‘ಶಾಲೆಗಳಿಗೆ ಐತಿಹಾಸಿಕ ಮಹತ್ವ’
ಶತಮಾನ ಕಂಡ ಶಾಲೆಗಳಿಗೆ ಐತಿಹಾಸಿಕ ಮಹತ್ವವಿದೆ. ಅವು ಅವಕಾಶ ವಂಚಿತ ಸಮುದಾಯಗಳಿಗೆ ಆಧುನಿಕ ಶಿಕ್ಷಣದ ಮೂಲಕ ಬಿಡುಗಡೆಯ ದಾರಿ ತೋರಿವೆ. ಸಾಮಾಜಿಕ ಬದಲಾವಣೆಯ ಹರಿಕಾರರು ನಡಸಿದ ಅಭಿಯಾನದ ಮೂರ್ತ ಸ್ವರೂಪವೇ ಈ ಶಾಲೆಗಳು. ನಾಲ್ಕು ತಲೆಮಾರುಗಳ ಬಳಿಕ ಆ ಶಾಲೆಗಳು ತನ್ನ ಅರ್ಥಪೂರ್ಣತೆಯನ್ನು ಕಳೆದುಕೊಂಡು, ಅಂಚಿಗೆ ಸರಿಯುವುದೆಂದರೆ ನಮ್ಮ ಪರಂಪರೆಯ ಆಶಯಕ್ಕೆ ಊನ ಬಂದಿದೆ ಎಂದರ್ಥ. ಜಾಗತೀಕರಣದ ವೇಗೋತ್ಕರ್ಷದಲ್ಲಿ ಅವು ಅಪ್ರಸ್ತುತವಾಗದಂತೆ ಉಳಿಸಿ ಬೆಳೆಸುವುದು ಪ್ರಜಾಸತ್ತಾತ್ಮಕ ಸರ್ಕಾರದ ಸಾಂವಿಧಾನಿಕ ಜವಾಬ್ದಾರಿ. ಈ ಶಾಲೆಗಳನ್ನು ಪುನಶ್ಚೇತನಗೊಳಿಸುವುದು ಸಂವಿಧಾನಕ್ಕೆ ಸಲ್ಲಿಸುವ ಗೌರವ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.