ಬೆಂಗಳೂರು: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ (ಕಿಯೋನಿಕ್ಸ್) ₹500 ಕೋಟಿ ಅವ್ಯವಹಾರದ ತನಿಖೆಯನ್ನು ನಿವೃತ್ತ ನ್ಯಾ.ನಾಗಮೋಹನ್‌ದಾಸ್ ವಿಚಾರಣಾ ಆಯೋಗಕ್ಕೆ ವಹಿಸಲಾಗುವುದು ಎಂದು ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಲೆಕ್ಕಪರಿಶೋಧನಾ ವರದಿಯನ್ನು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, 2018–19ರಿಂದ 2022–23ರ ಅವಧಿಯಲ್ಲಿ ಅವ್ಯವಹಾರ ನಡೆದಿರುವುದನ್ನು ಲೆಕ್ಕಪರಿಶೋಧಕರು ಪತ್ತೆ ಮಾಡಿದ್ದರು. ಹಣ ದುರುಪಯೋಗದ ವಿವರಗಳನ್ನು ಲೆಕ್ಕಪರಿಶೋಧನಾ ವರದಿಯಲ್ಲಿ ನಮೂದಿಸಲಾಗಿದೆ. ಇಲಾಖೆಯಿಂದ ಪ್ರಾಥಮಿಕ ತನಿಖೆ ನಡೆಸಿ, ನಂತರ ಇಡೀ ಪ್ರಕರಣವನ್ನು ಆಯೋಗಕ್ಕೆ ಹಸ್ತಾಂತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಂಪ್ಯೂಟರ್, ಲ್ಯಾಪ್‌ಟಾಪ್, ಯುಪಿಎಸ್, ಸಿಸಿಟಿವಿ ಕ್ಯಾಮೆರಾ, ಸ್ಮಾರ್ಟ್ ತರಗತಿಯ ಉಪಕರಣಗಳು, ಟೇಬಲ್‌ಗಳು ಸೇರಿದಂತೆ ವಿವಿಧ ಸಾಮಗ್ರಿಗಳ ಖರೀದಿ, ಪೂರೈಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿವರ ನೀಡಿದರು.
ಬಿಲ್ ನೀಡಿದ್ದ ₹60 ಸಾವಿರಕ್ಕೆ ₹1 ಲಕ್ಷ ಪಾವತಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಸಾಮಗ್ರಿ ಪೂರೈಸಿದ ಕುರಿತು ಸ್ಥಳ ಪರಿಶೀಲನಾ ವರದಿ ಪಡೆಯದೇ ₹71.5 ಕೋಟಿ ನೀಡಲಾಗಿದೆ. ಮೂರನೇ ಸಂಸ್ಥೆ ನಡೆಸಿದ ಪರಿಶೀಲನಾ ವರದಿ ಪಡೆಯುವ ಮೊದಲೇ ₹9.98 ಕೋಟಿಯನ್ನು ಸಾಮಗ್ರಿ ಪೂರೈಕೆ ಸಂಸ್ಥೆಗೆ ಪಾವತಿಸಲಾಗಿದೆ. ಸಂಸ್ಥೆಯೊಂದು ₹9.98 ಕೋಟಿಯ ಬಿಲ್ ನೀಡಿದರೆ, ಕಿಯೋನಿಕ್ಸ್ ಅವರಿಗೆ ₹10.51 ಕೋಟಿ ಪಾವತಿಸಿದೆ ಎಂದರು.
ಯಾವುದೇ ಸಾಮಗ್ರಿ ಪೂರೈಸುವ ಮೊದಲು, ಪೂರೈಸಿದ ನಂತರ ಗುತ್ತಿಗೆದಾರರು ಎರಡು ಬಿಲ್ ನೀಡಬೇಕು. ಒಂದು ಪ್ರಕರಣದಲ್ಲಿ ನಕಲಿ ಬಿಲ್ ಆಧಾರದಲ್ಲೇ ₹9.30 ಕೋಟಿ ಹಾಗೂ ಬಿಲ್‌ನ ಛಾಯಾಪ್ರತಿ ಪಡೆದು ₹1.26 ಕೋಟಿ ನೀಡಲಾಗಿದೆ. ಆಶ್ರಮಶಾಲೆ, ಪರಿಶಿಷ್ಟರ ಹಾಸ್ಟೆಲ್‌ಗಳಿಗೆ ಕಂಪ್ಯೂಟರ್ ಲ್ಯಾಬ್, ಸಾಫ್ಟ್‌ವೇರ್ ಅಳವಡಿಸದೇ ₹6 ಕೋಟಿ, 474 ಸಿಸಿಟಿವಿ ಕ್ಯಾಮೆರಾ ಅಳವಡಿಗೆ ಆದೇಶ ಪಡೆದು ಕೇವಲ 79 ಅಳವಡಿಸಿದ್ದಕ್ಕೆ ₹4.43 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.
ಕಡಿಮೆ ದರ ನಮೂದಿಸಿ, ನಂತರ ಹೆಚ್ಚು ದರದ ಬಿಲ್ ಪಡೆದ ಪ್ರಕರಣದಲ್ಲಿ ₹2 ಕೋಟಿ, ಮೂಲ ದರ ವ್ಯತ್ಯಾಸ ಮಾಡಿ ₹1.55 ಕೋಟಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕಿಯೋನಿಕ್ಸ್‌ನಲ್ಲಿ ಹಗರಣಗಳು ಮತ್ತೆ ಮರುಕಳಿಸದಂತೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು. ಟೆಂಡರ್ ಆಹ್ವಾನದಿಂದ ಸಾಮಗ್ರಿ ಪೂರೈಕೆಯವರೆಗೆ ಕಣ್ಗಾವಲು ಇಡಲು ಮೂರು ಸಮಿತಿಗಳನ್ನು ರಚಿಸಲಾಗುವುದು. ಮೂರನೇ ಸಂಸ್ಥೆಯ ತಪಾಸಣೆ ಕಡ್ಡಾಯಗೊಳಿಸಲಾಗುವುದು. 4ಜಿ ರಿಯಾಯಿತಿ ದುರುಪಯೋಗ ಮಾಡಿಕೊಳ್ಳುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಹಗರಣದಲ್ಲಿ ಹಲವು ಗುತ್ತಿಗೆದಾರರ ಜತೆಗೆ ಹಿಂದಿನ ಸರ್ಕಾರದ ಅವಧಿಯಲ್ಲಿನ ಕೆಲ ಸಚಿವರು ಹಾಗೂ ಕೆಲವು ಶಾಸಕರು ಭಾಗಿಯಾಗಿರುವ ಶಂಕೆ ಇದೆ. ತನಿಖೆಯ ನಂತರ ಭಾಗಿಯಾದವರು ಸಿಲುಕಿಕೊಳ್ಳಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
‘ಕಿಯೋನಿಕ್ಸ್‌ಗೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿಯ ಕೆಲವರು ಒತ್ತಾಯಿಸುತ್ತಿದ್ದಾರೆ. ಸಿಎಜಿ ವರದಿಯ ತನಿಖೆಯ ನಂತರ ಅವರ ಬಂಡವಾಳವೂ ಬಯಲಾಗಲಿದೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿದೆ. ಸಮಯ ಬಂದಾಗ ಹೇಳುತ್ತೇನೆ’ ಎಂದರು.
ಕೆಇಎ ಪರೀಕ್ಷಾ ಹಗರಣದ ಕಿಂಗ್‌ಪಿನ್ ತಪ್ಪಿಸಿಕೊಂಡ ಪ್ರಕರಣದಲ್ಲಿ ಲೋಪವಾಗಿರುವುದು ನಿಜ. ಕೆಲ ಅಧಿಕಾರಿಗಳು ಬಿಜೆಪಿಯ ಹ್ಯಾಂಗೋವರ್‌ನಿಂದ ಹೊರಬಂದಿಲ್ಲ. ಅಂಥವರಿಂದ ಹೀಗಾಗಿದೆ. ಆದರೆ, ಆರೋಪಿಯನ್ನು ಬಿಡುವ ಪ್ರಶ್ನೆಯೇ ಇಲ್ಲ. ಬಂಧನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.