ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಸ್ತೂರಿ ರಂಗನ್ ವರದಿ; ಗ್ರಾಮಗಳಿಗೆ ಭೇಟಿ ನೀಡದ ಸಮಿತಿ: ಸಚಿವ ಈಶ್ವರ ಖಂಡ್ರೆ

Published : 5 ಆಗಸ್ಟ್ 2024, 15:42 IST
Last Updated : 5 ಆಗಸ್ಟ್ 2024, 15:42 IST
ಫಾಲೋ ಮಾಡಿ
Comments

ಬೆಂಗಳೂರು: ‘ಪಶ್ಚಿಮಘಟ್ಟದ ಜೀವವೈವಿಧ್ಯ ಸಂರಕ್ಷಣೆ ಕುರಿತ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಎಲ್ಲ ಬಾಧ್ಯಸ್ಥರ ಜೊತೆ ಚರ್ಚಿಸಿ, ಸಾಧಕಬಾಧಕಗಳ ಬಗ್ಗೆ ವರದಿ ನೀಡಲು ಕೇಂದ್ರ ಸರ್ಕಾರ ರಚಿಸಿದ್ದ ಐಎಫ್‌ಎಸ್‌ ಅಧಿಕಾರಿ ಸಂಜಯ್ ಕುಮಾರ್ ನೇತೃತ್ವದ ಸಮಿತಿಯು ರಾಜ್ಯದಲ್ಲಿನ ಯಾವುದೇ ಗ್ರಾಮಕ್ಕೆ ಭೇಟಿ ನೀಡಿಲ್ಲ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಆಕ್ಷೇಪ ವ್ಯಕ್ತಪಡಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಈ  ವರದಿಯಿಂದ ಬಾಧಿತರಾಗುವ 1,533 ಗ್ರಾಮಗಳ ವ್ಯಾಪ್ತಿಯ ಜನಪ್ರತಿನಿಧಿಗಳು, ನಿವಾಸಿಗಳ ಜೊತೆ ಸಮಾಲೋಚನೆ ನಡೆಸಿ ವರದಿ ನೀಡಲು ಈ ಸಮಿತಿಯನ್ನು ರಚಿಸಲಾಗಿತ್ತು. ನನ್ನನ್ನು ಔಪಚಾರಿಕವಾಗಿ ಆ ಸಮಿತಿಯ ಸದಸ್ಯರು ಭೇಟಿ ಮಾಡಿದ್ದರು. ಆದರೆ, ಜನರೊಂದಿಗೆ ಮಾತುಕತೆಯನ್ನೇ ನಡೆಸಿಲ್ಲ’ ಎಂದರು.

ಚರ್ಚಿಸಿ ತೀರ್ಮಾನ: ‘ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವ ತೀರ್ಮಾನವನ್ನು ರಾಜ್ಯ ಸರ್ಕಾರ ಈಗಾಗಲೇ ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಈಗ ಮತ್ತೊಂದು ಅಧಿಸೂಚನೆ ಹೊರಡಿಸಿದೆ. ಮತ್ತೊಮ್ಮೆ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಸರ್ವಪಕ್ಷಗಳ ನಾಯಕರ ಅಭಿಪ್ರಾಯ ಪಡೆದ ನಂತರ ಈ ಕುರಿತು ತೀರ್ಮಾನಿಸಲಾಗುವುದು’ ಎಂದರು.

‘ರಾಜ್ಯದ 20,668 ಚದರ ಕಿಲೋ ಮೀಟರ್‌ಗೂ ಹೆಚ್ಚು ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮಪ್ರದೇಶವೆಂದು ಕಸ್ತೂರಿ ರಂಗನ್ ವರದಿ ಹೇಳಿದೆ. ರಾಜ್ಯದ 10 ಜಿಲ್ಲೆಗಳ ಅಂದರೆ, ಚಾಮರಾಜನಗರ, ಕೊಡಗು, ಮೈಸೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಬೆಳಗಾವಿಯ 33 (ತಾಲ್ಲೂಕು ಪುನರ್‌ ವಿಂಗಡಣೆಯ ನಂತರ 39) ತಾಲ್ಲೂಕುಗಳ 1,533 ಗ್ರಾಮಗಳು ಈ ವ್ಯಾಪ್ತಿಯಲ್ಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT