ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಬುಧವಾರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ಮಾತುಗಳು ಪರಸ್ಪರ ವಾಗ್ವಾದಗಳಿಗೆ ವೇದಿಕೆಯಾಯಿತು.
ಆದರ್ಶ ಪುರುಷ ಶ್ರೀರಾಮ ಕಾಂಗ್ರೆಸ್‌ಗೆ ಏಕೆ ಆಗಿಬರುವುದಿಲ್ಲ ಎಂಬ ತೇಜಸ್ವಿನಿಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ‘ಶ್ರೀರಾಮನ ಕುರಿತು ಚರ್ಚೆ ಮಾಡೋಣ. ಹಾಗೆಯೇ, ದಲಿತರೇ ಏಕೆ ಮಲಹೊರುತ್ತಾರೆ?, ಸಾವಿರಾರು ವರ್ಷಗಳಿಂದ ಹಿಂದುಳಿದ ವರ್ಗಗಳು ಏಕೆ ಅಕ್ಷರ ವಂಚಿತರಾದರು ಎಂಬ ವಿಷಯಗಳ ಕುರಿತೂ ಚರ್ಚಿಸೋಣ’ ಎಂದರು.
ಅದಕ್ಕೆ ಧ್ವನಿಗೂಡಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ‘ನೀವು ಕಾಂಗ್ರೆಸ್‌ನಲ್ಲಿದ್ದಾಗ ಇಂತಹ ವಿಚಾರಗಳ ಬಗ್ಗೆ ಏಕೆ ಮಾತನಾಡಲಿಲ್ಲ‘ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್, ‘ನಾವು ಸಾಮಾನ್ಯ ಜನರ ಬಡತನ ನೀಗಿಸಲು ಹೆಣಗುತ್ತಿದ್ದೇವೆ. ನೀವು ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ದೇವರನ್ನೇ ಜಗಳಕ್ಕೆ ಹಚ್ಚುವಿರಿ. ನಾನೂ ಬ್ರಾಹ್ಮಣ. ಪೂಜೆ ಮಾಡದೇ ಹೊರಗೆ ಹೋಗುವುದಿಲ್ಲ. ಬಿಜೆಪಿಯವರು ತಾವು ಮಾತ್ರ ಹಿಂದೂಗಳು ಎಂಬ ಭ್ರಮೆಯಲ್ಲಿ ಇದ್ದಾರೆ‘ ಎಂದರು.
ಅವರ ಮಾತುಗಳನ್ನು ಅನುಮೋದಿಸಿದ ನಾಗರಾಜ್ ಯಾದವ್, ಬಿಜೆಪಿ ಕೇಂದ್ರ, ರಾಜ್ಯಗಳಲ್ಲಿ ಯಾವ ಹೊಸ ಯೋಜನೆಗಳನ್ನೂ ಜಾರಿಗೆ ತರಲಿಲ್ಲ. ಧರ್ಮದ ಮಂತ್ರ ಜಪಿಸುತ್ತಾ ಹಳೇ ಶೀಶೆಯಲ್ಲಿನ ಮದ್ಯಕ್ಕೆ ಹೊಸ ಲೇಬಲ್ ಹಚ್ಚುವ ಕೆಲಸವಷ್ಟೇ ಮಾಡಿತು ಎಂದು ಹೇಳಿದರು.
ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ತೇಜಸ್ವಿನಿಗೌಡ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ, ಹಾಗೆ ಮಾತನಾಡದಂತೆ ಬುದ್ಧಿ ಹೇಳಬೇಕು ಎಂದು ಸಭಾಪತಿಗೆ ವಿನಂತಿಸಿದರು.
‘ಹೀಗೇ ಮಾತನಾಡಿ ಎಂದು ಹೇಳಲು ಅಧಿಕಾರವಿಲ್ಲ. ತಪ್ಪು ಮಾತನಾಡಿದರೆ, ಅಸಂಸದೀಯ ಪದ ಬಳಸಿದರೆ ಕಡತದಿಂದ ತೆಗೆದುಹಾಕಲಾಗುವುದು‘ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಕೋಟ ಅವರು ಮತ್ತೆಮತ್ತೆ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದಾಗ, ‘ಕುಳಿತುಕೊಳ್ಳಿ. ನೀವು ವಿರೋಧ ಪಕ್ಷದ ನಾಯಕರಲ್ಲ’ ಎಂದು ಸುಮ್ಮನಾಗಿಸಿದರು. ಅದೇ ರೀತಿ ಮಧ್ಯೆ ಮಾತನಾಡಲು ಎದ್ದು ನಿಂತ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಠೋಡ್ ಅವರನ್ನೂ ತರಾಟೆಗೆ ತೆಗೆದುಕೊಂಡ ಸಭಾಪತಿ, ‘ಮುದುಕರಾದ್ರು ಬುದ್ಧಿ ಬರಲಿಲ್ಲ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.