ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರಿಗೆ ₹10 ಕೋಟಿ ದಂಡ ಮತ್ತು 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಸಾರ್ವಜನಿಕ ಪರೀಕ್ಷಾ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ಮಸೂದೆ-2023ಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಒಪ್ಪಿಗೆ ನೀಡಿದ್ದಾರೆ.
ಈ ಮಸೂದೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಕೆಲವು ವಿವರಣೆಗಳನ್ನು ಕೇಳಿ ಹಿಂದಕ್ಕೆ ಕಳುಹಿಸಿದ್ದರು. ಸರ್ಕಾರ ಇದಕ್ಕೆ ಸೂಕ್ತ ವಿವರಣೆಗಳನ್ನು ನೀಡಿ ಮತ್ತೆ ರಾಜ್ಯಪಾಲರಿಗೆ ಕಳುಹಿಸಿತ್ತು. ಈ ಹಿಂದೆ 12 ವರ್ಷ ಜೈಲು ಶಿಕ್ಷೆ ನಿಗದಿ ಮಾಡಲಾಗಿತ್ತು. ಈಗ ಅದನ್ನು 10 ವರ್ಷಗಳಿಗೆ ಇಳಿಸಿದೆ.
ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದವು. ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಪ್ರಥಮ ದರ್ಜೆ ಸಹಾಯಕ ಪರೀಕ್ಷೆಗಳಲ್ಲೂ ಅಕ್ರಮ ನಡೆದಿದ್ದವು. ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ವಿಧಾನಮಂಡಲದಲ್ಲಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿತ್ತು.
ಪರೀಕ್ಷೆಯಲ್ಲಿ ನಕಲು ಮಾಡುವುದು, ಪ್ರಶ್ನೆಪತ್ರಿಕೆಗಳ ಸೋರಿಕೆ, ಉತ್ತರ ಪತ್ರಿಕೆ ಮತ್ತು ಒಎಂಆರ್ ಹಾಳೆಗಳನ್ನು ತಿದ್ದುವುದು, ಲಿಖಿತ ಅಥವಾ ವಿದ್ಯುನ್ಮಾನ ಅಥವಾ ಯಾಂತ್ರೀಕೃತ ಸಾಧನ/ ಉಪಕರಣ ಬಳಸುವುದು, ಪರೀಕ್ಷಾ ಕೇಂದ್ರದೊಳಕ್ಕೆ ಅಕ್ರಮ ಪ್ರವೇಶ ಮಾಡುವುದು, ಅನಧಿಕೃತ ಸ್ಥಳಗಳಲ್ಲಿ ಪರೀಕ್ಷೆ ಬರೆಸುವುದು ಸೇರಿದಂತೆ ಯಾವುದೇ ಬಗೆಯ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವುದನ್ನು ಶಿಕ್ಷಾರ್ಹ ಅಪರಾಧ ಎಂದು ಈ ಮಸೂದೆಯು ಘೋಷಿಸಿದೆ.
ನಕಲು ಅಥವಾ ಹೊರಗಿನಿಂದ ಸಹಾಯ ಪಡೆದು ಪರೀಕ್ಷಾ ಅಕ್ರಮ ಎಸಗುವ ಅಭ್ಯರ್ಥಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹10 ಲಕ್ಷ ದಂಡ ವಿಧಿಸುವ ಪ್ರಸ್ತಾವ ಮಸೂದೆಯ ಸೆಕ್ಷನ್ 10 (1) ಒಳಗೊಂಡಿದೆ.
ಅಭ್ಯರ್ಥಿಯೂ ಸೇರಿದಂತೆ ಯಾವುದೇ ವ್ಯಕ್ತಿ ಬೇರೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆಯಲು ಪ್ರಯತ್ನಿಸುವುದು, ಪ್ರಶ್ನೆಪತ್ರಿಕೆ ಸೋರಿಕೆ ಮಾಡುವುದು, ಸೋರಿಕೆಗೆ ಪ್ರಯತ್ನಿಸುವುದು, ಅಕ್ರಮವಾಗಿ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ಅಕ್ರಮವಾಗಿ ಉತ್ತರ ಬರೆಯುವುದು ಅಥವಾ ಬರೆಯಲು ನೆರವಾಗುವುದು, ನೆರವು ಕೋರುವುದು ಸೇರಿದಂತೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪರೀಕ್ಷಾ ಅಕ್ರಮಕ್ಕೆ ನೆರವು ನೀಡುವವರಿಗೆ ಎಂಟರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹15 ಲಕ್ಷದಿಂದ ₹10 ಕೋಟಿಯವರೆಗೂ ದಂಡ ವಿಧಿಸುವ ಪ್ರಸ್ತಾವ ಸೆಕ್ಷನ್ 10 (2)ರಲ್ಲಿದೆ.
ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಅಭ್ಯರ್ಥಿಗಳು ಮುಂದಿನ ಎರಡು ವರ್ಷಗಳವರೆಗೆ ಯಾವುದೇ ಸಾರ್ವಜನಿಕ ಪರೀಕ್ಷೆಯನ್ನು ತೆಗೆದುಕೊಳ್ಳದಂತೆ ಅನರ್ಹಗೊಳಿಸುವ ಪ್ರಸ್ತಾವವು ಸೆಕ್ಷನ್ 11 (2)ರಲ್ಲಿದೆ.
ಯಾವುದೇ ಸಂಸ್ಥೆ ಅಥವಾ ಅದರ ಆಡಳಿತ ಮಂಡಳಿಯು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದರೆ ಆ ಪರೀಕ್ಷೆಯ ಸಂಪೂರ್ಣ ವೆಚ್ಚವನ್ನು ಅಂತಹ ಸಂಸ್ಥೆ, ಆಡಳಿತ ಮಂಡಳಿಯಿಂದಲೇ ವಸೂಲಿ ಮಾಡಲು ಸೆಕ್ಷನ್ 13 ಅವಕಾಶ ಕಲ್ಪಿಸಲಿದೆ.
ಅನಧಿಕೃತ ಸ್ವತ್ತುಗಳಿಗೆ ತೆರಿಗೆ ನಿಗದಿ: ಮಸೂದೆಗೆ ಒಪ್ಪಿಗೆ
ನಗರ ಸ್ಥಳೀಯ ಪ್ರಾಧಿಕಾರಗಳ ವ್ಯಾಪ್ತಿಯ ಎಲ್ಲ ಆಸ್ತಿಗಳನ್ನು ಆರ್ಥಿಕ ಸಂಪನ್ಮೂಲ ಜಾಲಕ್ಕೆ ಒಳಪಡಿಸುವ, ಅನಧಿಕೃತ ವಸತಿ ಪ್ರದೇಶದಲ್ಲಿರುವ ನಿವೇಶನ ಮತ್ತು ಕಟ್ಟಡಗಳು ಹಾಗೂ ಅಧಿಕೃತ ವಸತಿ ಪ್ರದೇಶಗಳ ಅನಧಿಕೃತ ಕಟ್ಟಡಗಳಿಗೆ ಆಸ್ತಿ ತೆರಿಗೆ ನಿಗದಿ ಮಾಡುವ ಉದ್ದೇಶದ ‘ಕರ್ನಾಟಕ ಮುನಿಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ಮಸೂದೆ–2024’ ಕ್ಕೆ ರಾಜ್ಯಪಾಲರು ಅಂಕಿತ ನೀಡಿದ್ದಾರೆ.
ಈ ಮಸೂದೆಗೆ ಸಂಬಂಧಿಸಿದಂತೆ ಕೆಲವು ವಿವರಣೆಗಳನ್ನು ಕೋರಿ ಮಸೂದೆಯನ್ನು ಹಿಂದಕ್ಕೆ ಕಳುಹಿಸಿದ್ದರು. ಅದಕ್ಕೆ ವಿವರಣೆ ನೀಡಿದ ಬೆನ್ನಲ್ಲೇ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಮೂಲಗಳು ತಿಳಿಸಿವೆ.
ಎಲ್ಲ ನಗರ ಸ್ಥಳೀಯ ಪ್ರಾಧಿಕಾರಗಳ ವ್ಯಾಪ್ತಿ ಸ್ವತ್ತುಗಳನ್ನು ಇ–ಆಸ್ತಿ ತಂತ್ರಾಂಶದ ಜಾಲಕ್ಕೆ ಸೇರಿಸಲು ಅವಕಾಶ ನೀಡಲಾಗಿದೆ. ಅಧಿಕಾರಿಗಳು ಕರ್ತವ್ಯದಲ್ಲಿ ಲೋಪ ತೋರಿದಾಗ ದಂಡ ವಿಧಿಸುವ ಅವಕಾಶವನ್ನೂ ಮಸೂದೆಯಲ್ಲಿ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.