ಬೆಂಗಳೂರು: ‘ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಿರುವ ನ್ಯಾಯಯುತ ಆರ್ಥಿಕ ಪಾಲಿನ ಬಾಕಿ ಉಳಿಸಿಕೊಂಡಿರುವುದು ಬಜೆಟ್ ಮೇಲೂ ಪರಿಣಾಮ ಬೀರಿದೆ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರನ್ನೂ ಒಳಗೊಂಡ ಸರ್ವಪಕ್ಷ ನಿಯೋಗ ತೆರಳಿ, ಒತ್ತಡ ಹಾಕಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಜೆಟ್ ಮೇಲಿನ ಚರ್ಚೆಗೆ ವಿಧಾನಪರಿಷತ್ನಲ್ಲಿ ಗುರುವಾರ ಅವರು ಉತ್ತರ ನೀಡಿದರು.

‘ಗ್ಯಾರಂಟಿ ಯೋಜನೆಗಳನ್ನು ಬಿಟ್ಟರೆ ಯಾವುದೇ ಜನಪರ ಕಾರ್ಯಕ್ರಮಗಳನ್ನು ನೀಡಿಲ್ಲ. ಉತ್ತರ ತೃಪ್ತಿ ತಂದಿಲ್ಲ’ ಎಂದು ಆರೋಪಿಸಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ–ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

ವಿಪಕ್ಷ ಸದಸ್ಯರ ಅನುಪಸ್ಥಿತಿಯಲ್ಲಿಯೇ, ಧನ ವಿನಿಯೋಗದ ಮಸೂದೆಗಳಿಗೆ ಸರ್ಕಾರ ಅನುಮೋದನೆ ಪಡೆಯಿತು.

ಇದಕ್ಕೆ ಮೊದಲು ಮಾತನಾಡಿದ ಸಿದ್ದರಾಮಯ್ಯ ಅವರು, ‘ಕೇಂದ್ರ ಸರ್ಕಾರ ತೆರಿಗೆ, ಅನುದಾನ, ಯೋಜನೆಗಳ ಪಾಲು ಸೇರಿದಂತೆ ಎಲ್ಲ ರೀತಿಯಲ್ಲೂ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಜಿಎಸ್ಟಿ ಪರಿಷ್ಕರಣೆಯಿಂದ ₹10 ಸಾವಿರ ಕೋಟಿ ನಷ್ಟವಾಗಿದೆ. 15ನೇ ಹಣಕಾಸು ಶಿಫಾರಸು ಮಾಡಿದ ₹11,495 ಕೋಟಿ, ಭದ್ರ ಮೇಲ್ಡಂಡೆ ಯೋಜನೆಗೆ 2023-24ನೇ ಸಾಲಿನ ಬಜೆಟ್ನಲ್ಲಿ ನೀಡಬೇಕಿರುವ ₹5,300 ಕೋಟಿ, ಜಲ ಜೀವನ್ ಮಿಷನ್ ಬಾಕಿ ₹15,000 ಕೋಟಿ ಸೇರಿದಂತೆ ಬಾಕಿ ಇದೆ’ ಎಂದರು.

‘ಎಲ್ಲ ಬಾಕಿ ಮೊತ್ತ ನೀಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕೊಡಮ್ಮ ತಾಯಿ ಎಂದು ಬೇಡಿಕೊಂಡರೂ ಸ್ಪಂದಿಸಿಲ್ಲ. ಹಲವು ಬಾರಿ ದೆಹಲಿಗೆ ತೆರಳಿ ದಮ್ಮಯ್ಯ ಎಂದರೂ ಹಣ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ, ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಈ ಯಾವ ಘೋಷಣೆಗಳು ಫಲ ಕಾಣಲಿಲ್ಲ. ರಾಜ್ಯಕ್ಕಾಗಿರುವ ಅನ್ಯಾಯವನ್ನು ರಾಜ್ಯ ಬಿಜೆಪಿ ನಾಯಕರು ಪ್ರಶ್ನಿಸಬೇಕು. ಈಗಲಾದರೂ ಸರ್ವಪಕ್ಷದ ನಿಯೋಗದ ಜತೆ ಬರಬೇಕು. ರಾಜ್ಯದ ಪರವಾಗಿ ಕೇಂದ್ರದ ಬಳಿ ಧ್ವನಿ ಎತ್ತಬೇಕು’ ಎಂದು ಹೇಳಿದರು.

‘ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ಅಧಿಸೂಚನೆಯನ್ನೇ ಹೊರಡಿಸಿಲ್ಲ. ಇದರ ಜಾರಿಗೆ ಬಿಜೆಪಿ ಸಂಸದರೂ ಪ್ರಯತ್ನಿಸಬೇಕು. ಯೋಜನೆಯ ಭೂಸ್ವಾಧೀನಕ್ಕೆ ₹3,000 ಕೋಟಿ ಇಡಲಾಗಿದೆ. ಬಿಜೆಪಿ ಆಡಳಿತದಲ್ಲಿದ್ದಾಗ ಭೂ ಪರಿಹಾರ ನೀಡಬಹುದಾಗಿತ್ತು. ನೀರಾವರಿ ಜಮೀನಿಗೆ ₹40 ಲಕ್ಷ ಹಾಗೂ ಖುಷ್ಕಿ ಜಮೀನಿಗೆ ₹30 ಲಕ್ಷ ನಿಗದಿ ಮಾಡಿದ್ದೇವೆ. ಪೂರಕ ಬಜೆಟ್ನಲ್ಲಿ ಮತ್ತಷ್ಟು ಅನುದಾನ ನೀಡಲಾಗುವುದು. ಮಹದಾಯಿ, ಮೇಕೆದಾಟು ಯೋಜನೆಗೂ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿಲ್ಲ’ ಎಂದು ದೂರಿದರು.

‘ಬಿಜೆಪಿ ಶ್ರೀಮಂತರ ಪರವಾಗಿದೆ. ಬಡವರ ವಿರೋಧಿ. ಅದಕ್ಕಾಗಿಯೇ ಬಡವರು, ಮಹಿಳೆಯರ ಸಬಲೀಕರಣದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದೆ. ಮಹಿಳಾ ಪರ ಕಾರ್ಯಕ್ರಮಗಳನ್ನು ವಿರೋಧಿಸುವುದು ಮನುವಾದ’ ಎಂದು ಸಿದ್ದರಾಮಯ್ಯ ಟೀಕಿಸಿದರು.

ದುರಂಧರ್–ದುರಂತರ್...

ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ‘ಬಜೆಟ್ ಟೀಕೆಗಳಿಗೆಉತ್ತರ ನೀಡುವಾಗ ಕೇಂದ್ರ ಸರ್ಕಾರವನ್ನು ಟೀಕಿಸುತ್ತಾರೆ.

ದೇಶದ ರಕ್ಷಣೆಗೆ ವ್ಯಯಿಸುವ ಲೆಕ್ಕ ರಾಜ್ಯದ ಜತೆ ಹೋಲಿಸಲು ಸಾಧ್ಯವಿಲ್ಲ. ಆಪರೇಷನ್ ಸಿಂಧೂರ ನಡೆಸಿದ ಪ್ರಧಾನಿ ನರೇಂದರ್ ನಮ್ಮ ದುರಂಧರ್’ ಎಂದರು. ಅದಕ್ಕೆ ಆಡಳಿತ ಪಕ್ಷದ ಸದಸ್ಯರು ದುರಂತರ್ ಎಂದು ಕೂಗಿದರು. ‘ನೀವು ಒಪ್ಪಿಕೊಂಡಿರಲ್ಲ ಧನ್ಯವಾದ’ ಎಂದು ಛಲವಾದಿ ಪ್ರತಿಕ್ರಿಯಿಸಿದರು. ಆಗ ಬಿಜೆಪಿಯ ಭಾರತಿ ಶೆಟ್ಟಿ ಅವರು ‘ಕಾಂಗ್ರೆಸ್ ಸದಸ್ಯರು ಟೀಕೆ ಮಾಡುತ್ತಿದ್ದಾರೆ’ ಎಂದು ಎಚ್ಚರಿಸಿದರು.

‘ನೀವು ವ್ಯಕ್ತಿ ಪೂಜೆ ಮಾಡಬೇಡಿ ಹಾಗೆ ಮಾಡಿದರೆ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ. ಪ್ರಜಾಪ್ರಭುತ್ವ ನಾಶಕ್ಕೆ ಕಾರಣವಾಗುತ್ತದೆ’ ಎಂದು ಸಚಿವ ಎಂ.ಬಿ.ಪಾಟೀಲ ಬೈರತಿ ಸುರೇಶ್ ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್ ಬಿಜೆಪಿ ಸದಸ್ಯರಿಗೆ ಸಲಹೆ ನೀಡಿದರು. ‘ಹೈಕಮಾಂಡ್ ಬಯಸಿದರೆ ಇನ್ನೂ ಎರಡು ಬಜೆಟ್ ಮಂಡಿಸುವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇಂತಹ ಬಜೆಟ್ ಮಂಡಿಸುವುದಾದರೆ ಅವರು ಹಣಕಾಸು ಖಾತೆಯನ್ನೇ ವಹಿಸಿಕೊಳ್ಳದಿರುವುದು ಒಳ್ಳೆಯದು’ ಎಂದು ಛಲವಾದಿ ಟೀಕಿಸಿದರು.

ಬೊಮ್ಮಾಯಿ ಖರ್ಚು ₹37 ಕೋಟಿ: ಸಿದ್ದರಾಮಯ್ಯ

ಮುಖ್ಯಮಂತ್ರಿಯಾಗಿ ಸಮಯದ ಅಭಾವದ ಕಾರಣ ಹೆಲಿಕಾಪ್ಟರ್ ವಿಶೇಷ ವಿಮಾನ ಬಳಸಿದ್ದನ್ನೇ ಪ್ರತಿಪಕ್ಷಗಳು ಟೀಕಿಸಿವೆ. ವಾಸ್ತವದಲ್ಲಿ ಬಿಜೆಪಿ ಅವಧಿಯಲ್ಲೇ ಅಂದಿನ ಮುಖ್ಯಮಂತ್ರಿಗಳು ವಿಮಾನಯಾನಕ್ಕೆ ಅಧಿಕ ಹಣ ವ್ಯಯಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

‘ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ 2021–22ರಲ್ಲಿ ₹37 ಕೋಟಿ ಖರ್ಚು ಮಾಡಿದ್ದಾರೆ. 2023–24ರಲ್ಲಿ ನಾನು ಖರ್ಚು ಮಾಡಿರುವುದು ₹29 ಕೋಟಿ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಂದು ವರ್ಷಕ್ಕೆ ₹814 ಕೋಟಿ ವ್ಯಯಿಸಿದ್ದಾರೆ’ ಎಂದು ಅಂಕಿಅಂಶ ನೀಡಿದರು. ಬಿಜೆಪಿ ನಾಯಕರು ಅರ್ಥವಿಲ್ಲದೆ ಟೀಕೆ ಮಾಡುತ್ತಾರೆ. ರಾಜ್ಯ ಸರ್ಕಾರಗಳು ಪುರಸಭೆಗಳಲ್ಲ. ದೇಶ ಸುಭದ್ರವಾಗಿರಲು ಒಕ್ಕೂಟ ವ್ಯವಸ್ಥೆ ಕಾರಣ. ಕರ್ನಾಟಕದಿಂದ ಕೇಂದ್ರಕ್ಕೆ ತೆರಿಗೆ ರೂಪದಲ್ಲಿ 2024–25ನೇ ಸಾಲಿನಲ್ಲಿ ₹4.50 ಲಕ್ಷ ಕೋಟಿ ಹೋಗಿದೆ. ಇದನ್ನೆಲ್ಲ ಕೇಂದ್ರ ಸರ್ಕಾರ ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ವಿಧಾನಪರಿಷತ್ ಸದಸ್ಯರ ನಿಧಿ ಹೆಚ್ಚಳ

ವಿಧಾನ ಪರಿಷತ್ ಸದಸ್ಯರ ಕ್ಷೇತ್ರಾಭಿವೃದ್ಧಿ ಅನುದಾನವನ್ನು ಹೆಚ್ಚಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ವಾರ್ಷಿಕ ಅನುದಾನವನ್ನು ₹2ಕೋಟಿಯಿಂದ ₹4 ಕೋಟಿಗೆ ಹೆಚ್ಚಳ ಮಾಡಬೇಕು. ವಿಧಾನಸಭೆಯ ಸದಸ್ಯರ ರೀತಿಯಲ್ಲೇ ವಿಧಾನಪರಿಷತ್ ಸದಸ್ಯರ ಕ್ಷೇತ್ರಗಳ ಮೂಲ ಸೌಕರ್ಯ ಅಭಿವೃದ್ಧಿಗೆ ₹5ರಿಂದ ₹10 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಆಡಳಿತ–ವಿರೋಧ ಪಕ್ಷಗಳ ಸದಸ್ಯರ ಮನವಿಗೆ ಸ್ಪಂದಿಸಿದ ಅವರು ಈಗಾಗಲೇ ಬಜೆಟ್ನಲ್ಲಿ ₹4000 ಕೋಟಿ ಮೀಸಲಿಡಲಾಗಿದೆ. ಈ ಕುರಿತು ಚರ್ಚಿಸಿ ಖಚಿತ ನಿರ್ಧಾರ ಪ್ರಕಟಿಸಲಾಗುವುದು ಎಂದರು.

- ಎಬಿಸಿ ಗುಂಪಿಗೇ ಬೆಂಕಿ

ಒಳಮೀಸಲಾತಿ ಹೆಸರಿನಲ್ಲಿ ಪರಿಶಿಷ್ಟ ಸಮುದಾಯವನ್ನು ಎ ಬಿ ಸಿ ಗುಂಪುಗಳಾಗಿ ವಿಂಗಡಿಸಲಾಗಿದೆ. ಈಗ ಮೂರು ಗುಂಪುಗಳು ಪರಸ್ಪರ ಕಿತ್ತಾಟ ನಡೆಸಿವೆ. ಈ ಶ್ರೇಯಸ್ಸು ಸಿದ್ದರಾಮಯ್ಯ ಅವರಿಗೆ ಸಲ್ಲಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ಮೊದಲು ಎಲ್ಲರೂ ಪರಿಶಿಷ್ಟ ಸಮುದಾಯದ ನಾಯಕರು ಎಂದು ಹೇಳಿಕೊಳ್ಳುತ್ತಿದ್ದರು. ಈಗ ಪರಿಶಿಷ್ಟ ಸಮುದಾಯದ ಎಬಿಸಿ ವರ್ಗದ ನಾಯಕರು ಎಂದು ಹೇಳಿಕೊಳ್ಳಬೇಕಿದೆ. ಕೆಲ ಸಂಘಟನೆಗಳು ಸರ್ಕಾರದ ವಿರುದ್ಧ ಹೋರಾಟ ಹೋರಾಟವನ್ನೇ ಕೈಬಿಟ್ಟಿವೆ. ಪ್ಯಾಕೇಜ್ ಸಂಘಟನೆಗಳಾಗಿವೆ. ಪ್ರತಿಭಟನೆ ನೆಪದಲ್ಲಿ ಲಾಭ ಮಾಡಿಕೊಂಡು ಹೋಗುತ್ತಿದ್ದಾರೆ.

ಆಡಳಿತ–ವಿರೋಧ ಪಕ್ಷಕ್ಕೆ ‘ಪ್ರಜಾವಾಣಿ’ಯೇ ಆಕಾರ

ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಯ ಮರು ದಿನದ ‘ಪ್ರಜಾವಾಣಿ’ ಸಂಚಿಕೆಯ ಸಂಪಾದಕೀಯವನ್ನು ಸದನದಲ್ಲಿ ಓದಿದರು. 2026–27ನೇ ಸಾಲಿನ ಬಜೆಟ್ ಜನಸಾಮಾನ್ಯರ ಬಜೆಟ್ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ವಿರೋಧ ಪಕ್ಷಗಳ ಸದಸ್ಯರನ್ನು ಪ್ರಶ್ನಿಸಿದರು. ಆಗ ಛಲವಾದಿ ನಾರಾಯಣಸ್ವಾಮಿ ಸಿ.ಟಿ.ರವಿ ಅವರು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಬಜೆಟ್ ಮೇಲಿನ ಕೆಲ ವಿಶ್ಲೇಷಣೆಗಳನ್ನು ಪ್ರದರ್ಶಿಸಿ ‘ಪತ್ರಿಕೆಗಳ ವಸ್ತುನಿಷ್ಠ ವಿಮರ್ಶೆಗಳನ್ನೂ ಒಪ್ಪಿಕೊಳ್ಳಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.