ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಬೇರೆಯವರ ಮನೆಗೆಲಸ ಮಾಡುತ್ತಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ

ಸಾಧನೆಗೆ ಅಡ್ಡಿಯಾಗದ ಬಡತನ, ಪ್ರತಿಭಾವಂತೆಯ ಮುಂದಿನ ಶಿಕ್ಷಣಕ್ಕೆ ಬೇಕಿದೆ ನೆರವು
Published 9 ಮೇ 2023, 19:45 IST
Last Updated 9 ಮೇ 2023, 19:45 IST
ಅಕ್ಷರ ಗಾತ್ರ

ಇಮಾಮ್‌ಹುಸೇನ್‌ ಗೂಡುನವರ

ಬೆಳಗಾವಿ: ‘ಊರಾಗೊಂದು ಹಳೀ ಮನಿ ಬಿಟ್ರ ನಮಗೇನಿಲ್ರಿ. ಹಂಗಾಗಿ ದುಡ್ಯಾಕ ಬೆಳಗಾವಿಗೆ ಬಂದ್ವಿ. ನಾನೂ, ಗಂಡ ಕೂಲಿಗೆ ಹೋದ್ರ, ಮಗಳು 4ನೇ ಕ್ಲಾಸ್‌ನ್ಯಾಗ ಇದ್ದಾಗಿನಿಂದ ಬೇರೆಯವರ ಮನೆಗೆಲಸಕ್ಕ ಹೋಗಾಕತ್ಳು. ದಿನ್ನಾ ಎರಡು ಮನಿಗೋಳ ಕೆಲ್ಸ ಮಾಡ್ಕೊಂತನ ಸಾಲಿಗೂ ಹೋಗ್ತಿದ್ಳು. ಈಗ ಮ್ಯಾಟ್ರಿಕ್‌ ಪರೀಕ್ಷಾದಾಗ ಏನೋ ಸಾಧನೆ ಮಾಡ್ಯಾಳು. ಇದನ್ನ ಕೇಳಿ ಭಾಳ್‌ ಆನಂದ ಆಗಾಕತ್ತೇತ್ರಿ...’

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 574(ಶೇ.91.84) ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಭಾಗ್ಯ ಸಿದ್ದಾಪುರ ಅವಳ ತಾಯಿ ಭೀಮವ್ವ ಅವರು ‘ಪ್ರಜಾವಾಣಿ’ ಎದುರು ಮಂಗಳವಾರ ಸಂತಸ ಹಂಚಿಕೊಂಡಿದ್ದು ಹೀಗೆ.

ಗೋಕಾಕ ತಾಲ್ಲೂಕಿನ ಶಿಲ್ತಿಭಾವಿಯ ಭೀಮವ್ವ–ಮಾರುತಿ ದಂಪತಿ ಶಾಲೆ ಮೆಟ್ಟಿಲನ್ನೇ ತುಳಿದಿಲ್ಲ. ಆದರೆ, ಅವರ ಪುತ್ರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾಳೆ. ‍ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕ ಗಳಿಸಿದ್ದಾಳೆ.

ಇಲ್ಲಿನ ಸರ್ಕಾರಿ ಸರ್ದಾರ್ಸ್‌ ಪ್ರೌಢಶಾಲೆಯಲ್ಲಿ ಓದುತ್ತಿರುವ ಭಾಗ್ಯ, ನಿತ್ಯ ಶಾಲೆಗೆ ತೆರಳುವ ಮುನ್ನ ಒಬ್ಬರ ಮನೆಗೆಲಸಕ್ಕೆ ಹೋಗುತ್ತಿದ್ದಳು. ಸಂಜೆ ಮತ್ತೊಬ್ಬರ ಮನೆಯಲ್ಲಿ ಪಾತ್ರೆ ತೊಳೆದು, ಕಸಗುಡಿಸಿ ಬಂದ ನಂತರ ಅಭ್ಯಾಸಕ್ಕೆ ಕೂರುತ್ತಿದ್ದಳು. ಮನೆಕೆಲಸದಿಂದ ಬರುವ ಮಾಸಿಕ ₹1,200 ಅನ್ನು ತನ್ನ ಶೈಕ್ಷಣಿಕ ವೆಚ್ಚಕ್ಕಾಗಿ ಬಳಸಿಕೊಳ್ಳುತ್ತಿದ್ದಳು. 

‘ಈ ಜಗತ್ತಿನಲ್ಲಿ ಕಷ್ಟ ಯಾರಿಗೂ ಬಿಟ್ಟಿಲ್ಲ. ಆದರೆ, ನಮಗಿರುವ ಸಂಕಷ್ಟಗಳಿಗಿಂತ ಅವಕಾಶಗಳ ಬಗ್ಗೆ ಯೋಚಿಸಬೇಕು. ಮುಂದೆ ಪಿಯು ವಿಜ್ಞಾನ ವಿಭಾಗಕ್ಕೆ ಸೇರಲಿದ್ದೇನೆ. ಪ್ರೌಢಶಾಲೆಯ ಶೈಕ್ಷಣಿಕ ವೆಚ್ಚ ಹೇಗೋ ಸರಿದೂಗಿಸುತ್ತಿದ್ದೆ. ಆದರೆ, ಪಿಯು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಮತ್ತು ಕಲಿಕೆಗೆ ಹಣಕಾಸಿನ ಅಗತ್ಯವಿದೆ. ಯಾರಾದರೂ ನೆರವಾದರೆ ಅಭಾರಿಯಾಗಿರುತ್ತೇನೆ’ ಎಂದು ಭಾಗ್ಯ ಹೇಳಿದಳು.

‘ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಒಬ್ಬೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದೆ. ಪರೀಕ್ಷಾ ಅವಧಿಯಲ್ಲಿ ಮನೆಗೆಲಸಕ್ಕೆ ರಜೆ ಪಡೆದಿದ್ದೆ. ಶಾಲೆಯಲ್ಲಿ ಶಿಕ್ಷಕರ ಪಾಠ ಸಮಚಿತ್ತದಿಂದ ಆಲಿಸುತ್ತಿದ್ದೆ. ಏನೇ ಶೈಕ್ಷಣಿಕ ಗೊಂದಲಗಳಿದ್ದರೂ ಗುರುಗಳು ಹಾಗೂ ಸಹಪಾಠಿಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳುತ್ತಿದ್ದೆ. ಈ  ಅಂಕಗಳನ್ನು ಹೆತ್ತವರು ಹಾಗೂ ಶಿಕ್ಷಕ ಬಳಗಕ್ಕೆ ಅರ್ಪಿಸುತ್ತೇನೆ’ ಎಂದಳು.

ಭಾಗ್ಯ ಕುಟುಂಬಸ್ಥರು ಬೇರೆ ಕಡೆ ಕೂಲಿಯೊಂದಿಗೆ, ಬೆಳಗಾವಿಯ ಸದಾಶಿವ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಟ್ಟಡ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅದೇ ಆಸ್ಪತ್ರೆ ಹಿಂಭಾಗದಲ್ಲಿ ತಗಡಿನ ಕೋಣೆಯಲ್ಲಿ ಅವರಿಗೆ ವಾಸಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾಗ್ಯ ಮುಂದಿನ ಕಲಿಕೆಗೆ ಸಹಾಯ ಮಾಡಲಿಚ್ಛಿಸುವವರು ಮೊ.ಸಂ.9019295914 ಸಂಪರ್ಕಿಸಬಹುದು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮೆರೆದ ವಿದ್ಯಾರ್ಥಿನಿ ಭಾಗ್ಯ ಅವರು ಬೇರೆಯವರ ಮನೆಯಲ್ಲಿ ಪಾತ್ರ ತೊಳೆಯುತ್ತಿರುವುದು/ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮೆರೆದ ವಿದ್ಯಾರ್ಥಿನಿ ಭಾಗ್ಯ ಅವರು ಬೇರೆಯವರ ಮನೆಯಲ್ಲಿ ಪಾತ್ರ ತೊಳೆಯುತ್ತಿರುವುದು/ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ
ಹಲವು ಅಡ್ಡಿ–ಆತಂಕಗಳ ಮಧ್ಯೆಯೂ ಭಾಗ್ಯ ಉತ್ತಮ ಸಾಧನೆ ಮೆರೆದಿದ್ದಾಳೆ. ಅವಳ ಮುಂದಿನ ಶಿಕ್ಷಣಕ್ಕೆ ನಾವೂ ವೈಯಕ್ತಿಕವಾಗಿ ಸಹಾಯ ಮಾಡುತ್ತೇವೆ
-ಶಿವಶಂಕರ ಹಾದಿಮನಿ, ಮುಖ್ಯಾಧ್ಯಾಪಕ ಸರ್ಕಾರಿ ಸರ್ದಾರ್ಸ್‌ ಪ್ರೌಢಶಾಲೆ, ಬೆಳಗಾವಿ
ನಾನು ಇಬ್ಬರು ಸಹೋದರಿಯರು ಮತ್ತು ಸಹೋದರನ ಸಾಮಾನ್ಯ ಜ್ಞಾನ ಹೆಚ್ಚಲೆಂದು ತಂದೆ ಹಲವು ವರ್ಷಗಳಿಂದ ‘ಪ್ರಜಾವಾಣಿ’ ದಿನಪತ್ರಿಕೆ ತರಿಸುತ್ತಿದ್ದಾರೆ. ಇದರಲ್ಲಿ ಪ್ರಕಟವಾಗುವ ಅಂಶಗಳಿಂದಲೂ ಕಲಿಕೆಗೆ ನೆರವಾಯಿತು
-ಭಾಗ್ಯ ಸಿದ್ದಾಪುರ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT