ಬೆಂಗಳೂರು: ರಾಜ್ಯದಲ್ಲಿನ ಬರದ ತೀವ್ರತೆಯ ಬಗ್ಗೆ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗವನ್ನು ಒಯ್ಯುವುದರ ಬಗ್ಗೆಯೂ ಪ್ರಸ್ತಾಪವಾಯಿತು ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಎಷ್ಟು ತಾಲ್ಲೂಕುಗಳು ಬರಪೀಡಿತವಾಗಿವೆ ಎಂಬುದನ್ನು ಮುಂದಿನ ಸಂಪುಟ ಸಭೆಯಲ್ಲಿ ಘೋಷಿಸಲಾಗುವುದು. ಬರಪೀಡಿತ ತಾಲ್ಲೂಕುಗಳಲ್ಲಿ ಎರಡನೇ ಬಾರಿಗೆ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಅದರ ವರದಿ ಬಂದ ನಂತರವೇ ಎಷ್ಟು ತಾಲ್ಲೂಕುಗಳ ಬರ ಪೀಡಿತ ಎಂದು ತೀರ್ಮಾನಿಸಲು ಸಾಧ್ಯ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬರ ಮಾನದಂಡ ಸರಿ ಇಲ್ಲ. ಹಿಂದೆ ಶೇ 20 ರಷ್ಟು ಮಳೆ ಕೊರತೆ ಇದ್ದರೆ ಬರ ಘೋಷಿಸಲು ಅವಕಾಶ ಇತ್ತು. ಈಗ ಶೇ 60 ರಷ್ಟು ಮಳೆ ಕೊರತೆ ಇರಬೇಕು ಮತ್ತು ಮೂರುವಾರ ನಿರಂತರ ಶುಷ್ಕ ಹವೆ ಇದ್ದರೆ ಮಾತ್ರ ಬರ ವ್ಯಾಪ್ತಿಗೆ ಬರುತ್ತದೆ. ಇದರಿಂದ ಸಮಸ್ಯೆ ಆಗುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ. ಈವರೆಗೂ ಪ್ರತಿಕ್ರಿಯೆ ಬಂದಿಲ್ಲ ಎಂದು ಪಾಟೀಲ ತಿಳಿಸಿದರು.
ಕಾವೇರಿ ಕುರಿತೂ ಚರ್ಚೆ: ಸಂಪುಟ ಸಭೆಯಲ್ಲಿ ಕಾವೇರಿ ನೀರಿನ ವಿಚಾರವೂ ಚರ್ಚೆಗೆ ಬಂತು. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಇತ್ತಿಚೆಗೆ ದೆಹಲಿಗೆ ಹೋಗಿ ಕಾನೂನು ತಜ್ಞರ ಜತೆ ನಡೆಸಿದ ಚರ್ಚೆಯ ಮಾಹಿತಿಯನ್ನು ಸಭೆಯಲ್ಲಿ ವಿವರಿಸಿದರು.
ರಾಜ್ಯದ ರೈತರ ಹಿತ ಕಾಪಾಡಲು ಸರ್ಕಾರ ಸಿದ್ಧವಿದೆ. ರಾಜ್ಯದ ಮುಂದಿರುವ ಕಾನೂನು ತೊಡಕುಗಳನ್ನೂ ಅವರು ಸಭೆಯಲ್ಲಿ ವಿವರಿಸಿದರು. ಮುಂಬರುವ ದಿನಗಳಲ್ಲಿ ಕಾವೇರಿ ನದಿ ಪಾತ್ರದ ಪ್ರದೇಶದಲ್ಲಿ ಮಳೆ ಬಂದರಷ್ಟೇ ಕಾವೇರಿಯಲ್ಲಿ ನೀರು ಹರಿಯಬಹುದು ಎಂದು ಹೇಳಿದರು.
ಪ್ರಮುಖ ತೀರ್ಮಾನಗಳು
* ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿರುವ ಟರ್ಷಿಯರಿ ಕ್ಯಾನ್ಸರ್ ಕೇರ್ ಸೆಂಟರ್ ಮೇಲ್ದರ್ಜೆಗೇರಿಸಲು ₹17.40 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ
* ಕಲಬುರಗಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ ₹162.80 ಕೋಟಿ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ
* ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಹಾಸ್ಟೆಲ್ ಕಟ್ಟಡ ನಿರ್ಮಾಣ ಕಾಮಗಾರಿಯ ಆಡಳಿತಾತ್ಮಕ ಅನುಮೋದನೆ
* ಚಿಕ್ಕಮಗಳೂರು, ಉತ್ತರಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಆಯ್ಕೆಗೆ ಒದಗಿಸಿರುವ 18,000 ದಿಂದ 20,000 ನಡವಣ ಗ್ರಾಮೀಣ ಜನಸಂಖ್ಯೆಗೆ ಅಥವಾ ಆ ಭಾಗಕ್ಕೆ ಒಬ್ಬ ಸದಸ್ಯರ ಆಯ್ಕೆ ಮಾಡುವ ಅವಕಾಶವನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ, ಸೊರಬ ಮತ್ತು ಸಾಗರ ತಾಲ್ಲೂಕುಗಳಿಗೂ ವಿಸ್ತರಿಸಲಾಗಿದೆ. ಇದಕ್ಕಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆಗೆ ಅನುಮೋದನೆ ನೀಡಲಾಗಿದ್ದು. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲಾಗುವುದು
* ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯನ್ನು ಸಹಕಾರ ಇಲಾಖೆಯಲ್ಲಿಯೇ ಮುಂದುವರಿಸಲು ತೀರ್ಮಾನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.