ತುಗಳ ವಶ

Published 9 ಮೇ 2023, 20:17 IST
Last Updated 9 ಮೇ 2023, 20:17 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದ ಮಾರ್ಚ್‌ 29ರಿಂದ ಮೇ 9ರ ಸಂಜೆಯವರೆಗೆ ಅಕ್ರಮ ತಡೆಗೆ ನಡೆಸಿದ ಕಾರ್ಯಾಚರಣೆಗಳಲ್ಲಿ ₹ 379.36 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ಜಾಗೃತ ದಳಗಳು, ತನಿಖಾ ಠಾಣೆಗಳು ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆಗಳಲ್ಲಿ ₹ 150.05 ಕೋಟಿ ನಗದು, ₹ 24.23 ಕೋಟಿ ಮೌಲ್ಯದ ಉಚಿತ ಕೊಡುಗೆಗಳು, ₹ 84.62 ಕೋಟಿ ಮೌಲ್ಯದ 22.57 ಲಕ್ಷ ಲೀಟರ್‌ ಮದ್ಯ, ₹ 23.84 ಕೋಟಿ ಮೌಲ್ಯದ 1,972.29 ಕೆ.ಜಿ. ಮಾದಕ ವಸ್ತುಗಳು, ₹ 91.96 ಕೋಟಿ ಮೌಲ್ಯದ 179.82 ಕೆ.ಜಿ. ಚಿನ್ನ ಮತ್ತು ₹ 4.63 ಕೋಟಿ ಮೌಲ್ಯದ 669.41 ಕೆ.ಜಿ. ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಈವರೆಗೆ 2,970 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅಬಕಾರಿ ಕಾಯ್ದೆ ಉಲ್ಲಂಘನೆ ಆರೋಪದಡಿ 43,622 ಹಾಗೂ ಮಾದಕಸ್ತು ನಿಯಂತ್ರಣ ಕಾಯ್ದೆ ಉಲ್ಲಂಘನೆ ಆರೋಪದಡಿ 103 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ₹ 1.90 ಕೋಟಿ ಜಪ್ತಿ

ಬೆಂಗಳೂರು: ಅಕ್ಕಿಪೇಟೆ ಮುಖ್ಯರಸ್ತೆ ಪವನ್‌ ಪ್ಲಾಜಾ ಕಟ್ಟಡದಲ್ಲಿರುವ ಪದ್ಮಶ್ರೀ ಫಾರ್ಮಾ ಮಳಿಗೆ ಮೇಲೆ ಸಿಸಿಬಿ ಪೊಲೀಸರು, ಚುನಾವಣಾಧಿಕಾರಿಗಳು ದಾಳಿ ಮಾಡಿದ್ದು, ₹ 1.90 ಕೋಟಿ ಜಪ್ತಿ ಮಾಡಿದ್ದಾರೆ.

‘ಕಾಟನ್‌ಪೇಟೆ ಠಾಣೆ ವ್ಯಾಪ್ತಿಯ ಮಳಿಗೆಯಲ್ಲಿ ಹಣವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬಗ್ಗೆ ಮಾಹಿತಿ ಬಂದಿತ್ತು. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ತಂಡದ ಜೊತೆ ಸೇರಿ ಮಂಗಳವಾರ ಜಂಟಿ ಕಾರ್ಯಾಚರಣೆ ನಡೆಸಿ ಹಣ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಈ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಜಪ್ತಿ ಮಾಡಿರುವ ನಗದು ಹೆಚ್ಚಿರುವುದರಿಂದ ನಿಯಮದ ಪ್ರಕಾರ ಪ್ರಕರಣದ ತನಿಖೆಯನ್ನು ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ನಡೆಸಲಿದ್ದಾರೆ. ಜಪ್ತಿ ಮಾಡಿರುವ ಹಣ ಹಾಗೂ ವಶಕ್ಕೆ ಪಡೆದ ಆರೋಪಿಗಳನ್ನು ಐ.ಟಿ. ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಲಾಗಿದೆ. ಅವರೇ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ತಿಳಿಸಿದರು. ‘ಉದ್ಯಮಿಯೊಬ್ಬರಿಗೆ ಸೇರಿದ್ದ ಹಣವೆಂದು ಗೊತ್ತಾಗಿದೆ. ಸಂಬಂಧಪಟ್ಟ ಉದ್ಯಮಿ ಹಾಗೂ ಇತರರಿಗೆ ಐ.ಟಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆ ನಡೆಸಲಿದ್ದಾರೆ’ ಎಂದರು.

ಎಂ-ಸ್ಯಾಂಡ್‌ನಲ್ಲಿ ಬಚ್ಚಿಟ್ಟಿದ್ದ ₹ 50 ಲಕ್ಷ ವಶ
ಎಚ್.ಡಿ.ಕೋಟೆ:
ತಾಲ್ಲೂಕಿನ ಸವ್ವೆ ಬಳಿಯ ತೋಟದ ಮನೆಯಲ್ಲಿದ್ದ ಲಾರಿಯಲ್ಲಿ ತುಂಬಿದ್ದ ಎಂ-ಸ್ಯಾಂಡ್‌ನಲ್ಲಿ ಮುಚ್ಚಿಟ್ಟಿದ್ದ ₹ 50 ಲಕ್ಷ ನಗದನ್ನು ಸಹಾಯಕ ಚುನಾವಣಾ ಅಧಿಕಾರಿ ಕುಮುದಾ ಶರತ್ ನೇತೃತ್ವದಲ್ಲಿ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡರು.

‘ಚುನಾವಣೆಗೆ ಹಂಚಲು ಹಣವನ್ನು ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ತಾಲ್ಲೂಕು ಖಜಾನೆಗೆ ಒಪ್ಪಿಸಲಾಗಿದೆ’ ಎಂದು ಅವರು ತಿಳಿಸಿದರು. ತಹಶೀಲ್ದಾರ್ ಪಿ.ಎನ್.ಮಹೇಶ್ ಇದ್ದರು. ಸ್ಥಳದಲ್ಲಿ ಅಕ್ಕಪಕ್ಕದ ಗ್ರಾಮಸ್ಥರು ನೆರೆದಿದ್ದರಿಂದ ಬಿಗುವಿನ ವಾತಾವರಣ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT