ಬೆಂಗಳೂರು: ಎಸ್‌ಸಿ ಮತ್ತು ಎಸ್‌ಟಿ ಗುತ್ತಿಗೆದಾರರು ಕೈಗೊಳ್ಳುವ ನಿರ್ಮಾಣ ಕಾಮಗಾರಿಗಳ ಮೊತ್ತದ ಮಿತಿಯನ್ನು ₹50 ಲಕ್ಷದಿಂದ ₹1 ಕೋಟಿಗೆ ಹೆಚ್ಚಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಮಸೂದೆಗೆ ವಿಧಾನಸಭೆ ಶುಕ್ರವಾರ ಅಂಗೀಕಾರ ನೀಡಿತು.
ಮುಖ್ಯಮಂತ್ರಿಗಳ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಅವರು ಮಸೂದೆಗೆ ಅಂಗೀಕಾರ ಕೋರಿದರು.
₹50 ಲಕ್ಷ ಇದ್ದ ಸಂದರ್ಭದಲ್ಲಿ ಮೊದಲ ಬಾರಿ ಟೆಂಡರ್ ಕರೆದಾಗ ಶೇ 62 ರಷ್ಟು, ಎರಡನೇ ಬಾರಿ ಕರೆದಾಗ ಶೇ 82 ರಷ್ಟು ಮಂದಿ ಭಾಗಹಿಸಿದ್ದರು. ಕ್ರಮೇಣ ಇದರಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಎಂದು ಪಾಟೀಲ ಹೇಳಿದರು.
ಎಸ್‌ಸಿ ಎಸ್‌ಟಿ ಸಮುದಾಯದ ಗುತ್ತಿಗೆದಾರರಿಗೆ ಟೆಂಡರ್ ₹1 ಕೋಟಿಗೆ ಹೆಚ್ಚಳ ಮಾಡುವ ತಿದ್ದುಪಡಿ ಸ್ವಾಗತಾರ್ಹ. ಈ ಕಾಯ್ದೆ ಜಾರಿಗೆ ಬಂದ ಮೇಲೆ ಎಸ್‌ಸಿ ಎಸ್‌ಟಿ ಸಮುದಾಯ ಉತ್ಸಾಹದಿಂದ ಕೆಲಸ ಮಾಡಲು ಮುಂದೆ ಬರುತ್ತಿದ್ದಾರೆ ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿಯ ಆರಗ ಜ್ಞಾನೇಂದ್ರ ಮಾತನಾಡಿ, ಎಸ್‌ಸಿ ಎಸ್‌ಟಿಗಳ ಹೆಸರಿನಲ್ಲಿ ಬೇರೆಯವರು ಗುತ್ತಿಗೆ ಪಡೆದು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಈ ಸಮುದಾಯಗಳ ಯುವಕರಿಗೆ ಗುತ್ತಿಗೆ ಪಡೆದು ಕೆಲಸ ಮಾಡುವ ಬಗ್ಗೆ ತಜ್ಞರಿಂದ ತರಬೇತಿ ಕೊಡಿಸಬೇಕು ಮತ್ತು ರೋಡ್ ರೋಲರ್, ಕಾಂಕ್ರೀಟ್ ಮಿಕ್ಸರ್ ಉಪಕರಣಗಳನ್ನು ಕೊಡಿಸಬೇಕು ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.