ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಬಜೆಟ್ ಕುರಿತ ನಡೆದ ಚರ್ಚೆಯಲ್ಲಿ ಬಿಜೆಪಿಯ ಎಚ್. ವಿಶ್ವನಾಥ್ ಅವರ ಮಾತು ‘ಗುಂಡು’ನತ್ತ ತಿರುಗಿ ಮತ್ತಿನ ಗಮ್ಮತ್ತಿನಲ್ಲಿ ಕೆಲಹೊತ್ತು ತೇಲಿ ಹೋಯಿತು. ಗುಂಡಿನ ಕುರಿತ ಚರ್ಚೆಗೆ ಇಡೀ ಸದನ ನಗೆಗಡಲಲ್ಲಿ ತೇಲಾಡಿತು.
ವಿಶ್ವನಾಥ್ ಮೊದಲಿಗೆ ಶಾಸಕಾಂಗ ಸಭೆ, ಮಾಧ್ಯಮ ರಂಗದ ಬದಲಾದ ಚಿತ್ರಣ ತೆರೆದಿಟ್ಟರು. ‘ಸತ್ಯ ಹೇಳುವ ಧೈರ್ಯವನ್ನು ನಾವು (ಸದಸ್ಯರು) ಕಳೆದುಕೊಂಡಿದ್ದೇವೆ. ಮಾಧ್ಯಮಗಳೂ ಮೊದಲಿನಂತೆ ಸುದ್ದಿ ಮಾಡುತ್ತಿಲ್ಲ. ಜಗಳಗಳೇ ಸುದ್ದಿ ಆಗುತ್ತಿವೆ’ ಎಂದರು.
‘ಇಂದು ನಮ್ಮ (ಸದಸ್ಯರ) ಭಾಷಾ ಪ್ರಯೋಗದಿಂದ ಗೌರವ ಹಾಳು ಮಾಡಿಕೊಂಡಿದ್ದೇವೆ. ಈ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳ ನಾಯಕರ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಭ್ರಷ್ಟರ ಸಂತೆ ಎನ್ನುತ್ತಾರೆ. ಪರಮೋಚ್ಛ ಸ್ಥಾನದಲ್ಲಿರುವ ಪ್ರಧಾನಿ ಹೀಗೆ ಹೇಳುವುದನ್ನು ನಾನು ಒಪ್ಪಲ್ಲ’ ಎಂದು ವಿರೋಧ ವ್ಯಕ್ತಪಡಿಸಿದರು.
‘ಬೆಳಿಗ್ಗೆ ಎದ್ದಲ್ಲಿಂದ ರಾತ್ರಿ ಮಲಗುವವರೆಗೂ ಜಿಎಸ್‌ಟಿ ಕಟ್ಟುತ್ತೇವೆ’ ಎಂದು ವಿಶ್ವನಾಥ್ ಹೇಳಿದಾಗ, ‘ಗುಂಡಿನ ಬಗ್ಗೆ ಹೇಳಲಿಲ್ಲವಲ್ಲ’ ಎಂದು ಬಿಜೆಪಿ ಸದಸ್ಯರು ಕಾಲೆಳೆದರು. ಆಗ ವಿಶ್ವನಾಥ್, ‘ಸಮ್ಮಿಶ್ರ ಸರ್ಕಾರದ ಪತನ ಸಮಯದಲ್ಲಿ ನಾರಾಯಣಸ್ವಾಮಿ (ವೈ.ಎ. ನಾರಾಯಣಸ್ವಾಮಿ) ಮನೆಯಲ್ಲಿ ಸೇರುವಾಗ ಗುಂಡು ಹೊಡೆಯುತ್ತಿದ್ದೆವು’ ಎಂದರು. ಅದಕ್ಕೆ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ, ‘ಯಾವ ನಾರಾಯಣಸ್ವಾಮಿ? ಎಣ್ಣೆ ವಿಚಾರದಲ್ಲಿ ನಾನಿಲ್ಲ’ ಎಂದರು. ಈ ವೇಳೆ, ಸದನದಲ್ಲಿ ನಗೆ ಉಕ್ಕಿತು. ಸುಮಾರು 10 ನಿಮಿಷ ಗುಂಡಿನ ಬಗ್ಗೆಯೇ ಚರ್ಚೆ ನಡೆಯಿತು.
‘ವಿಶ್ವನಾಥ್ ಈಗ ಗುಂಡು ಹೊಡೆಯುವುದು ಬಿಟ್ಟಿದ್ದಾರೆ. ಬಜೆಟ್ ಬಗ್ಗೆ ಮಾತನಾಡುವಾಗ ಲಾಟರಿ, ಸಾರಾಯಿ ನಿಷೇಧ ಮಾಡಿದ್ದನ್ನು ಸರ್ಕಾರಕ್ಕೆ ಹೇಳಿ’ ಎಂದು ವೈ.ಎ. ನಾರಾಯಣಸ್ವಾಮಿ ಕಿಚಾಯಿಸಿದರು. ಬಿಜೆಪಿಯ ಎನ್. ರವಿಕುಮಾರ್, ‘ಮದ್ಯದ ಸುಂಕ ಹೆಚ್ಚಾಗಿದೆ. ಮದ್ಯಪ್ರಿಯರ ಬಗ್ಗೆ ಕಾಳಜಿಯಿಂದ ಬೆಳಕು ಚೆಲ್ಲಲಿ’ ಎಂದರು. ಆಗ ತೇಜಸ್ವಿನಿ ಗೌಡ, ‘ಈಗ ಬೆಳಕು ಚೆಲ್ಲಲು ಆಗುವುದಿಲ್ಲ. ಇದು ರಾತ್ರಿಯಲ್ಲಿ ನಡೆಯುವ ವಿಷಯ’ ಎಂದು ಚಟಾಕಿ ಹಾರಿಸಿದರು.
ಬಿಜೆಪಿಯ ಭಾರತಿ ಶೆಟ್ಟಿ, ‘ಗುಂಡು ಹೊಡೆದವರ ಜೊತೆ ನಾವು ಬದುಕುತ್ತಿದ್ದೇವೆ’ ಎಂದರು. ಬಿಜೆಪಿ ಸದಸ್ಯರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಭಾನಾಯಕ ಎನ್.ಎಸ್. ಬೋಸರಾಜ್, ‘ಗುಂಡು ಹಾನಿಕರ ಎಂದು ಅದಕ್ಕೆ ಕಡಿವಾಣ ಹಾಕಲು ಸುಂಕ ಹೆಚ್ಚಿಸಿದ್ದೇವೆ’ ಎಂದು ಸಮರ್ಥನೆ ನೀಡಿದರು.
ಗುಂಡಿನ ಚರ್ಚೆ ಜೋರಾಗುತ್ತಿದ್ದಂತೆ, ‘ಗುಂಡು ಹೊಡೆಯದೇ ಇರುವವರಿಗೆ ಇಷ್ಟು ಗುಂಡಿಗೆ ಇರುವುದಾದರೆ ಗುಂಡು ಹಾಕುವ ನಮಗೆ ಎಷ್ಟು ಗುಂಡಿಗೆ ಇರಬೇಕು’ ಎಂದು ಹೇಳಿದ ವಿಶ್ವನಾಥ್, ‘ನಾವು ಗೆದ್ದಾಗಲೂ ಕುಡಿಯುತ್ತೇವೆ. ಸೋತಾಗಲೂ ಕುಡಿಯುತ್ತೇವೆ. ಸತ್ತಾಗಲೂ ಕುಡಿಯುತ್ತೇವೆ. ಸರ್ವ ರೋಗಕ್ಕೂ ಸಾರಾಯಿ ಮದ್ದು ಎಂಬ ಮಾತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.