ಬೆಂಗಳೂರು: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಿಎಚ್.ಡಿ ಪ್ರಮಾಣಪತ್ರಗಳ ನೈಜತೆ ಪರಿಶೀಲಿಸದೆ ನೇಮಕಾತಿ ಆದೇಶ ನೀಡಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.

ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 267 ಅಭ್ಯರ್ಥಿಗಳಲ್ಲಿ ಹಲವರು ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಿಂದ ಪಡೆದ ನಕಲಿ ಪಿಎಚ್.ಡಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ. ಇಂತಹ ಪ್ರಮಾಣಪತ್ರಗಳನ್ನು ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್ಒಪಿ) ಮೂಲಕ ನೈಜತೆ ಪರಿಶೀಲಿಸಿದ ನಂತರವೇ ನೇಮಕಾತಿ ಆದೇಶ ನೀಡಬೇಕು ಎಂದು ಹಲವು ಕಾಲೇಜುಗಳ ಪ್ರಾಧ್ಯಾಪಕರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಎನ್.ಮಂಜುಶ್ರೀ ಅವರಿಗೆ ಪತ್ರ ಬರೆದಿದ್ದರು.

ಆದರೆ, ಪ್ರಾಧ್ಯಾಪಕರ ಒತ್ತಾಯಕ್ಕೆ ಸ್ಪಂದಿಸದ ಇಲಾಖೆ ಅಂತಿಮ ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳನ್ನು ಮೂರು ತಂಡಗಳಾಗಿ ವಿಂಗಡಿಸಿ ತರಬೇತಿ ನೀಡುತ್ತಿದ್ದು, ಮಾರ್ಚ್ ಅಂತ್ಯದ ಒಳಗೆ ಸ್ಥಳ ನಿಯುಕ್ತಿ ಮಾಡಲು ಪ್ರಕ್ರಿಯೆ ಆರಂಭಿಸಿದೆ.

‘ವಿಶ್ವವಿದ್ಯಾಲಯ ಅನುದಾನ ಆಯೋಗದ ಮಾನ್ಯತೆ ಪಡೆಯದ ಉನ್ನತ ಶಿಕ್ಷಣ ಸಂಸ್ಥೆಗಳು, ನಕಲಿ ವಿಶ್ವವಿದ್ಯಾಲಯಗಳು ಹಾಗೂ ಪಿಎಚ್.ಡಿ ನಿಯಮಗಳನ್ನೇ ಪಾಲಿಸದ ಹೊರ ರಾಜ್ಯದ ವಿಶ್ವವಿದ್ಯಾಲಯಗಳಿಂದ ಪಡೆದ ಪ್ರಮಾಣಪತ್ರಗಳನ್ನು ಹಲವು ಅಭ್ಯರ್ಥಿಗಳು ಸಲ್ಲಿಸಿದ್ದಾರೆ. ಇಂತಹ ನಕಲಿ ಪಿಎಚ್.ಡಿ ಪ್ರಮಾಣಪತ್ರಗಳ ನೈಜತೆ ಪರಿಶೀಲನೆಯನ್ನೇ ಇಲಾಖೆ ಮಾಡಿಲ್ಲ. ಕಾರ್ಯಭಾರ ಕಡಿಮೆ ಆದಾಗ ಕೆಲಸ ಕಳೆದುಕೊಳ್ಳುವ, ಕೆಲಸದ ಭದ್ರತೆಯೇ ಇಲ್ಲದ ಅತಿಥಿ ಉಪನ್ಯಾಸಕರಿಗೆ ಎಸ್ಒಪಿ ಅನ್ವಯಿಸಿದೆ. ಕಾಯಂ ಪ್ರಾಂಶುಪಾಲರ ಹುದ್ದೆಗೆ ಏಕಿಲ್ಲ’ ಎನ್ನುವುದು ಪ್ರಥಮ ದರ್ಜೆ ಕಾಲೇಜುಗಳ ಪ್ರಾಧ್ಯಾಪಕರ ಪ್ರಶ್ನೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾರ್ಚ್ 2022ರಲ್ಲಿ ಅಧಿಸೂಚನೆ ಹೊರಡಿಸಿತ್ತು. ತಾಂತ್ರಿಕ ಕಾರಣಗಳಿಂದ ನಿಗದಿಯಾಗಿದ್ದ ಪರೀಕ್ಷೆಗಳನ್ನು ಎರಡು ಬಾರಿ ಮುಂದೂಡಲಾಗಿತ್ತು. ಅಂತಿಮವಾಗಿ 2023ರ ಜುಲೈ 30ರಂದು ಪರೀಕ್ಷೆ ನಡೆಸಲಾಗಿತ್ತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಧ್ಯಾಪಕರ ಜತೆಗೆ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಪದವಿ ಕಾಲೇಜುಗಳು, ಖಾಸಗಿ ಕಾಲೇಜುಗಳ ಅಧ್ಯಾಪಕರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.

‘ಎಂಜಿನಿಯರಿಂಗ್ ಸೇರಿದಂತೆ ಬಹುತೇಕ ಖಾಸಗಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ಪೂರ್ಣಕಾಲಿಕ ಬೋಧಕರಾಗಿ ಕೆಲಸ ಮಾಡಿದ ಅನುಭವವಿಲ್ಲ. ಬಹಳಷ್ಟು ಅಧ್ಯಾಪಕರು ಒಂದೇ ಕಾಲೇಜಿಗೆ ಸೀಮಿತವಾಗಿಲ್ಲ. ಒಂದೇ ವೃತ್ತಿಯನ್ನು ನಂಬಿಕೊಂಡಿಲ್ಲ. ಅಂಥವರು ಪ್ರಾಂಶುಪಾಲರ ಹುದ್ದೆಗೆ ಆಯ್ಕೆಯಾದರೆ ಐದು ವರ್ಷಗಳ ನಂತರ ಏನು ಮಾಡಬೇಕು ಎನ್ನುವ ಅತಂತ್ರ ಸ್ಥಿತಿಯನ್ನು ಉನ್ನತ ಶಿಕ್ಷಣ ಇಲಾಖೆ ಸೃಷ್ಟಿಸಿದೆ’ ಎಂದು ಉನ್ನತ ಶಿಕ್ಷಣ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರಾಧಿಕಾರಗಳಿಗಿಲ್ಲ ತಪಾಸಣೆ ಅಧಿಕಾರ

ಉನ್ನತ ಶಿಕ್ಷಣ ಇಲಾಖೆಯ ನೇಮಕಾತಿ ನಿಯಮಗಳು, ಹೈಕೋರ್ಟ್, ಸುಪ್ರೀಂಕೋರ್ಟ್ ವಿವಿಧ ನೇಮಕಾತಿ ಪ್ರಕರಣಗಳಲ್ಲಿ ನೀಡಿದ ತೀರ್ಪಿನ ಪ್ರಕಾರ ನೇಮಕಾತಿ ಪ್ರಾಧಿಕಾರಗಳಿಗೆ ಅಭ್ಯರ್ಥಿಗಳು ಸಲ್ಲಿಸುವ ಪ್ರಮಾಣ ಪತ್ರಗಳ ನೈಜತೆ ಪರಿಶೀಲಿಸುವ ಅಧಿಕಾರ ಇಲ್ಲ. 310 ಪ್ರಾಂಶುಪಾಲರ ಹುದ್ದೆಗಳಿಗೆ ಕೆಇಎ ಪರೀಕ್ಷೆ ನಡೆಸಿ, ಅರ್ಹತಾ ಪಟ್ಟಿ ಸಿದ್ಧ ಪಡಿಸಿಕೊಟ್ಟಿತ್ತು. ಅಭ್ಯರ್ಥಿಗಳು ನಮೂದಿಸಿದ ಪ್ರಮಾಣಪತ್ರಗಳನ್ನು ಲಗತ್ತಿಸಿದ್ದಾರೆಯೋ, ಇಲ್ಲವೋ ಎನ್ನುವುದನ್ನು ಕೆಇಎ ಪರಿಶೀಲಿಸಿದೆ. ಆದರೆ, ನಿಯಮದಂತೆ ಆಯಾ ಇಲಾಖೆಗಳೇ ಪರಿಶೀಲಿಸಬೇಕಿದೆ.

ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ: ಆರೋಪ

ಅರ್ಹತೆಯ ಅನುಸಾರ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸದೆ ಕಲ್ಯಾಣ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕೇತರ ಎಂದು ಪ್ರತ್ಯೇಕ ಪಟ್ಟಿ ಪ್ರಕಟಿಸಿರುವುದಕ್ಕೆ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮಾರ್ಗಸೂಚಿಗಳ ಪ್ರಕಾರ ಒಂದು ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ಒಂದೇ ಪರೀಕ್ಷೆ ಮತ್ತು ಒಂದೇ ಆಯ್ಕೆ ಪ್ರಕ್ರಿಯೆ ನಡೆಸಿದಾಗ ಮೊದಲು ಅರ್ಹತಾ ಪಟ್ಟಿ ಸಿದ್ಧಪಡಿಸಬೇಕು. ಹೆಚ್ಚಿನ ಅಂಕಗಳನ್ನು ಪಡೆದ ಅಭ್ಯರ್ಥಿಗಳು ಪರಿಶಿಷ್ಟ ಜಾತಿ, ಕಲ್ಯಾಣ ಕರ್ನಾಟಕ ಮೀಸಲಾತಿ ಹೊಂದಿದ್ದರೂ ಸಾಮಾನ್ಯ ವರ್ಗದ ಅಡಿಯಲ್ಲಿ ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿದೆ. ‘ನಿಯಮವನ್ನು ಕಡೆಗಣಿಸಿ ಕಾಲೇಜು ಶಿಕ್ಷಣ ಇಲಾಖೆ ಎರಡು ಪ್ರತ್ಯೇಕ ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳನ್ನೂ ಕಡೆಗಣಿಸಿದೆ. ಇದರಿಂದ ಕಲ್ಯಾಣ ಕರ್ನಾಟಕದ 13 ಅಭ್ಯರ್ಥಿಗಳು ನ್ಯಾಯಸಮ್ಮತ ಅವಕಾಶಗಳಿಂದ ವಂಚಿತರಾಗಿದ್ದಾರೆ’ ಎನ್ನುತ್ತಾರೆ ಕಲ್ಯಾಣ ಕರ್ನಾಟಕದ ಅಭ್ಯರ್ಥಿ ವಿರೂಪಾಕ್ಷ.

ಪ್ರಾಂಶುಪಾಲರ ನೇಮಕಾತಿ ಪ್ರಕ್ರಿಯೆಯೇ ದೋಷಪೂರ್ಣವಾಗಿದೆ. 4 ವರ್ಷಗಳಿಂದ ಮುಗಿದಿಲ್ಲ. ಶೇ 50ರಷ್ಟು ಹುದ್ದೆಗಳನ್ನು ಬಡ್ತಿಗೆ ಮೀಸಲಿಡಬೇಕು. ಬಡ್ತಿ ಪ್ರಕ್ರಿಯೆಯನ್ನು ಕೆಲವು ವಾರಗಳಲ್ಲೇ ಮುಗಿಸಬಹುದು
ರಾಮಲಿಂಗಪ್ಪ ಟಿ.ಬೇಗೂರು, ಉನ್ನತ ಶಿಕ್ಷಣ ಚಿಂತನಾ ವೇದಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.