ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ, ಧರ್ಮ ಮೀರಿ ಗಾಂಧೀಜಿ, ಅಂಬೇಡ್ಕರ್ ಮಾರ್ಗ ಹಿಡಿವೆ: ಯು. ಟಿ. ಖಾದರ್‌ ಮಾತು

ನೂತನ ಸಭಾಧ್ಯಕ್ಷ ಯು. ಟಿ. ಖಾದರ್‌ ಮಾತು
Published 25 ಮೇ 2023, 0:10 IST
Last Updated 25 ಮೇ 2023, 0:10 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಎಲ್ಲ ಶಾಸಕರ ಹಕ್ಕುಗಳ ರಕ್ಷಿಸುವುದರ ಜತೆಗೆ ಜಾತಿ, ಮತ, ಧರ್ಮಗಳ ಗಡಿಯನ್ನು ಮೀರಿ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತೇನೆ’ ಎಂದು ವಿಧಾನಸಭೆಯ ನೂತನ ಸಭಾಧ್ಯಕ್ಷ ಯು.ಟಿ.ಖಾದರ್‌ ಫರೀದ್‌ ಹೇಳಿದರು.

ವಿಧಾನಸಭೆಯಲ್ಲಿ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆದ ನಂತರ ಮಾತನಾಡಿದ ಅವರು, ‘ಎಲ್ಲ ಶಾಸಕರ ಪಾಲಕ ಆಗಿರುತ್ತೇನೆ. ಮಹಾತ್ಮಗಾಂಧೀಜಿ, ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಹಾಕಿಕೊಟ್ಟ ಮಾರ್ಗವೇ ಮುಖ್ಯವೆಂದು ಭಾವಿಸಿ ಆ ದಾರಿಯಲ್ಲೇ ನಡೆಯುತ್ತೇನೆ’ ಎಂದರು.

‘ನಮ್ಮ ತಾತ್ವಿಕತೆಯನ್ನು ಬದಿಗೊತ್ತಿ, ಎಲ್ಲರೂ ಸೇರಿ ರಾಜ್ಯದ ಅಭ್ಯುದಯಕ್ಕಾಗಿ ಶ್ರಮಿಸೋಣ. ಇಲ್ಲಿ ಜನಸಾಮಾನ್ಯರ, ರೈತರ, ಶ್ರಮಿಕರ, ವಿದ್ಯಾರ್ಥಿಗಳು ಮತ್ತು ಮಹಿಳೆಯರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸೋಣ. ಈ ವಿಚಾರಗಳ ಚರ್ಚೆಗೆ ವಿಧಾನಸಭೆ ವೇದಿಕೆಯಾಗಬೇಕು’ ಎಂದು ಖಾದರ್‌ ಹೇಳಿದರು.

‘ನಾನು ತುಳುನಾಡಿನಿಂದ ಬಂದವನು. ಕಿರಿಯ ವಯಸ್ಸಿನಲ್ಲೇ ಈ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ನಮ್ಮ ಜಿಲ್ಲೆಯವರಾದ ವೈಕುಂಠ ಬಾಳಿಗಾ ಅವರು ವಿಧಾನಸಭೆಯ ಸಭಾಧ್ಯಕ್ಷರಾಗಿದ್ದರು. ಕೆ.ಎಸ್‌.ಹೆಗ್ಡೆ ಲೋಕಸಭಾ ಸಭಾಧ್ಯಕ್ಷರಾಗಿ ಸಾಕಷ್ಟು ಉತ್ತಮ ಹೆಸರು ಮಾಡಿದ್ದರು. ಆ ಗೌರವವನ್ನು ಉಳಿಸುವ ಕೆಲಸ ಮಾಡುತ್ತೇನೆ’ ಎಂದು ಅವರು ಹೇಳಿದರು.

ಅವಿರೋಧ ಆಯ್ಕೆ

ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾದರ್‌ ಹೆಸರನ್ನು ಸೂಚಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನುಮೋದಿಸಿದರು. ಬೇರೆ ಯಾರೂ ಕಣದಲ್ಲಿ ಇಲ್ಲದ ಕಾರಣ ಖಾದರ್‌ ಅವರು ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ ಎಂದು ಹಂಗಾಮಿ ಸಭಾಧ್ಯಕ್ಷ ಆರ್‌.ವಿ.ದೇಶಪಾಂಡೆ ಘೋಷಿಸಿದರು.

ಈ ಪ್ರಕ್ರಿಯೆ ಮುಗಿದ ಬಳಿಕ ಸಿದ್ದರಾಮಯ್ಯ ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಖಾದರ್ ಅವರನ್ನು ಸಭಾಧ್ಯಕ್ಷ ಪೀಠಕ್ಕೆ ಕರೆತಂದರು. ಬಿಜೆಪಿಯಿಂದ ವಿರೋಧಪಕ್ಷದ ನಾಯಕರ ಆಯ್ಕೆ ಆಗದ ಕಾರಣ ಬೊಮ್ಮಾಯಿ ಅವರನ್ನೇ ದೇಶಪಾಂಡೆ ಕರೆದರು.

ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ, ಟಿ.ಬಿ.ಜಯಚಂದ್ರ, ಕೆ.ಎಚ್‌.ಮುನಿಯಪ್ಪ, ಬಸವರಾಜರಾಯರಡ್ಡಿ, ಬಿ.ಆರ್‌.ಪಾಟೀಲ, ಕೆ.ಎಂ.ಶಿವಲಿಂಗೇಗೌಡ, ಬಿಜೆಪಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ, ಸುನಿಲ್‌ ಕುಮಾರ್‌, ಬಿ.ವೈ.ವಿಜಯೇಂದ್ರ, ಜೆಡಿಎಸ್‌ನ ಜಿ.ಟಿ.ದೇವೇಗೌಡ, ಸಿ.ಎನ್‌.ಬಾಲಕೃಷ್ಣ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜಿ. ಜನಾರ್ದನ ರೆಡ್ಡಿ ಅವರೆಲ್ಲ ಖಾದರ್‌ ಅವರನ್ನು ಅಭಿನಂದಿಸಿ ಮಾತನಾಡಿದರು.

ಸಚಿವರನ್ನು ಪರಿಚಯಿಸಿದ ಸಿಎಂ

ಕಲಾಪ ಆರಂಭವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರು ನೂತನ ಸಚಿವರ ಪರಿಚಯ ಮಾಡಿದರು. ‘ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿ ಪರಿಚಯಿಸಿದ್ದರೆ ಸೂಕ್ತವಾಗುತ್ತಿತ್ತು. ಆದಷ್ಟು ಬೇಗ ಮಾಡಿ. ಇಲ್ಲವಾದರೆ ಜನ ಏನು ತಿಳಿದುಕೊಳ್ಳುತ್ತಾರೆ’ ಎಂದು ಬಸವರಾಜ ಬೊಮ್ಮಾಯಿ ಛೇಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,‘ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಒಬ್ಬರೇ ಇದ್ದರಲ್ಲ. ಮಂತ್ರಿಗಳೇ ಇರಲಿಲ್ಲವಲ್ಲ. ಸಂಶಯ ಬೇಡ, ಖಾತೆ ಹಂಚಿಕೆ ಮಾಡುತ್ತೇವೆ’ ಎಂದರು.

ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು.

Quote - ನೀವು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು ಇಡೀ ದೇಶವೇ ನಿಮ್ಮನ್ನು ಗಮನಿಸುತ್ತದೆ. ಸರ್ಕಾರ ತಪ್ಪು ಮಾಡಿದಾಗ ಚಾಟಿ ಬೀಸಬೇಕು ಜಿ.ಪರಮೇಶ್ವರ ಸಚಿವ

ಪಕ್ಷಾತೀತರಾಗಿ ಕಾರ್ಯ ನಿರ್ವಹಿಸಿ:ಸಿದ್ದರಾಮಯ್ಯ ‘ವಿಧಾನಸಭೆಯಲ್ಲಿ ಆರೋಗ್ಯಪೂರ್ಣ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಕೂಡಿದ ಚರ್ಚೆಗಳಾಗಬೇಕು. ಇದರ ಜವಾಬ್ದಾರಿ ನೂತನ ಸಭಾಧ್ಯಕ್ಷರ ಮೇಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘ಸದನದ ಘನತೆ ಗಾಂಭೀರ್ಯ ಗೌರವ ಎತ್ತಿಹಿಡಿಯಬೇಕು. ಖಾದರ್ ಅವರ ಮುಂದಾಳತ್ವದಲ್ಲಿ ಸದನದ ಚರ್ಚೆ ಮೇಲ್ಮಟ್ಟಕ್ಕೇರಲಿ. ಸಭಾಧ್ಯಕ್ಷರಾದವರು ಪಕ್ಷಾತೀತರಾಗಿ ಕೆಲಸ ಮಾಡಬೇಕೆಂಬ ನಿರೀಕ್ಷೆಯನ್ನು ಎಲ್ಲ ಸದಸ್ಯರು ಬಯಸುತ್ತಾರೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಇತ್ತೀಚಿನ ದಿನಗಳಲ್ಲಿ ವಿಧಾನಸಭೆಯ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಭಾವನೆ ಅನೇಕರಲ್ಲಿದೆ. ಅದನ್ನು ಹೋಗಲಾಡಿಸುವ ಕೆಲಸ ಮಾಡಬೇಕು. ವಿಧಾನಸಭೆ ಪ್ರಜಾಪ್ರಭುತ್ವದ ದೇಗುಲ. ಇಲ್ಲಿ ಏಳು ಕೋಟಿ ಕನ್ನಡಿಗರ ಸಮಸ್ಯೆಗಳನ್ನು ಚರ್ಚೆ ಮಾಡಬೇಕು’ ಎಂದರು. ‘ಚರ್ಚೆಯಲ್ಲಿ ಭಾಗವಹಿಸುವಾಗ ಪದಬಳಕೆಯಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಅ ಸಾಂವಿಧಾನಿಕ ಪದ ಬಳಕೆಗೆ ಅವಕಾಶವಿರಬಾರದು. ರಚನಾತ್ಮಕ ಸಲಹೆಗಳನ್ನು ನೀಡಲು ಅವಕಾಶ ಹಾಗೂ ಹಕ್ಕುಗಳಿವೆ’ ಎಂದು ತಿಳಿಸಿದರು.

ನಿಮ್ಮ ನ್ಯಾಯ ತಕ್ಕಡಿ ಸಮನಾಗಿರಲಿ: ಬೊಮ್ಮಾಯಿ ‘ಸಂವಿಧಾನದಲ್ಲಿ ವಿಶೇಷ ಸ್ಥಾನ ಸಭಾಧ್ಯಕ್ಷರಿಗಿದೆ. ಸರ್ಕಾರದ ಅಳಿವು ಉಳಿವಿನ ತೀರ್ಮಾನಗಳು ಸಭಾಧ್ಯಕ್ಷರಿಂದ ಆಗಿದೆ. ಕೆಲವು ತೀರ್ಪುಗಳು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದೂ ಇವೆ. ತಾವು ನೀಡುವ ತೀರ್ಪು ಚರಿತ್ರಾರ್ಹವಾಗುತ್ತವೆ. ನೀವು ನಿಷ್ಪಕ್ಷವಾಗಿ ಕೆಲಸ ಮಾಡಬೇಕು. ಪ್ರತಿ ಪಕ್ಷದಲ್ಲಿ ನಿಮ್ಮ ಸ್ನೇಹಿತರು ಹೆಚ್ಚು ಇದ್ದಾರೆ. ಆದ್ದರಿಂದ ಆಡಳಿತ ಮತ್ತು ವಿರೋಧ ಪಕ್ಷಗಳನ್ನು ಸಮನಾಗಿ ಕಾಣಬೇಕು’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ‘ವಿರೋಧ ಪಕ್ಷದ ಉಪನಾಯಕರಾಗಿಯೂ ಸಮರ್ಥವಾಗಿ ಕೆಲಸ ಮಾಡಿದ್ದೀರಿ‌. ಹಿಂದೆ ಸಭಾಧ್ಯಕ್ಷರ ಹುದ್ದೆ ಅಲಂಕರಿಸಿದವರು ಈ ಹುದ್ದೆಯ ಗೌರವ ಹೆಚ್ಚಿಸಿದ್ದಾರೆ.ನೀವು ಕೊಡುವ ತೀರ್ಪು ಇಡೀ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ನಿಮ್ಮ ತಕ್ಕಡಿ ಸಮವಾಗಿರಬೇಕು’ ಎಂದರು. ‘ಪ್ರತಿಪಕ್ಷಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಬಾರಿ ಹೊಸ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದಾರೆ. ಅವರಿಗೆ ಮಾತನಾಡಲು ಹೆಚ್ಚಿನ ಅವಕಾಶ ನೀಡಿ ಅವರಿಂದ ಹೊಸ ವಿಚಾರಗಳು ಬರಲಿದೆ’ ಎಂದು ತಿಳಿಸಿದರು.

ವಿರೋಧ ಪಕ್ಷ ಬಲಿಷ್ಠವಾಗಬೇಕು: ಡಿಕೆಶಿ ‘ವಿರೋಧಪಕ್ಷದವರು ಬಲಿಷ್ಠವಾದಷ್ಟು ನಾವು ಬಲಿಷ್ಠರಾಗುತ್ತೇವೆ. ಅವರು ದುರ್ಬಲರಾದರೆ ನಾವು ದುರ್ಬಲರಾಗುತ್ತೇವೆ. ನಮ್ಮ ತಪ್ಪುಗಳನ್ನು ಹೇಳುವ ಶಕ್ತಿ ಸಾಮರ್ಥ್ಯ ಅವರಲ್ಲಿ ಇರಲಿ. ಆಗ ನಾವು ತಪ್ಪು ಮಾಡದಂತೆ ಎಚ್ಚರಿಕೆ ವಹಿಸಿದಂತಾಗುತ್ತದೆ. ಯಾವುದೇ ತಪ್ಪುಗಳಿಗೆ ಅವಕಾಶ ನೀಡದೇ ಉತ್ತಮ ಆಡಳಿತ ನೀಡುವುದು ನಮ್ಮ ಗುರಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ‘ನಾನು ಆಗಾಗ್ಗೆ ಹೇಳುವಂತೆ ದೇವರು ವರವನ್ನೂ ನೀಡುವುದಿಲ್ಲ. ಶಾಪವನ್ನೂ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶ ನಿಮಗೆ ಈ ಸ್ಥಾನದ ಮೂಲಕ ಸಿಕ್ಕಿದೆ. ಈ ಸ್ಥಾನದಲ್ಲಿ ಕೂತಿರುವ ಅನೇಕರು ನಂತರ ಎತ್ತರದ ಸ್ಥಾನಕ್ಕೆ ಹೋಗಿರುವುದನ್ನು ನೋಡಿದ್ದೇವೆ. ನೀವು ಕೂಡ ಅತ್ಯುನ್ನತ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT