ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌, ಕಲಬುರಗಿಯಿಂದ ಬೆಂಗಳೂರಿಗೆ ಹೊಸ ರೈಲು ಆರಂಭಿಸಲು ಖರ್ಗೆ ಪತ್ರ

ಪ್ರಯಾಣಿಕರ ಬವಣೆಯ ಕುರಿತು ವರದಿ ಪ್ರಕಟಿಸಿದ್ದ ‘ಪ್ರಜಾವಾಣಿ’
Published 25 ಮೇ 2023, 15:33 IST
Last Updated 25 ಮೇ 2023, 15:33 IST
ಅಕ್ಷರ ಗಾತ್ರ

ಕಲಬುರಗಿ: ಜನದಟ್ಟಣಿ ಹೆಚ್ಚಾಗಿರುವುದರಿಂದ ಕಲಬುರಗಿಯಿಂದ ಬೆಂಗಳೂರಿಗೆ ಎರಡು ಹಾಗೂ ಬೀದರ್‌ನಿಂದ ಒಂದು ರೈಲನ್ನು ಹೊಸದಾಗಿ ಆರಂಭಿಸುವಂತೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.

ಜನರು ರೈಲಿನಲ್ಲಿ ಸೀಟು ಸಿಗದೇ ಸ್ಲೀಪರ್ ಬೋಗಿಯ ಕೆಳಗೆ ಮಲಗಿಕೊಂಡು ಹೋಗುತ್ತಿರುವ ಕುರಿತ ವರದಿಯನ್ನು ‘ಪ್ರಜಾವಾಣಿ’ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ಇತ್ತೀಚೆಗೆ ಪ್ರಕಟಿಸಿದ್ದವು.

ಕಲಬುರಗಿ ಬೆಂಗಳೂರು ಹಾಗೂ ಬೀದರ್ ಬೆಂಗಳೂರು ನಡುವಿನ ಪ್ರಯಾಣಿಕರ ದಟ್ಟಣೆಯ ಕುರಿತಂತೆ ‍ಪ್ರಸ್ತಾಪಿಸಿರುವ ಖರ್ಗೆ ಅವರು, ‘ಕಲಬುರಗಿಯಿಂದ ಬೆಂಗಳೂರಿಗೆ ಪ್ರತಿನಿತ್ಯ ಸುಮಾರು 6000 ಪ್ರಯಾಣಿಕರು ಸಂಚರಿಸುತ್ತಿದ್ದು ಅವರಲ್ಲಿ ಬಹುತೇಕ ವಲಸೆ ಕೂಲಿ ಕಾರ್ಮಿಕರಾಗಿದ್ದಾರೆ. ಮೀಸಲು ಬೋಗಿಗಳಲ್ಲಿ ಆಸನ ಕಾಯ್ದಿರಿಸಲು ಹಣಕಾಸಿನ ದೃಷ್ಟಿಯಿಂದ ಅವರ ಶಕ್ತಿಗೆ ಮೀರಿದ್ದಾಗಿದ್ದು ಹಾಗಾಗಿ ಅವರು ಜನರಲ್ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದು ಜನದಟ್ಟಣೆ ಹೆಚ್ಚಾಗಲು ಕಾರಣವಾಗಿದ್ದು ಪ್ರಯಾಣಿಕರು ಆಸನದ ಕೊರತೆಯಿಂದಾಗಿ ಕೆಳಗೆ, ಮೇಲೆ ಮಲಗಿಕೊಂಡು ಪ್ರಯಾಣಿಸುತ್ತಿದ್ದಾರೆ. ಇದು ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ’ ಎಂದಿದ್ದಾರೆ.

ಪ್ರಸ್ತುತ ಕಲಬುರಗಿ ಹಾಗೂ ಬೆಂಗಳೂರು ನಡುವೆ ಪ್ರತಿನಿತ್ಯ ಉದ್ಯಾನ ಎಕ್ಸ್ ಪ್ರೆಸ್, ಕರ್ನಾಟಕ ಎಕ್ಸ್‌ಪ್ರೆಸ್‌, ಬಸವ ಎಕ್ಸ್‌ಪ್ರೆಸ್‌, ಸೋಲಾಪುರ–ಹಾಸನ ಎಕ್ಸ್‌ಪ್ರೆಸ್‌ ಮತ್ತು ಕೊಯಮತ್ತೂರು ಎಕ್ಸ್‌ಪ್ರೆಸ್‌ ಎಂಬ ಐದು ರೈಲುಗಳು ಸಂಚರಿಸುತ್ತಿವೆ. ಇದರ ಜೊತೆಗೆ ವಾರಕ್ಕೊಮ್ಮೆ ನಾಗರಕೋಯಿಲ್ ಎಕ್ಸ್‌ಪ್ರೆಸ್‌, ತೂತುಕುಡಿ ವಿವೇಕ ಎಕ್ಸ್‌ಪ್ರೆಸ್‌, ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್‌, ಎಂಜಿಆರ್ ಚೆನ್ನೈ ಎಕ್ಸ್‌ಪ್ರೆಸ್‌, ತಿರುವನಂತಪುರಂ ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ಹಾಗೂ ಯಶವಂತಪುರ ಸುವಿಧಾ ಎಕ್ಸ್‌ಪ್ರೆಸ್‌ ರೈಲುಗಳು ಸಂಚರಿಸುತ್ತಿವೆ. ಮೈಸೂರು ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ವಾರದಲ್ಲಿ ಎರಡು ದಿನ ಸಂಚರಿಸುತ್ತದೆ. ಪ್ರಮುಖವಾಗಿ, ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಈ ಎಲ್ಲ ರೈಲುಗಳ ಬೋಗಿಗಳನ್ನು ಕಡಿತಗೊಳಿಸಲಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದ್ದು ಪುನಃ ಕಡಿತಗೊಳಿಸಲಾದ ಬೋಗಿಗಳನ್ನು ಆಯಾ ರೈಲುಗಳಿಗೆ ಜೋಡಿಸುವುದು ಅತಿ ಅವಶ್ಯಕವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಒತ್ತಾಯಿಸಿದ್ದಾರೆ.

‘ವಾಸ್ತವಾಂಶ ಏನೆಂದರೆ, ಬೀದರ್ ಹಾಗೂ ಬೆಂಗಳೂರು‌ ನಡುವೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ಈ ಎರಡು ನಗರಗಳಿಗೆ ನಿಗದಿಪಡಿಸಿದ ಮೀಸಲಿಸಿರುವ ಆಸನಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಕಲಬುರಗಿ–ಬೆಂಗಳೂರು ನಡುವೆ ಎರಡು ನೂತನ ರೈಲುಗಳು ಹಾಗೂ ಬೀದರ್–ಬೆಂಗಳೂರು ನಡುವೆ ಒಂದು ನೂತನ ರೈಲು ಓಡಿಸುವ ಅವಶ್ಯಕತೆ ಇದ್ದು ಇದರಿಂದ ಜನಸಂದಣಿ ಕಡಿಮೆಯಾಗುವುದರ ಜೊತೆಗೆ ಪ್ರಯಾಣಿಕರು ಎದುರಿಸುತ್ತಿರುವ ಅನಾನುಕೂಲತೆ ಕಡಿಮೆಯಾಗಲಿದೆ. ಹಾಗಾಗಿ, ಮೇಲೆ ಹೆಸರಿಸಿರುವಂತೆ ನೂತನ ರೈಲುಗಳ ಓಡಾಟಕ್ಕೆ ಕ್ರಮ ಕೈಗೊಳ್ಳಲು ಅಗತ್ಯ ಸೂಚನೆ ನೀಡಬೇಕು’ ಎಂದು ರೈಲ್ವೆ ಸಚಿವರಲ್ಲಿ ಖರ್ಗೆ ಅವರು ಕೋರಿದ್ದಾರೆ.

ಹೊಸ ರೈಲು ಆರಂಭಿಸುವಂತೆ ಕೋರಿ ಕಲ್ಯಾಣ ‌ಕರ್ನಾಟಕ ಅಭಿವೃದ್ಧಿ ವೇದಿಕೆ ಸದಸ್ಯರು ಟ್ಚಿಟರ್ ಚಳವಳಿಯನ್ನೂ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT