ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ: ಇನ್ನಷ್ಟು ಕಗ್ಗಂಟು, ಖರ್ಗೆ ನೇತೃತ್ವದಲ್ಲಿ ಇಂದು ಸಭೆ

* ಸಚಿವರ ಪಟ್ಟಿಗೆ ಅಂತಿಮ ರೂಪ?
Published 26 ಮೇ 2023, 0:27 IST
Last Updated 26 ಮೇ 2023, 0:27 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್‌ನ ಕೇಂದ್ರ ನಾಯಕರ ಜತೆಗೆ ಗುರುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದರೂ ಕಗ್ಗಂಟು ಬಿಡಿಸಲಾಗಲಿಲ್ಲ.

ಸಚಿವರ ಪಟ್ಟಿಗೆ ಅಂತಿಮ ರೂಪ ನೀಡುವ ಸಂಬಂಧ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿದೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನು ಶುಕ್ರವಾರ ಭೇಟಿಯಾಗುವ ಸಾಧ್ಯತೆ ಇದೆ. ಸಚಿವರ ಪಟ್ಟಿಗೆ ವರಿಷ್ಠರು ಒಪ್ಪಿಗೆ ನೀಡಿದರೆ ಶನಿವಾರ ಸಂಪುಟ ವಿಸ್ತರಣೆಯಾಗಲಿದೆ. ‌ಬೆಳಿಗ್ಗೆ 11.30ಕ್ಕೆ ರಾಜಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಸಲು ಕಾಂಗ್ರೆಸ್‌ ಉದ್ದೇಶಿಸಿದೆ. 

ಈ ವರ್ಷದ ಅಂತ್ಯದಲ್ಲಿ ಚುನಾವಣೆ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢದ ಕಾಂಗ್ರೆಸ್‌ ಮುಖಂಡರೊಂದಿಗೆ ಹೈಕಮಾಂಡ್‌ನ ಸಭೆ ಶುಕ್ರವಾರಕ್ಕೆ ನಿಗದಿಯಾಗಿತ್ತು. ಕರ್ನಾಟಕದ ಸಚಿವ ಸಂಪುಟದ ಬಿಕ್ಕಟ್ಟನ್ನು ಬಗೆಹರಿಸುವ ಸಲುವಾಗಿ ಈ ಸಭೆಯನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ. 

ಸಂಪುಟದಲ್ಲಿ ಒಟ್ಟು 34 ಸಚಿವರ ಸೇರ್ಪಡೆಗೆ ಅವಕಾಶ ಇದೆ. ಈಗ 10 ಸ್ಥಾನಗಳು ಭರ್ತಿಯಾಗಿವೆ. 20 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಗುರುವಾರ ನಡೆದ ಸಭೆಯಲ್ಲಿ ಗಂಭೀರ ಚರ್ಚೆಗಳು ಆಗಿವೆ. 24 ಸ್ಥಾನಗಳನ್ನು ಒಂದೇ ಕಂತಿನಲ್ಲಿ ಭರ್ತಿ ಮಾಡಲು ಕೇಂದ್ರ ನಾಯಕತ್ವವು ಕಸರತ್ತು ನಡೆಸಿದೆ. ಪಟ್ಟಿ ಬಹುತೇಕ ಅಂತಿಮವಾಗಿದ್ದು, ಶನಿವಾರವೇ ಸಂಪುಟ ವಿಸ್ತರಣೆ ಆಗಲಿದೆ ಎಂದು ಸಿದ್ದರಾಮಯ್ಯ ಅವರ ಆಪ್ತ ಮೂಲಗಳು ತಿಳಿಸಿವೆ. ಪಟ್ಟಿ ಶೇ 80ರಷ್ಟು ಅಂತಿಮವಾಗಿದೆ ಎಂದು ಶಿವಕುಮಾರ್ ಆಪ್ತ ಮೂಲಗಳು ಹೇಳಿವೆ. 

ನವದೆಹಲಿಗೆ ಬುಧವಾರ ಪ್ರತ್ಯೇಕವಾಗಿ ಬಂದಿದ್ದ ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಅವರು ರಾತ್ರಿಯೇ ವರಿಷ್ಠರೊಂದಿಗೆ ಮೊದಲ ಸುತ್ತಿನ ಮಾತುಕತೆ ನಡೆಸಿದ್ದರು. ಕಾಂಗ್ರೆಸ್‌ ವಾರ್ ರೂಂನಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರೊಂದಿಗೆ ಉಭಯ ನಾಯಕರು ಸುಮಾರು ಏಳು ಗಂಟೆ ಚರ್ಚಿಸಿದರು. ಆದರೆ, ಸಭೆ ಅಪೂರ್ಣಗೊಂಡಿತು. ಶಿವಕುಮಾರ್ ಅವರು ಕೆಲವು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದರು. 

ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ತಮ್ಮ ಆಪ್ತ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು ಪಟ್ಟು ಹಿಡಿದಿದ್ದು, ನಾಲ್ಕೈದು ಶಾಸಕರ ಸೇರ್ಪಡೆ ವಿಷಯದಲ್ಲಿ ಸಹಮತಕ್ಕೆ ಬಂದಿಲ್ಲ. ವಿಧಾನ ಪರಿಷತ್‌ನಿಂದ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಕುರಿತು ಖರ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಪರಿಷತ್‌ನ ಸದಸ್ಯರಾದ ಬಿ.ಕೆ. ಹರಿಪ್ರಸಾದ್‌, ಪ್ರಕಾಶ್ ಹುಕ್ಕೇರಿ, ಪ್ರಕಾಶ್‌ ರಾಠೋಡ್‌, ಯು.ಬಿ.ವೆಂಕಟೇಶ್ ಸಂಪುಟಕ್ಕೆ ಸೇರ್ಪಡೆಯಾಗಲು ಲಾಬಿ ನಡೆಸಿದ್ದಾರೆ. ಹರಿಪ್ರಸಾದ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಿದ್ದರಾಮಯ್ಯ ಬಣ ವಿರೋಧ ವ್ಯಕ್ತಪಡಿಸಿದೆ. ಖರ್ಗೆ ಅವರನ್ನು ಭೇಟಿ ಮಾಡಿರುವ ಹರಿಪ್ರಸಾದ್‌ ಅವರು ಈ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ. ಮಧು ಬಂಗಾರಪ್ಪ ಅವರ ಸೇರ್ಪಡೆ ಕುರಿತು ಉಭಯ ನಾಯಕರು ಒಮ್ಮತಕ್ಕೆ ಬಂದಿಲ್ಲ. ಸಚಿವ ಸ್ಥಾನಕ್ಕೆ ಈಗ ಹರಿಪ್ರಸಾದ್‌ ಅವರನ್ನು ಪರಿಗಣಿಸಿ ಎರಡು ವರ್ಷಗಳ ಬಳಿಕ ಮಧು ಅವರಿಗೆ ಅವಕಾಶ ನೀಡುವ ಕುರಿತು ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆಗಳು ಆಗಿವೆ ಎಂದು ಮೂಲಗಳು ತಿಳಿಸಿವೆ. 

ಬ್ರಾಹ್ಮಣ ಕೋಟಾದಡಿ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ನಿರ್ಧಾರವನ್ನು ಖರ್ಗೆ ಅವರಿಗೆ ಬಿಡಲು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ. ಹಿರಿಯ ಶಾಸಕರಾದ ಆರ್.ವಿ.ದೇಶಪಾಂಡೆ ಹಾಗೂ ದಿನೇಶ್‌ ಗುಂಡೂರಾವ್‌ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಖರ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಈಶ್ವರ ಖಂಡ್ರೆ, ಎಚ್‌.ಕೆ.ಪಾಟೀಲ, ಸಂತೋಷ್‌ ಲಾಡ್‌, ಶಿವಾನಂದ ಪಾಟೀಲ, ಲಕ್ಷ್ಮಿ ಹೆಬ್ಬಾಳಕರ, ಎಸ್‌.ಎಸ್‌.ಮಲ್ಲಿಕಾರ್ಜುನ, ಶರಣ ಬಸ‍ಪ್ಪ ದರ್ಶನಾಪುರ, ಎಚ್‌.ಸಿ.ಮಹದೇವಪ್ಪ, ಪಿರಿಯಾಪಟ್ಟಣದ ವೆಂಕಟೇಶ್‌, ಬೈರತಿ ಸುರೇಶ್‌, ಕೃಷ್ಣ ಬೈರೇಗೌಡ, ಪುಟ್ಟರಂಗ ಶೆಟ್ಟಿ, ಡಿ.ಸುಧಾಕರ್‌, ಚೆಲುವರಾಯ ಸ್ವಾಮಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಬಹುತೇಕ ಒಮ್ಮತಕ್ಕೆ ಬಂದಿದ್ದಾರೆ. ಎನ್‌.ಎ. ಹ್ಯಾರಿಸ್‌ ಅವರಿಗೆ ಸಚಿವ ಸ್ಥಾನ ನೀಡಲು ಸಿದ್ದರಾಮಯ್ಯ ಒಪ್ಪಿಲ್ಲ ಎಂದೂ ಗೊತ್ತಾಗಿದೆ. 

ಶಿವಕುಮಾರ್ ಅವರು ಶುಕ್ರವಾರ ಬೆಳಿಗ್ಗೆ ಮತ್ತೆ ನವದೆಹಲಿಗೆ ಬರಲಿದ್ದು, ಹೈಕಮಾಂಡ್‌ನ ನಾಯಕರನ್ನು ಭೇಟಿ ಮಾಡಲಿದ್ದಾರೆ. ಮುಖ್ಯಮಂತ್ರಿಯವರು ಬೆಂಗಳೂರಿಗೆ ಶುಕ್ರವಾರ ಮರಳಲಿದ್ದಾರೆ. ಸಚಿವರಿಗೆ ಖಾತೆ ಹಂಚಿಕೆ ಕುರಿತು ಈ ವರೆಗೆ ಚರ್ಚೆ ನಡೆದಿಲ್ಲ. ಶುಕ್ರವಾರದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ಸಚಿವ ಸ್ಥಾನದ ಆಕಾಂಕ್ಷಿಗಳಾದ ಸುಮಾರು 40 ಶಾಸಕರು ನವದೆಹಲಿಗೆ ದೌಡಾಯಿಸಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ವರಿಷ್ಠರ ಬಳಿ ಲಾಬಿ ನಡೆಸಿದರು. ಹಲವು ಶಾಸಕರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಒತ್ತಡ ಹೇರುವ ಪ್ರಯತ್ನ ನಡೆಸಿದರು. 

ಮತ್ತೆ ‍ಪ್ರತಿಕ್ರಿಯಿಸುವೆ ಎಂದ ಸಿಎಂ: 

ಕರ್ನಾಟಕ ಭವನದಲ್ಲಿ ಗುರುವಾರ ಬೆಳಿಗ್ಗೆ ಪತ್ರಕರ್ತರನ್ನು ಉದ್ದೇಶಿಸಿ ಸಿದ್ದರಾಮಯ್ಯ, ‘ಏನ್ರಪ್ಪಾ, ಏನಾದರೂ ಕೇಳುವುದು ಇದೆಯಾ, ಸಂಪುಟ ವಿಸ್ತರಣೆ ವಿಷಯವೊಂದನ್ನು ಬಿಟ್ಟು’ ಎಂದು ಕೇಳಿದರು. ಆಗ ಪತ್ರಕರ್ತರು, ಸಂಪುಟ ವಿಸ್ತರಣೆ ಯಾವಾಗ ಎಂದು ಕೇಳಿದರು. ಅದಕ್ಕೆ ಮುಖ್ಯಮಂತ್ರಿ, ‘ಅದಕ್ಕೆ ಮತ್ತೆ ಪ್ರತಿಕ್ರಿಯಿಸುವೆ’ ಎಂದು ಹೇಳಿ ತೆರಳಿದರು. ವರಿಷ್ಠರ ಸಭೆಯ ಬಳಿಕ ಉಭಯ ನಾಯಕರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT