ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ವಿಧಾನಮಂಡಲ ಅಧಿವೇಶನ: ವಾಕ್ಸಮರ ‘ಗ್ಯಾರಂಟಿ’

ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲರಿಂದ ಭಾಷಣ, 7ರಂದು ಬಜೆಟ್‌ ಮಂಡನೆ
Published 2 ಜುಲೈ 2023, 23:30 IST
Last Updated 2 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನ ಸೋಮವಾರ (ಜುಲೈ 3) ಆರಂಭವಾಗಲಿದೆ. 10 ದಿನಗಳ ಕಲಾಪ ಆಡಳಿತ ಪಕ್ಷ ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್‌ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಲಿದೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಐದು ‘ಗ್ಯಾರಂಟಿ’ಗಳ ಅನುಷ್ಠಾನದಲ್ಲಿ ಗೊಂದಲ, ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು (ಮತಾಂತರ ನಿಷೇಧ) ಕಾಯ್ದೆ ರದ್ದತಿಗೆ ಮಸೂದೆ ಮಂಡನೆ ಮತ್ತಿತರ ವಿಚಾರಗಳು ಉಭಯ ಸದನಗಳಲ್ಲಿ ಪ್ರತಿಧ್ವನಿಸಲಿವೆ.

ಮಧ್ಯಾಹ್ನ 12 ಗಂಟೆಗೆ ವಿಧಾನಸಭೆಯ ಸಭಾಂಗಣದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆ ಮೂಲಕ, ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನಕ್ಕೆ ಚಾಲನೆ ಸಿಗಲಿದೆ. ಹೊಸ ಸರ್ಕಾರದ ಮುನ್ನೋಟ, ಅಭಿವೃದ್ಧಿ ಯೋಜನೆಗಳ ಜೊತೆಗೆ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ವಾಗ್ದಾನ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳಿವೆ.

ಜುಲೈ 4ರಿಂದ ಪ್ರಶ್ನೋತ್ತರ, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸೇರಿದಂತೆ ಕಾರ್ಯಕಲಾಪಗಳು ನಡೆಯಲಿವೆ. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7ರಂದು ಬಜೆಟ್‌ ಮಂಡಿಸಲಿದ್ದಾರೆ. ಆಯವ್ಯಯದ ಗಾತ್ರ ಹೆಚ್ಚಾಗಲಿದೆ ಎಂಬ ಸುಳಿವನ್ನು ಈಗಾಗಲೇ ಮುಖ್ಯಮಂತ್ರಿ ನೀಡಿರುವುದರಿಂದ, ಈ ಬಜೆಟ್‍ನಲ್ಲಿ ಐದು ‘ಗ್ಯಾರಂಟಿ’ಗಳಿಗೆ ಆರ್ಥಿಕ ಸಂಪನ್ಮೂಲ ಒದಗಿಸುವ ಬಗ್ಗೆ ಪ್ರಸ್ತಾಪಿಸುವ ನಿರೀಕ್ಷೆಯಿದೆ.

ಐದೂ ‘ಗ್ಯಾರಂಟಿ’ಗಳನ್ನು ಆಡಳಿತ ಸೂತ್ರ ಹಿಡಿದ ಬೆನ್ನಲ್ಲೇ ಯಾವುದೇ ಷರತ್ತುಗಳು ಇಲ್ಲದೆ ಅನುಷ್ಠಾನಗೊಳಿಸುವ ಭರವಸೆಯನ್ನು ಕಾಂಗ್ರೆಸ್‌ ನೀಡಿತ್ತು. ಈ ಪೈಕಿ, ‘ಶಕ್ತಿ’ (ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ) ಜಾರಿಯಾಗಿದೆ. ಉಳಿದ ಯೋಜನೆಗಳು ಇನ್ನಷ್ಟೆ ಅನುಷ್ಠಾನಗೊಳ್ಳಬೇಕಿದೆ. ಈ ಗ್ಯಾರಂಟಿಗಳಿಗೆ ಷರತ್ತು ವಿಧಿಸಿರುವುದನ್ನು‌ ಈಗಾಗಲೇ ಟೀಕಿಸಿರುವ ಬಿಜೆಪಿ, ಜೆಡಿಎಸ್‌ ಅನುಷ್ಠಾನಕ್ಕೆ ಎದುರಾಗಿರುವ ಗೊಂದಲಗಳನ್ನು ಪ್ರಮುಖ ಅಸ್ತ್ರವಾಗಿ ಬಳಸಲು ಸಜ್ಜಾಗಿವೆ. ಅಷ್ಟೇ ಪ್ರಬಲವಾಗಿ ಸರ್ಕಾರದ ನಿಲುವು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಕೂಡ ಸಿದ್ಧವಾಗಿದೆ.

ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯ ಪ್ರಮುಖರು, ಉಭಯ ಸದನಗಳ ಒಳಗೆ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

‘ಗ್ಯಾರಂಟಿ’ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಸದನದ ಒಳಗೂ ಹೊರಗೂ ಹೋರಾಟ ಮಾಡುತ್ತೇವೆ. ಸದನವನ್ನು ನಡೆಸಲು ಬಿಡುವುದಿಲ್ಲ’ ಎಂದು ಯಡಿಯೂರಪ್ಪ ಈಗಾಗಲೇ ಗುಡುಗಿದ್ದಾರೆ. ‘ವರ್ಗಾವಣೆ ದಂಧೆ ಮುಗಿಲೇರಿದೆ’ ಎಂದು ಆರೋಪಿಸಿರುವ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಈ ವಿಷಯವನ್ನು ಸದನದ ಒಳಗೂ ಪ್ರಸ್ತಾಪಿಸುವ ಸಾಧ್ಯತೆಯಿದೆ.

ಮಳೆ ಕೊರತೆಯಿಂದ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಅಭಾವ, ಅಂತರರಾಜ್ಯ ನೀರಿನ ಬಿಕ್ಕಟ್ಟು, ಮುಂಗಾರು ಹಂಗಾಮಿನ ಬಿತ್ತನೆ ಕುಂಠಿತ, ಸರ್ಕಾರ ಪರಿಹಾರ ಕ್ರಮಗಳು ಸದನದಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗುವ ಸಾಧ್ಯತೆಯಿದೆ. ಜೊತೆಗೆ, ವಿದ್ಯುತ್ ಶುಲ್ಕ ಹೆಚ್ಚಳ, ಅನ್ನಭಾಗ್ಯದ 5 ಕೆ.ಜಿ. ಹೆಚ್ಚುವರಿ ಅಕ್ಕಿ ಬದಲು ಹಣ ನೀಡುವುದು, ಇನ್ನೂ ‌ಆರಂಭವಾಗದ ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳ ವಿಚಾರದಲ್ಲಿಯೂ ಸರ್ಕಾರವನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಏಳು ಮಸೂದೆಗಳು ಮಂಡನೆಗೆ ಸಿದ್ಧ

ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಹುದ್ದೆಗೆ ಶಾಸಕರನ್ನು ಪರಿಗಣಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ‘ವಿಧಾನಸಭಾ ಸದಸ್ಯರ ಅನರ್ಹತಾ ನಿರ್ವಹಣಾ ಕಾಯ್ದೆ’ಗೆ ತಿದ್ದುಪಡಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು (ಮತಾಂತರ ನಿಷೇಧ) ಕಾಯ್ದೆ –2021 ರದ್ದು ಹಿಂದಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆ ಮರು ಜಾರಿ ಕರ್ನಾಟಕ ಅಗ್ನಿಶಾಮಕ ಕಾಯ್ದೆ ತಿದ್ದುಪಡಿ (ಹೈ ರಿಸ್ಕ್‌ ಕಟ್ಟಡಗಳಿಗೆ ಸಂಬಂಧಿಸಿದ್ದು) ಜಿಎಸ್‌ಟಿ ಎಸ್‌.ಸಿ ಎಸ್‌.ಟಿ ಗುತ್ತಿಗೆದಾರರಿಗೆ ಮೀಸಲಾತಿಯಡಿ ನೀಡುವ ಕಾಮಗಾರಿಗಳನ್ನು ₹ 50 ಲಕ್ಷದಿಂದ ₹ 1 ಕೋಟಿಗೆ ಹೆಚ್ಚಿಸಲು ಕೆಟಿಪಿಪಿ ಕಾಯ್ದೆ ತಿದ್ದುಪಡಿ ಸೇರಿದಂತೆ ಏಳು ಮಸೂದೆಗಳನ್ನು ಮಂಡಿಸಲು ರಾಜ್ಯ ಸಚಿವ ಸಂಪುಟ ಸಭೆ ಈಗಾಗಲೇ ಒಪ್ಪಿಗೆ ನೀಡಿದೆ.

ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಜಾನುವಾರು ಹತ್ಯೆ ಪ್ರತಿಬಂಧಕ (ಗೋಹತ್ಯೆ) ಕಾಯ್ದೆಯನ್ನು ಹಿಂಪಡೆದು 1964ರಿಂದಲೂ ಜಾರಿಯಲ್ಲಿರುವ ಕಾಯ್ದೆಯ ಮರು ಜಾರಿ ಸರ್ಕಾರಿ ವ್ಯಾಜ್ಯಗಳ ನಿರ್ವಹಣೆಗೆ ಕಾಯ್ದೆ ಸರ್ಕಾರಿ ವ್ಯಾಜ್ಯಗಳಲ್ಲಿರುವ ರೈತರ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ‘ಸಿವಿಲ್‌ ಪ್ರಕ್ರಿಯಾ ಸಂಹಿತೆ’ (ಸಿಪಿಸಿ) ತಿದ್ದುಪಡಿಗೂ ಮಸೂದೆ ಮಂಡಿಸಲು ಸರ್ಕಾರ ಮುಂದಾಗಿದೆ. ಆದರೆ ಈ ಮಸೂದೆಗಳಿಗೆ ಸಚಿವ ಸಂಪುಟ ಸಭೆ ಇನ್ನಷ್ಟೆ ಅನುಮೋದನೆ ನೀಡಬೇಕಿದೆ.

ಸ್ಪೀಕರ್‌ ಆಗಿ ನನಗೆ ಮೊದಲ ಅಧಿವೇಶನ ಬಹಳ ಆಸಕ್ತಿಯಿಂದ ಇದ್ದೇನೆ. ಪ್ರೀತಿ ಸೌಹಾರ್ದದಿಂದ ಅಧಿವೇಶನ ನಡೆಸಬೇಕು ಅಂದುಕೊಂಡಿದ್ದೇನೆ. ಎಲ್ಲ ಶಾಸಕರು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ
ಯು.ಟಿ. ಖಾದರ್‌ ಫರೀದ್‌ ವಿಧಾನ ಸಭಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT