ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ ಸರ್ಕಾರ ಹಿಂದೂಗಳ ಬಗ್ಗೆ ತಾತ್ಸಾರ ಧೋರಣೆ ಹೊಂದಿದೆ: ಬಿ.ವೈ ವಿಜಯೇಂದ್ರ

Published : 14 ಸೆಪ್ಟೆಂಬರ್ 2024, 7:51 IST
Last Updated : 14 ಸೆಪ್ಟೆಂಬರ್ 2024, 7:51 IST
ಫಾಲೋ ಮಾಡಿ
Comments

ಬೆಂಗಳೂರು: ನಾಗಮಂಗಲ ಗಲಭೆ ಪ್ರಕರಣವನ್ನು ವಿರೋಧಿಸಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯ ಸದಸ್ಯರು ನಗರದ ಟೌನ್‌ ಹಾಲ್‌ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರತಿಭಟನಾ ಕಾರ್ಯಕರ್ತರೊಂದಿಗೆ ಗಣೇಶ ಮೂರ್ತಿಯನ್ನು ಪೊಲೀಸ್‌ ವಾಹನದಲ್ಲಿ ಬಂಧಿಸಿ ಇಡಲಾಗಿದೆ.

ಈ ಸಂಬಂಧ ಘಟನೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಪೊಲೀಸರ ನಡೆ ಹಾಗೂ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಗಣೇಶೋತ್ಸವ ಹಿಂದೂಗಳ ಧಾರ್ಮಿಕ ಶ್ರದ್ಧೆ ಹಾಗೂ ಸಾಂಸ್ಕೃತಿಕ ಸಂಗಮದ ದ್ಯೋತಕ. ಪ್ರತಿಯೊಬ್ಬರೂ ಸಂಭ್ರಮಿಸುವ ಉತ್ಸವದ ಹಬ್ಬ. ಹಿಂದೂಗಳ ಧಾರ್ಮಿಕ ಆಚಾರ-ವಿಚಾರಗಳಲ್ಲಿ ಮೊದಲ ಪೂಜೆ ವಿಘ್ನ ನಿವಾರಿಸುವ ವಿನಾಯಕನಿಗೆ ಸಲ್ಲಿಸಲಾಗುತ್ತದೆ. ಈ ಕಾರಣದಿಂದಾಗಿಯೂ ಗಣೇಶನಿಗೆ ಎಲ್ಲಿಲ್ಲದ ಮಹತ್ವ ಇದೆ. ಜನರ ಭಾವೋದ್ವೇಗಗಳು ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರಬಾರದು ಎಂಬುದನ್ನು ಒಪ್ಪಿಕೊಳ್ಳಬಹುದು. ಆದರೆ, ಅದರ ಹೆಸರಿನಲ್ಲಿ ಅನಗತ್ಯ ಕಿರಿಕಿರಿ ಉಂಟು ಮಾಡುವ ಮಾರ್ಗಸೂಚಿಗಳನ್ನು ಅಳವಡಿಸಿ ಉತ್ಸವ ಆಚರಣೆಯ ಸಡಗರದ ಸ್ವಾತಂತ್ರ್ಯಕ್ಕೆ ತೊಂದರೆ ನೀಡುವುದನ್ನು ಒಪ್ಪಲಾಗದು’ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ಧಪಡಿಸುವ ಮಾರ್ಗಸೂಚಿಗಳು ಉದ್ದೇಶಪೂರ್ವಕ ಎಂಬ ಭಾವನೆ ಹಿಂದೂ ಸಮಾಜದಲ್ಲಿ ಬಲವಾಗಿ ಬೇರೂರಿದೆ. ಇದಕ್ಕೆ ನಾಗಮಂಗಲದಂತಹ ಘಟನೆ ಸಾಕ್ಷಿಯಾಗಿದೆ. ದುರ್ಘಟನೆ ಉದ್ಭವಿಸುವುದಕ್ಕೆ ಆಸ್ಪದ ನೀಡುವ ನಿಟ್ಟಿನಲ್ಲಿ ಉತ್ಸವ ವಿರೋಧಿ ದುಷ್ಟ ಗುಂಪುಗಳು ಗಣೇಶ ಮೆರವಣಿಗೆ ಸಂದರ್ಭದಲ್ಲಿ ದಾಂಧಲೆ ನಡೆಸಿ ಅಟ್ಟಹಾಸ ಮೆರೆಯುವ ಪರಿಸ್ಥಿತಿಯ ಸೃಷ್ಟಿಗೆ ಕಾನೂನು ಸುವ್ಯವಸ್ಥೆಯ ನಿಷ್ಕ್ರೀಯತೆ ಅವಕಾಶ ಮಾಡಿಕೊಡುತ್ತಿದೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧವಾಗಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯ ಸದಸ್ಯರು ಟೌನ್ ಹಾಲ್ ಬಳಿ ಗಣೇಶ ಮೂರ್ತಿಯೊಂದಿಗೆ ಶಾಂತಿಯುತ ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ ಪ್ರತಿಭಟನಾನಿರತರೊಂದಿಗೆ 'ಗಣಪತಿ ಮೂರ್ತಿಯನ್ನೂ ಪೊಲೀಸ್ ವಾಹನದಲ್ಲಿ ಬಂಧಿಸಿಟ್ಟಿದ್ದು' ಹಿಂದೂ ಸಮಾಜದ ಧಾರ್ಮಿಕ ಭಾವನೆಯನ್ನು ಕೆರಳಿಸುವ ಕ್ರಮವಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

‘ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸಿ ಗಣೇಶ ಮೂರ್ತಿಯ ಪಾವಿತ್ರ್ಯತೆಗೆ ಧಕ್ಕೆ ಬಾರದ ರೀತಿಯಲ್ಲಿ ಕಾಳಜಿ ವಹಿಸಬಹುದಾಗಿದ್ದ ಪೊಲೀಸರು ಅತ್ಯಂತ ಉಡಾಫೆಯಾಗಿ ವರ್ತಿಸಿರುವ ರೀತಿ ಅತ್ಯಂತ ಖಂಡನೀಯ. ಕಾಂಗ್ರೆಸ್‌ ಸರ್ಕಾರ ಹಿಂದೂ ಸಮಾಜದ ಬಗ್ಗೆ ತೋರುವ ತಾತ್ಸಾರ ಧೋರಣೆಯನ್ನು ಈ ಘಟನೆ ಪ್ರತಿಬಿಂಬಿಸಿದೆ. ಈ ಕೂಡಲೇ ಸರ್ಕಾರ ಹಿಂದೂ ಸಮಾಜದ ಕ್ಷಮೆ ಕೇಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT