ಜೋಮನ್ ವರ್ಗೀಸ್

ಸಾಮಾಜಿಕ ಜಾಲತಾಣಗಳು ರಾಜಕೀಯ ಸ್ಥಿತ್ಯಂತರಕ್ಕೆ ವೇದಿಕೆಯಾಗುತ್ತಿರುವ ಕಾಲಘಟ್ಟದಲ್ಲಿ ಕೇರಳಂ ಮುಖ್ಯಮಂತ್ರಿ ಸ್ಥಾನವನ್ನು ವಡಶ್ಶೇರಿ ದಾಮೋದರನ್ ಸತೀಶನ್ ಪಡೆದುಕೊಂಡಿದ್ದಾರೆ. ಕೇರಳಂ ಇದುವರೆಗೆ ಕಂಡಿರುವ 12 ಮುಖ್ಯಮಂತ್ರಿಗಳಿಗಿಂತ 13ನೆಯವರಾದ ವಿ.ಡಿ.ಸತೀಶನ್ ಭಿನ್ನರಾಗಿ ನಿಲ್ಲುವುದು ಅವರ ಜಾತ್ಯತೀತ ನಿಲುವು ಮತ್ತು ಓದಿನಿಂದ ಗಳಿಸಿಕೊಂಡ ಜ್ಞಾನದ ಮೂಲಕ. ಸಕ್ರಿಯ ರಾಜಕಾರಣಕ್ಕೆ ಬರುವ ಮೊದಲು ಕೇರಳಂ ಹೈಕೋರ್ಟ್ ವಕೀಲರಾಗಿದ್ದ ಸತೀಶನ್, ಅಂಕಿಅಂಶಗಳ ಬಗೆಗಿನ ನಿಖರತೆ, ಮಾತು ಮತ್ತು ಭಾಷಾ ಸ್ಪಷ್ಟತೆ ಮೂಲಕವೂ ಗಮನ ಸೆಳೆಯುತ್ತಾರೆ. 61 ವರ್ಷದ ಸತೀಶನ್ (ಜನನ: ಮೇ 31, 1964) ಆಯ್ಕೆಯನ್ನು ‘ಹೊಸ ರಾಜಕೀಯ ಅಧ್ಯಾಯವೊಂದಕ್ಕೆ ಮಲಯಾಳ ಜನರು ಬರೆದ ಮುನ್ನುಡಿ’ ಎಂದು ವಿಶ್ಲೇಷಿಸಲಾಗುತ್ತಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಸುದ್ದಿಗೋಷ್ಠಿಯಲ್ಲಿ ಅವರು ಎರಡು ಪ್ರಶ್ನೆಗಳಿಗೆ ನೀಡಿದ ಉತ್ತರ ಗಮನ ಸೆಳೆಯುವಂಥದ್ದು.

ಮೊದಲನೆಯದು, ಯುಡಿಎಫ್ ಅಧಿಕಾರಕ್ಕೆ ಬಂದರೆ ವಾಹನಗಳಲ್ಲಿ ಅಪಾಯಕಾರಿಯಲ್ಲದ ಮಾರ್ಪಾಡುಗಳಿಗೆ ಅನುಮತಿ ನೀಡಲಾಗುತ್ತದೆ ಎಂದು ಅವರು ಚುನಾವಣಾಪೂರ್ವದಲ್ಲಿ ಹೇಳಿದ್ದರು. ಈ ಕುರಿತು ಯುವಕನೊಬ್ಬ ಪ್ರಶ್ನಿಸಿದಾಗ, ಕೆಳತುಟಿಯನ್ನು ಕಚ್ಚಿ ಹಿಡಿದು, ಎರಡೂ ಹುಬ್ಬುಗಳನ್ನು ಮೇಲಕ್ಕೆತ್ತಿ ಕಣ್ಣಿನ ಸನ್ನೆಯಲ್ಲೇ ಹೌದು ಎನ್ನುತ್ತಾ, ‘ನಾವು ಅಧಿಕಾರಕ್ಕೆ ಬಂದಿರುವುದೇ ಜನರ ಆಶೋತ್ತರಗಳನ್ನು ಈಡೇರಿಸಲು, ನಾವು ಹಾಗೆ ಹೇಳಿದ್ದರೆ ಖಂಡಿತ ಅದನ್ನು ಜಾರಿಗೊಳಿಸುತ್ತೇವೆ’ ಎಂದಿದ್ದರು. ವಿಶೇಷ ಭಾವಭಂಗಿಯೊಂದಿಗಿನ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ. ಮುಖ್ಯವಾಗಿ, ಹೊಸ ತಲೆಮಾರು ಎಂದೇ ಹೆಸರಾದ ಜೆನ್–ಝೀಗಳು ಸತೀಶನ್ ಅವರ ಪ್ರತಿಕ್ರಿಯೆಯನ್ನು ‘ಪೂಕಿ’ ಎಂಬ ವಿಶೇಷಣದೊಂದಿಗೆ ಸ್ವಾಗತಿಸಿದ್ದಾರೆ. ‘ಪೂಕಿ’ ಎನ್ನುವುದು ಜೆನ್–ಝೀಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆರಾಧಕರು, ಪ್ರೀತಿಪಾತ್ರರನ್ನು ಪ್ರೀತಿಯಿಂದ ಕರೆಯಲು ಬಳಸುವ ಪದ. ಈಗ ಯುವ ಸಮುದಾಯದ ಪಾಲಿಗೆ ಸತೀಶನ್ ಕೇರಳಂನ ‘ಪುದು ಯುಗ’ದ (ಹೊಸ ಯುಗ) ‘ಪೂಕಿ (ಮುದ್ದಿನ) ಮುಖ್ಯಮಂತ್ರಿ’ ಆಗಿದ್ದಾರೆ.

ಸತೀಶನ್ ನೀಡಿದ ಎರಡನೆಯ ಉತ್ತರ ‘ಜಾತಿ ರಾಜಕಾರಣ’ಕ್ಕೆ ಸಂಬಂಧಿಸಿದ್ದು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅವರು ತಮ್ಮ ತಂದೆ ‘ವಡಶ್ಶೇರಿ ದಾಮೋದರ ಮೆನನ್’ ಅವರ ಹೆಸರು ಪ್ರಸ್ತಾಪಿಸಿದ್ದರು. ‘ಮೆನನ್’ ಎನ್ನುವುದು ಕೇರಳಂನ ನಿರ್ಣಾಯಕ ರಾಜಕೀಯ ಶಕ್ತಿಯಾದ ನಾಯರ್ ಸಮುದಾಯವನ್ನು ಪ್ರತಿನಿಧಿಸುತ್ತದೆ. ಈ ಬಗ್ಗೆಯೂ ವಿವಾದಗಳು ಎದ್ದಿದ್ದವು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಬೆಂಬಲದೊಂದಿಗೆ ಮುಖ್ಯಮಂತ್ರಿಯಾದರೂ ಸತೀಶನ್, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಜಾತಿಪ್ರೀತಿಯನ್ನು ಹೊರಹಾಕಿದ್ದಾರೆ ಎಂಬ ಟೀಕೆಗಳು ಕೇಳಿಬಂದಿದ್ದವು. ಆದರೆ, ‘ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ತಂದೆಯ ಹೆಸರು ಪ್ರಸ್ತಾಪಿಸಿದ್ದರಲ್ಲಿ ತಪ್ಪೇನಿದೆ, ನನ್ನ ತಂದೆ ಹೆಸರು ಹೇಗಿದೆಯೋ ಹಾಗೆಯೇ ಹೇಳಿದ್ದೇನೆ. ನನಗೆ ತಾಯಿಯ ಹೆಸರನ್ನೂ ಪ್ರಸ್ತಾಪಿಸಬೇಕೆಂಬ ಆಸೆ ಇತ್ತು. ಆದರೆ, ಅದಕ್ಕೆ ಅವಕಾಶ ಇರಲಿಲ್ಲ. ನಾನು ಶಾಸಕನಾಗುವುದಕ್ಕಿಂತಲೂ ಮೊದಲೇ ತಂದೆ–ತಾಯಿ ಇಬ್ಬರೂ ಮೃತಪಟ್ಟಿದ್ದಾರೆ. ಹಾಗಾಗಿ, ಅವರಿಬ್ಬರನ್ನೂ ಎದೆಯೊಳಗೆ ಇಟ್ಟುಕೊಂಡೇ ಪ್ರಮಾಣ ವಚನ ಸ್ವೀಕರಿಸಿದ್ದೇನೆ’ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು.

ಪರವೂರಿನ ನಾಯಕ:ಸತೀಶನ್ ಅವರು ಕೊಚ್ಚಿ ಸಮೀಪದ ನೆಟ್ಟೂರಿನಲ್ಲಿ ಜನಿಸಿದರು. ತಂದೆ ಕೆ. ದಾಮೋದರ ಮೆನನ್. ತಾಯಿ ವಿಲಾಸಿನಿ ಅಮ್ಮ. ಸತೀಶನ್ ಅವರ ಸಾರ್ವಜನಿಕ ಜೀವನ ಆರಂಭವಾಗಿದ್ದು ವಿದ್ಯಾರ್ಥಿ ರಾಜಕೀಯದ ಮೂಲಕ. 1986–87ರ ದಶಕದಲ್ಲಿ ಅವರು ಕೇರಳಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿದ್ದರು. ನಂತರ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ (ಎನ್ಎಸ್ಯುಐ) ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದರು. ಕಾನೂನು ಪದವಿ ಪೂರ್ಣಗೊಳಿಸಿದ ನಂತರ ಕೇರಳಂ ಹೈಕೋರ್ಟ್ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು. ವಾದ ಮಂಡಿಸುವ ತಮ್ಮ ವಿಶೇಷ ಸಾಮರ್ಥ್ಯವನ್ನು ಸತೀಶನ್ ಮುಂದೆ ವಿಧಾನಸಭೆಯಲ್ಲೂ ಸಮರ್ಥವಾಗಿ ಬಳಸಿಕೊಂಡರು.

1996ರಲ್ಲಿ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಪರವೂರು ಕ್ಷೇತ್ರದಲ್ಲಿ ಸೋಲನುಭವಿಸಿದರೂ, 2001ರ ನಂತರ ಇದುವರೆಗಿನ (2006, 2011, 2016, 2021, 2026) ಎಲ್ಲ ಚುನಾವಣೆಗಳಲ್ಲಿ ಪರವೂರಿನ ಜನರು ಅವರ ಕೈ ಹಿಡಿದಿದ್ದಾರೆ. ಈ ಬಾರಿಯೂ 20,600 ಮತಗಳ ಅಂತರದಿಂದ ಗೆದ್ದಿದ್ದಾರೆ. 2021ರ ಚುನಾವಣೆಯಲ್ಲಿ ಸಿಪಿಎಂ ಅಲೆಯಲ್ಲಿ ಕೇರಳಂನಲ್ಲಿ ಯುಡಿಎಫ್ ನೆಲಕಚ್ಚಿತ್ತು. ಈ ಸಂಕಷ್ಟದ ಸಮಯದಲ್ಲಿ ಸತೀಶನ್, ಪಕ್ಷದ ಮುಖಂಡ ರಮೇಶ್ ಚೆನ್ನಿತ್ತಲ ಅವರ ಉತ್ತರಾಧಿಕಾರಿಯಾಗಿ ವಿರೋಧ ಪಕ್ಷದ ನಾಯಕತ್ವ ವಹಿಸಿಕೊಂಡರು. ಪಕ್ಷವನ್ನು ಮತ್ತು ಯುಡಿಎಫ್ ಮೈತ್ರಿಕೂಟವನ್ನು ಪುನಶ್ಚೇತನಗೊಳಿಸಬೇಕಾದ ಮಹತ್ವದ ಜವಾಬ್ದಾರಿ ಅವರ ಹೆಗಲೇರಿತು.

2024ರ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನಗಳಲ್ಲಿ 18ರಲ್ಲಿ ಲಭಿಸಿದ ಗೆಲವು ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ ಮುನ್ನಡೆಯ ಮೂಲಕ ಸತೀಶನ್ ಕೇರಳಂನಲ್ಲಿ ಹೊಸ ರಾಜಕೀಯ ಪರಿಭಾಷೆ ಬರೆದರು. 2026ರ ವಿಧಾನಸಭಾ ಚುನಾವಣೆಯ ಭಾಗವಾಗಿ ಅವರ ನೇತೃತ್ವದಲ್ಲಿ ನಡೆದ 30 ದಿನಗಳ ‘ಯುಡಿಎಫ್ ಪುದು ಯುಗ’ ಯಾತ್ರೆಯು ಕೇರಳಂ ಮುಖ್ಯಮಂತ್ರಿ ಕುರ್ಚಿಯೆಡೆಗಿನ ಅವರ ಹಾದಿಯನ್ನು ಸುಗಮಗೊಳಿಸಿತು. ಕೆಪಿಸಿಸಿ ಉಪಾಧ್ಯಕ್ಷ, ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸಿದ ಅನುಭವವನ್ನೂ ಸತೀಶನ್ ಹೊಂದಿದ್ದಾರೆ. ಹಿಂದೆಂದೂ ಸಚಿವರಾಗಿ ಅನುಭವ ಇಲ್ಲದ ಸತೀಶನ್, ಈಗ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿದ್ದಾರೆ.

ಅಧಿಕಾರಿಗಳು ಹಾಗೂ ರಾಜಕಾರಣಿಗಳಲ್ಲಿ ತಾಯಿಯ ಅಂತಃಕರಣ, ಸ್ಪಂದನಾಶೀಲತೆ ಇರಬೇಕು ಎಂಬ ಮಾತಿದೆ. ಸತೀಶನ್ ಅವರ ನಡೆ, ನುಡಿಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಪ್ರೀತಿ, ಅಂತಃಕರಣದಿಂದ ಸ್ಪಂದಿಸುವುದನ್ನು ಕಾಣಬಹುದು. ಇದಕ್ಕೆ ಎರಡು ಘಟನೆಗಳು ಸಾಕ್ಷಿ. ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸೀತಾ ಲಕ್ಷ್ಮಿ ಅಮ್ಮಾಳ್ ಎಂಬ ವೃದ್ಧೆ ಬಂದಿದ್ದರು. ಇವರು 2018ರಲ್ಲಿ ಕೇರಳಂನಲ್ಲಿ ಸಂಭವಿಸಿದ ಪ್ರವಾಹದ ಸಂತ್ರಸ್ತೆ. ಸತೀಶನ್ ಅವರನ್ನು ಕಂಡಾಗ ಓಡೋಡಿ ಬಂದ ವೃದ್ಧೆ, ನನ್ನ ಮಗ ಎಂದು ಅವರನ್ನು ಬಿಗಿದಪ್ಪಿಕೊಂಡರು. ಅವರನ್ನು ವೇದಿಕೆಯ ಮೇಲೆ ಕರೆತಂದ ಸತೀಶನ್, ರಾಹುಲ್ ಗಾಂಧಿ ಅವರಿಗೆ ನನ್ನ ತಾಯಿ ಎಂದು ಅವರನ್ನು ಪರಿಚಯಿಸಿದರು.

ಎರಡನೆಯ ಘಟನೆ ಸತೀಶನ್ ವಿರೋಧ ಪಕ್ಷದ ನಾಯಕರಾಗಿದ್ದಾಗ ನಡೆದದ್ದು. ಎಸ್ಬಿಐನ ವ್ಯವಸ್ಥಾಪಕಿ ಶ್ರೀರಸ್ತು ಎಂಬವರು ಕಚೇರಿ ಕಾರ್ಯದ ನಿಮಿತ್ತ ರೈಲಿನಲ್ಲಿ ತ್ರಿಶ್ಶೂರ್ಗೆ ಹೊರಟಿದ್ದರು. ಅವರ ಎದುರಿನ ಆಸನದಲ್ಲಿ ಸತೀಶನ್ ಇದ್ದರು . ‘ ಅವರೇ ಮುಂದಾಗಿ ನನ್ನ ಹೆಸರು, ಹುದ್ದೆ, ಕೆಲಸ ಮಾಡುವ ಸ್ಥಳ, ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಪಡೆದುಕೊಂಡರು. ಮಧ್ಯಾಹ್ನ, ಮನೆಯಿಂದ ತಂದಿದ್ದ ಬುತ್ತಿಯನ್ನು ನನಗೆ ನೀಡಿದರು. ಬೇಡ ಎಂದರೂ, ತಮ್ಮ ಸಿಬ್ಬಂದಿಗಾಗಿ ಹೆಚ್ಚುವರಿ ಬುತ್ತಿ ತಂದಿರುವುದಾಗಿ ಹೇಳಿ, ನನಗೆ ಊಟ ಮಾಡುವಂತೆ ಸೂಚಿಸಿದರು. ಸಾಮಾನ್ಯ ವ್ಯಕ್ತಿಯಾಗಿ, ಕುಟುಂಬ ಸದಸ್ಯನಂತೆ ಬೆರೆತು ಅವರೂ ಜತೆಗೆ ಊಟ ಮಾಡಿದರು. ಇದು ಅವರ ಸರಳತೆಗೆ ಸಾಕ್ಷಿ’ ಎಂದು ಸ್ಮರಿಸುತ್ತಾರೆ ಶ್ರೀರಸ್ತು.

ಪತ್ನಿ ಆರ್.ಲಕ್ಷ್ಮಿಪ್ರಿಯಾ, ಪುತ್ರಿ ಉಣ್ಣಿಮಾಯಾ ಅವರ ಪುಟ್ಟ, ಸಂತೃಪ್ತ ಕುಟುಂಬ; ಕಪ್ಪುಚುಕ್ಕೆ ಇಲ್ಲದ ರಾಜಕಾರಣ. ಸ್ಪಷ್ಟವಾದ ಮಾತು, ನಿಖರವಾದ ಕಾರ್ಯಯೋಜನೆ ಮೂಲಕ ಜನ ನಾಯಕ, ಜನ ಸೇವಕನಾಗುವ ಮಾದರಿಗೆ ಸತೀಶನ್ ಮೇಲ್ಪಂಕ್ತಿ ಹಾಕಿದ್ದಾರೆ. ಪುಸ್ತಕಗಳ ಓದು, ಸಾಹಿತ್ಯದ ಒಡನಾಟ ಅವರಿಗೆ ಹೆಚ್ಚೇ ಇದೆ. ಎರಡು ಕೃತಿಗಳ ರಚನೆಕಾರರು ಅವರು. ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದ ಮಾಧವ ಗಾಡ್ಗೀಳ್ ವರದಿಯ ಬಗ್ಗೆ ಸದನದಲ್ಲಿ ಮಂಡಿಸಿದ ವಾದವು ಅವರ ಅಧ್ಯಯನಶೀಲತೆಗೆ ಸಾಕ್ಷಿ. ‘ದೇವರ ಸ್ವಂತ ನಾಡಿನ’ ಆಡಳಿತ ಚುಕ್ಕಾಣಿ ಹಿಡಿದಿರುವ ಸತೀಶನ್ ಅವರನ್ನು ‘ಡೌನ್ ಟು ಅರ್ಥ್’ ವೆಬ್ತಾಣ ‘ಹಸಿರು ಮುಖ್ಯಮಂತ್ರಿ’ ಎಂದು ಕರೆದಿದೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-51-1704620908

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.