ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15X20 ಅಡಿ ಅಳತೆ ನಿವೇಶನ: ಮಾಗಡಿ: ಬಿಜೆಪಿ ಸಂಭಾವ್ಯ ಅಭ್ಯರ್ಥಿಯಿಂದ ಆಮಿಷ

Last Updated 10 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ರಾಮನಗರ: ಚುನಾವಣೆ ಹಿನ್ನೆಲೆಯಲ್ಲಿ ಈವರೆಗೆ ಮತದಾರರಿಗೆ ನಗದು, ಉಡುಗೊರೆಗಳನ್ನು ಹಂಚುತ್ತಿದ್ದ ಸಂಭಾವ್ಯ ಅಭ್ಯರ್ಥಿಗಳು ಇದೀಗ ನಿವೇಶನದಂತಹ ಭಾರಿ ಉಡುಗೊರೆ ನೀಡಲು ಮುಂದಾಗಿದ್ದಾರೆ.

ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿಯಾಗಿರುವ ಪ್ರಸಾದ್ ಗೌಡ, ತನ್ನ ಕ್ಷೇತ್ರದ ವ್ಯಾಪ್ತಿಯ ಒಂದು ಸಾವಿರಕ್ಕೂ ಅಧಿಕ ಮಂದಿಗೆ 15X20 ಅಡಿ ಅಳತೆಯ ನಿವೇಶನ ನೀಡುವುದಾಗಿ ಪತ್ರಿಕಾಗೋಷ್ಠಿಯಲ್ಲಿಯೇ ಘೋಷಣೆ ಮಾಡಿದ್ದಾರೆ.

ಒಟ್ಟು 10 ಎಕರೆಯಲ್ಲಿ ಬಡವರು, ನಿರ್ಗತಿಕರಿಗಾಗಿ ನಿವೇಶನ ನೀಡಲು ಯೋಜಿಸಿದ್ದು, ಇದಕ್ಕೆ ಬಿಡದಿ ಬಳಿಯ ಕೆಂದಪ್ಪನಹಳ್ಳಿಯಲ್ಲಿ ತನ್ನ ತಂದೆಯ ಹೆಸರಿನಲ್ಲಿ ಇರುವ ನಾಲ್ಕು ಎಕರೆ ಜಮೀನಿನ ಜೊತೆಗೆ ಅಗತ್ಯವಿರುವ ಇನ್ನಷ್ಟು ಜಮೀನಿನ ಖರೀದಿ ನಡೆದಿದೆ. ಜಿಲ್ಲಾಧಿಕಾರಿ ಇದರ ಭೂಪರಿವರ್ತನೆ ಮಾಡಿಕೊಟ್ಟ ಬಳಿಕ ಲೇಔಟ್‌ ನಿರ್ಮಿಸಲಿದ್ದು, ಚುನಾವಣೆ ವೇಳೆಗೆ ಹಂಚುತ್ತೇನೆ ಎಂದು ಪ್ರಸಾದ್‌ ಗೌಡ ತಿಳಿಸಿದ್ದಾರೆ.

ಮಾಗಡಿ ಕ್ಷೇತ್ರದ ವ್ಯಾಪ್ತಿಯ ಬಡವರ್ಗದ ಮತದಾರರು ತಮ್ಮ ಆಧಾರ್ ಕಾರ್ಡ್‌, ಮತದಾರರ ಗುರುತಿನ ಚೀಟಿಯ ಜೊತೆಗೆ ಅರ್ಜಿ ಸಲ್ಲಿಸುವಂತೆಯೂ ಅವರು ಆಹ್ವಾನಿಸಿದ್ದಾರೆ.

ಮಾಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹೆಸರು ಇನ್ನೂ ಅಂತಿಮಗೊಂಡಿಲ್ಲ. ರಿಯಲ್‌ ಎಸ್ಟೇಟ್‌ ಉದ್ಯಮಿ ಆಗಿರುವ ಪ್ರಸಾದ್‌ ಗೌಡ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಅವರು ಈ ಹಿಂದೆ ಮತದಾರರಿಗೆ ಚಿನ್ನದ ಮೂಗುತಿ, ಗರ್ಭಿಣಿಯರಿಗೆ ಸೀಮಂತ ಮೊದಲಾದ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದರು.

ಮದುವೆ ಭಾಗ್ಯ: ಸಿಪಿವೈ ಭರವಸೆ
ಚನ್ನಪಟ್ಟಣ ಕ್ಷೇತ್ರದ ರಾಜಕಾರಣ ದಿನೇ ದಿನೇ ರಂಗೇರುತ್ತಿದ್ದು ಒಂದಿಲ್ಲೊಂದು ಘೋಷಣೆಗಳ ಮೂಲಕ ಮತದಾರರನ್ನು ಆಕರ್ಷಿಸುವ ಪ್ರಯತ್ನ ನಡೆದೇ ಇದೆ.

ಜೆಡಿಎಸ್ ಮುಖಂಡ ಎಚ್‌.ಡಿ. ಕುಮಾರಸ್ವಾಮಿ ರೈತ ಯುವಕರನ್ನು ಮದುವೆಯಾಗುವ ವಧುವಿಗೆ ₹2 ಲಕ್ಷದ ಆಫರ್ ನೀಡಿದ್ದರೆ, ಪ್ರತಿಸ್ಪರ್ಧಿ ಬಿಜೆಪಿಯ ಸಿ.ಪಿ. ಯೋಗೇಶ್ವರ್‌ ಯುವಕರಿಗೆ ‘ಕಲ್ಯಾಣ ಭಾಗ್ಯ’ದ ಭರವಸೆ ನೀಡಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ಬೇವೂರಿನಲ್ಲಿ ಈಚೆಗೆ ನಡೆದ ಪ್ರಚಾರ ಕಾರ್ಯಕ್ರಮದ ವೇಳೆ, ಸ್ಥಳೀಯ ಯುವಕರಿಗೆ ವಧುಗಳು ಸಿಗುತ್ತಿಲ್ಲ ಎಂಬ ಬಗ್ಗೆ ಅಲ್ಲಿನ ಜನರು ಯೋಗೇಶ್ವರ್‌ ಅವರ ಗಮನ ಸೆಳೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಪಿವೈ, ಶಾಸಕನಾಗಿ ಆಯ್ಕೆ ಆದಲ್ಲಿ ಇದಕ್ಕೆಂದೇ ಪ್ರತ್ಯೇಕ ಸಮಿತಿ ರೂಪಿಸಿ ಅವಿವಾಹಿತ ಯುವಕರ ಕಲ್ಯಾಣಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT