ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಜೆಡಿಎಸ್‌ ಟಿಕೆಟ್‌ ಕಗ್ಗಂಟು | 'ದೊಡ್ಡಗೌಡ'ರಿಂದಲೇ ಟಿಕೆಟ್‌ ಘೋಷಣೆ

Last Updated 27 ಫೆಬ್ರುವರಿ 2023, 2:02 IST
ಅಕ್ಷರ ಗಾತ್ರ

ಹಾಸನ: ಎಚ್‌.ಡಿ.ರೇವಣ್ಣ ಕುಟುಂಬದ ಪಟ್ಟು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಹಟದಿಂದಾಗಿ ಕಗ್ಗಂಟಾಗಿರುವ ಹಾಸನ ಕ್ಷೇತ್ರದ ಜೆಡಿಎಸ್‌ ಟಿಕೆಟ್ ಘೋಷಣೆಗೆ ಎಚ್‌.ಡಿ.ದೇವೇಗೌಡ ಹಾಸನಕ್ಕೆ ಬರಲಿದ್ದಾರೆ. ಅವರೇ ಅಂತಿಮವಾಗಿ ಅಭ್ಯರ್ಥಿಯ ಆಯ್ಕೆ ಮಾಡಲಿದ್ದಾರೆ.

ಜೆಡಿಎಸ್‌ ಟಿಕೆಟ್‌ ಸಂಬಂಧಿಸಿದಂತೆ ಎಚ್‌.ಪಿ.ಸ್ವರೂಪ್‌ ಮತ್ತು ಭವಾನಿ ರೇವಣ್ಣ ಅವರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸ್ವರೂಪ್‌ ಅವರ ತಂದೆ, ಮಾಜಿ ಶಾಸಕ ದಿವಂಗತ ಎಚ್.ಎಸ್‌.ಪ್ರಕಾಶ್‌ ಅವರಿಗೆ ನೀಡಿದ್ದ ಮಾತು ಉಳಿಸಿಕೊಳ್ಳಲು ಎಚ್‌.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ. ಆದರೆ, ಹಾಸನ ಶಾಸಕ ಪ್ರೀತಂ ಗೌಡ ತಮ್ಮ ಕುಟುಂಬಕ್ಕೆ ಹಾಕಿರುವ ಸವಾಲು ಎದುರಿಸಿಯೇ ಸಿದ್ಧ ಎಂದು ರೇವಣ್ಣ ಕುಟುಂಬ ಪಣ ತೊಟ್ಟಿದೆ.

ಹಾಸನ ಕ್ಷೇತ್ರದಲ್ಲಿ ಬಿಜೆಪಿ ಎದುರಿಸಲು ರೇವಣ್ಣ ಅಥವಾ ಭವಾನಿ ರೇವಣ್ಣ ಅವರೇ ಸ್ಪರ್ಧೆ ಮಾಡಬೇಕು ಎನ್ನುವ ಒತ್ತಾಯ ಕಾರ್ಯಕರ್ತರಿಂದಲೂ ಕೇಳಿ ಬರುತ್ತಿದೆ. ಅಲ್ಲದೇ ಭವಾನಿ ಅವರ ಕುರಿತು ಪ್ರೀತಂ ಗೌಡ ಆಡಿರುವ ಮಾತುಗಳು ಮಕ್ಕಳಾದ ಪ್ರಜ್ವಲ್‌ ಹಾಗೂ ಸೂರಜ್‌ ಅವರನ್ನು ಕೆರಳಿಸಿವೆ. ಹಾಗಾಗಿ ಹಾಸನದಿಂದ ಸ್ಪರ್ಧೆ ಮಾಡಿಯೇ ಸಿದ್ಧ ಎನ್ನುವ ನಿರ್ಧಾರ ಮಾಡಿದ್ದಾರೆ.

ರೇವಣ್ಣ ಕುಟುಂಬ ಹಾಗೂ ಕುಮಾರಸ್ವಾಮಿ ಅವರಿಗೆ ಹಾಸನ ಕ್ಷೇತ್ರದ ಟಿಕೆಟ್‌ ಪ್ರತಿಷ್ಠೆಯ ಪ್ರಶ್ನೆಯಾಗಿಯೂ ಮಾರ್ಪಟ್ಟಿದೆ. ಅಂತಿಮವಾಗಿ ಕ್ಷೇತ್ರದ ಮುಖಂಡರು, ಕಾರ್ಯಕರ್ತರನ್ನು ಕೇಳಿ ಅಭ್ಯರ್ಥಿ ಆಯ್ಕೆ ಮಾಡಲು ಮುಂದಾಗಿದ್ದ ಕುಮಾರಸ್ವಾಮಿ, ಬೆಂಗಳೂರಿನಲ್ಲಿ ಭಾನುವಾರ ಸಭೆಯನ್ನೂ ಕರೆದಿದ್ದರು. ತಮ್ಮನ್ನು ಹೊರಗಿಟ್ಟು ಸಭೆ ನಡೆಸಿದರೆ, ಜಿಲ್ಲೆಯ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗಲಿದೆ ಎನ್ನುವ ಕಾರಣಕ್ಕೆ ರೇವಣ್ಣ ವಿರೋಧ ವ್ಯಕ್ತಪಡಿಸಿದ್ದರು. ಅಂತಿಮವಾಗಿ ದೇವೇಗೌಡರೇ ಮಧ್ಯ ಪ್ರವೇಶಿಸಿ, ಬೆಂಗಳೂರಿನಲ್ಲಿ ಕರೆದಿದ್ದ ಸಭೆಯನ್ನು ರದ್ದುಪಡಿಸಿದ್ದಾರೆ.

ಇದರಿಂದ ಬೇಸತ್ತಿರುವ ಕುಮಾರಸ್ವಾಮಿ, ಈ ಬಗ್ಗೆ ದೇವೇಗೌಡರೇ ತೀರ್ಮಾನ ತೆಗೆದುಕೊಳ್ಳಲಿ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಾಗಿ ದೇವೇಗೌಡರೇ ಹಾಸನ ಕ್ಷೇತ್ರದ ಟಿಕೆಟ್ ಘೋಷಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮುಂದಿನ ವಾರ ಜಿಲ್ಲೆಗೆ ಬರಲಿದ್ದು, ಮುಖಂಡರು, ಕಾರ್ಯಕರ್ತರ ಜೊತೆಗೆ ಚರ್ಚಿಸಿ, ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಪಕ್ಷದ ಮೂಲಗಳಿಂದ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT