ಮಂಗಳವಾರ, 19 ಮೇ 2026
×
ADVERTISEMENT

ಕನ್ನಡ ನುಡಿತೇರು ಎಳೆಯುವವರು ಯಾರಾಗಬೇಕು?: ಸಾಹಿತಿಗಳು, ಲೇಖಕರ ಅಭಿಮತ ಏನು

Published : 12 ಏಪ್ರಿಲ್ 2026, 23:31 IST
Last Updated : 12 ಏಪ್ರಿಲ್ 2026, 23:31 IST
ADVERTISEMENT
ಫಾಲೋ ಮಾಡಿ
Comments
ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಬಗ್ಗೆ ಮಾತನಾಡಲು ಬೇಸರವಾಗುತ್ತದೆ. ಮುಂಚೂಣಿ ಸಾಹಿತಿಗಳೇ ಸಮ್ಮೇಳನದ ಅಧ್ಯಕ್ಷರಾಗಬೇಕು, ಉತ್ತಮ ಸಂಘಟಕರು ಸಂಘಟಕರಾಗಿ ಉಳಿದುಕೊಳ್ಳಬೇಕು. ರಾಜಕೀಯ ಅಸ್ತ್ರ ಬಳಸಿಕೊಂಡು ಸಮ್ಮೇಳನದ ಅಧ್ಯಕ್ಷರಾಗುವುದು ಸರಿಯಲ್ಲ
ಅಲ್ಲಾಗಿರಿರಾಜ್‌, ಗಜಲ್‌ ಸಾಹಿತಿ
ಪ್ರಸ್ತುತ ದಿನಮಾನಗಳಲ್ಲಿ ರಾಜಕೀಯ ವ್ಯಕ್ತಿಗಳನ್ನು ಬಿಟ್ಟು ಸಾಹಿತ್ಯ ಚಟುವಟಿಕೆ ನಡೆಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯಿದೆ. ಶೇಖರಗೌಡ ಅವರಿಗೆ ರಾಜಕೀಯ, ಸಹಕಾರ ಹಾಗೂ ಸಾಹಿತ್ಯಿಕ ಮೂರೂ ಹಿನ್ನಲೆ ಇರುವುದರಿಂದ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ್ದು ಸರಿಯಿದೆ. 
ಕೆ.ಬಿ. ಬ್ಯಾಳಿ, ಸಾಹಿತಿ
ರಾಜಕಾರಣಿಗಳಾದವರು ಸಾಹಿತ್ಯ ವಲಯದಲ್ಲಿ ಸಕ್ರಿಯವಾಗಿದ್ದರೆ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವುದರಲ್ಲಿ ತಪ್ಪೇನಿಲ್ಲ. ಶೇಖರಗೌಡ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿದ್ದು ಸ್ವಾಗತಾರ್ಹ. ಆದರೆ ಅವರಿಗಿಂತಲೂ ಉತ್ತಮವಾಗಿದ್ದವರನ್ನು ಆಯ್ಕೆ ಮಾಡಿದ್ದರೆ ಪರಿಷತ್ತಿನ ಗೌರವ ಇನ್ನಷ್ಟು ಹೆಚ್ಚಾಗುತ್ತಿತ್ತು
ವೀರಣ್ಣ ನಿಂಗೋಜಿ, ಸಾಹಿತಿ
ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿಯೇ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಪರ–ವಿರೋಧ ಅಭಿಪ್ರಾಯಗಳು ಇರುವುದು ಸಹಜ. ಈ ಆಯ್ಕೆಯಲ್ಲಿ ತಪ್ಪೇನಿಲ್ಲ. ಜನಗಣತಿ ಆರಂಭವಾಗಿರುವುದರಿಂದ ಮೇ ಅಥವಾ ಜೂನ್‌ನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು.
ಶರಣೇಗೌಡ ಪೋಲೀಸ್ ಪಾಟೀಲ, ಪರಿಷತ್ತಿನ ಜಿಲ್ಲಾಧ್ಯಕ್ಷ 
‘ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ಕೊಟ್ಟಿರಬೇಕು’
ಸಮ್ಮೇಳನಕ್ಕೆ ಯಾರೇ ಅಧ್ಯಕ್ಷರಾದರೂ, ರಾಜಕೀಯದಲ್ಲಿ ಇದ್ದರೂ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರಬೇಕು. ಅಂಥವರನ್ನು ಅಧ್ಯಕ್ಷರನ್ನಾಗಿ ಮಾಡುವುದು ತಪ್ಪಲ್ಲ. ಸಮ್ಮೇಳನದ ಅಧ್ಯಕ್ಷರಾಗುವುದು ಘನತೆಯ ವಿಚಾರವಾಗಿದ್ದು ರಾಜಕೀಯದಲ್ಲಿದ್ದಾರೆ ಎನ್ನುವ ಕಾರಣಕ್ಕೆ ವಿರೋಧ ಸರಿಯಲ್ಲ. ಬಿ.ಟಿ.ಲಲಿತಾ ನಾಯ್ಕ, ವೀರಪ್ಪ ಮೊಯ್ಲಿ ಸಕ್ರಿಯ ರಾಜಕಾರಣದಲ್ಲಿದ್ದರೂ ಸಾಹಿತ್ಯಿಕವಾಗಿ ಕೆಲಸ ಮಾಡಿದ್ದಾರೆ. ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವವರು ಸಾಹಿತ್ಯ ಬರೆದಿರಬೇಕು, ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ಕೊಟ್ಟಿರಬೇಕು. ಶೇಖರಗೌಡ ಮಾಲೀಪಾಟೀಲ ಅವರು ಸಾಹಿತ್ಯ ಪರಿಷತ್‌ಗೆ ಸೇವೆ ಸಲ್ಲಿಸಿದ್ದಾರೆ. ಗಂಗಾವತಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಿದ್ದಾರೆ.
ಸಾವಿತ್ರಿ ಮುಜಮುದಾರ, ಸಾಹಿತಿ
‘ಸ್ವಾರ್ಥಿಗಳ ಪರಿಷತ್‌ ಆಗಿದೆ’
ಸಾಹಿತ್ಯ ಪರಿಷತ್‌ ಹಾಗೂ ಸಮ್ಮೇಳನಗಳು ಅಸ್ತಿತ್ವ ಕಳೆದುಕೊಂಡಿವೆ. ಕೆಲವರ ಹಿಡಿತಕ್ಕೆ ಸಿಲುಕಿ ನಲುಗಿವೆ. ಪರಿಷತ್‌ನಲ್ಲಿ ಇರುವವರು ಪೂರ್ವಗ್ರಹ ಪೀಡಿತರಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಗಳಿಗೆ ನೆರವಾಗುವವರಿಗೆ ಅವಕಾಶ ಕೊಡಿಸಲಾಗುತ್ತಿದೆ. ಸಮ್ಮೇಳನಕ್ಕೆ ತಮಗೆ ಬೇಕಾದವರನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ. ಈ ರೀತಿಯ ಬೆಳವಣಿಗೆಯಿಂದಾಗಿ ಸಾಹಿತ್ಯದ ಮೂಲ ಆಶಯವೇ ಮರೀಚಿಕೆಯಾಗಿದೆ. ಸಾಹಿತಿಗಳು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಮ್ಮೇಳನವೇ ಬೇಕೆಂದಿಲ್ಲ. ಆದರೆ ಸಮ್ಮೇಳನಕ್ಕೆ ಸಾಹಿತಿಗಳು ಬೇಕು. ಬದಲಾವಣೆ ಮಾಡಿಕೊಂಡರೆ ಮಾತ್ರ ಪರಿಷತ್ತಿನ ಗೌರವ ಉಳಿಯುತ್ತದೆ.
ವಾಲ್ಮಿಕಪ್ಪ ಯಕ್ಕರನಾಳ, ಸಾಹಿತಿ, ಕುಷ್ಟಗಿ
‘ಜನರ ಅಭಿಪ್ರಾಯ ಪರಿಷತ್‌ ಗೌರವಿಸಲಿ’
ಸಮ್ಮೇಳನ ಎಲ್ಲಿ ನಡೆಯುತ್ತದೆಯೊ ಮೂಲತಃ ಆ ಭಾಗದ ಬರಹಗಾರರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಬೇಕು. ಅವರು ಸಾಮಾಜಿಕ ಕ್ಷೇತ್ರಗಳಲ್ಲಿ ಇರಬಹುದು. ಸ್ವಾಮೀಜಿಗಳು, ರಾಜಕಾರಣಿಗಳು, ಪ್ರಮುಖ ಸಾಹಿತಿ ಯಾರೇ ಆಗಿದ್ದರೂ ಪರವಾಗಿಲ್ಲ. ವ್ಯಕ್ತಿ ಯಾವುದೇ ಕ್ಷೇತ್ರ ಹಾಗೂ ವೃತ್ತಿಯಲ್ಲಿದ್ದರೂ ಪ್ರಮುಖ ಸಾಹಿತಿ ಎಂದು ಪರಿಗಣನೆಯಾಗಿರಬೇಕು. ಆದರೆ ಈಗಿನ ಪರಿಸ್ಥಿತಿಯಲ್ಲಿ ಸಾಹಿತ್ಯ ಪರಿಷತ್‌ಗೆ ಯಾರು ಆರಿಸಿ ಬರುತ್ತಾರೊ ಅವರು ತಮಗೆ ತಿಳಿದಂತೆ ಮಾಡುತ್ತಿದ್ದಾರೆ. ಹಿರಿತನವನ್ನು ಯಾರೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಶೇಖರಗೌಡ ಮಾಲಿಪಾಟೀಲ ಮೂಲತಃ ರಾಜಕಾರಣಿ. ಮೊದಲು ಬರೆದಿದ್ದರೂ ಗುರುತಿಸಿಕೊಂಡಿದ್ದು ರಾಜಕಾರಣದ ಕ್ಷೇತ್ರದಿಂದ. ಸಾಹಿತಿಗಳೇ ಸಮ್ಮೇಳನದ ಅಧ್ಯಕ್ಷರಾಗಬೇಕು ಎನ್ನುವ ಜನರ ಹಾಗೂ ಸಾಹಿತಿಗಳ ಅಭಿಪ್ರಾಯವನ್ನು ಪರಿಷತ್‌ ಎತ್ತಿಹಿಡಿಯಬೇಕು.
ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ
‘ರಾಜಕೀಯ ಅಂಟು ಹಚ್ಚಿದ್ದು ಬೇಸರ ಮೂಡಿಸಿದೆ’
ಕೊಪ್ಪಳ ಜಿಲ್ಲೆಯಲ್ಲಿ ಸಾಹಿತ್ಯಿಕ ಕಲ್ಪನೆ ಕೊಟ್ಟವನು ನಾನು. ಪರಿಷತ್ತಿಗೆ ಎರಡು ಬಾರಿ ಅಧ್ಯಕ್ಷನಾಗಿ ಐದು ಜಿಲ್ಲಾ ಸಮ್ಮೇಳನ, 11 ತಾಲ್ಲೂಕು ಸಮ್ಮೇಳನ ಮಾಡಿದ್ದೇನೆ. 13 ಪುಸ್ತಕಗಳನ್ನು ಹೊರತಂದಿದ್ದೇನೆ. 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿ ಜಿಲ್ಲೆಗೆ ಹೆಮ್ಮೆ ಬರುವಂತೆ ಮಾಡಿದ್ದೇನೆ. ಕಾದಂಬರಿ, ಸಹಕಾರ, ಪ್ರವಾಸ ಕಥನ ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಬರೆದಿದ್ದೇನೆ. ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಯಾರೂ ನನ್ನನ್ನು ರಾಜಕಾರಣಿ ಎನ್ನಲಿಲ್ಲ. ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದಾಕ್ಷಣ ರಾಜಕೀಯ ಅಂಟು ಹಚ್ಚಿದ್ದು ಬೇಸರ ಮೂಡಿಸಿದೆ.
ಶೇಖರಗೌಡ ಮಾಲಿಪಾಟೀಲ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷ
‘ಈಗ ಎಲ್ಲದರಲ್ಲಿಯೂ ರಾಜಕಾರಣವಿದೆ’
ಈಗ ಎಲ್ಲದರಲ್ಲಿಯೂ ರಾಜಕಾರಣ ವಿದೆ. ಸಾಹಿತ್ಯ ಪರಿಷತ್‌ನಲ್ಲಿ ಮೊದಲು ಸಾಹಿತಿಗಳೆಂದು ಮಾತ್ರ ಗುರುತಿಸುತ್ತಿದ್ದರು. ಸಮ್ಮೇಳನದ ಅಧ್ಯಕ್ಷರಾಗುವವರು ಯಾರೇ ಇದ್ದರೂ ಸಾಹಿತ್ಯಿಕ ಚಟುವಟಿಕೆ ಹಾಗೂ ಕನ್ನಡದ ಅಭಿವೃದ್ಧಿಗಾಗಿ ಕೆಲಸ ಮಾಡಿರಬೇಕು, ಕವಿಗಳಿಗೆ ಗೌರವ ಕೊಡುವುದನ್ನು ಕಲಿಯಬೇಕು, ಕವಿಗಳ ಪುಸ್ತಕಗಳನ್ನು ಮುದ್ರಣ ಮಾಡಲು ಧನಸಹಾಯ ಮಾಡಬೇಕು. ಕೃಷ್ಣದೇವರಾಯನ ಆಸ್ಥಾನದಲ್ಲಿ ತೆನಾಲಿ ರಾಮಕೃಷ್ಣ, ಅಲ್ಲಸಾನಿ ಪೆದ್ದಣ್ಣ ಹೀಗೆ ಅನೇಕ ಕವಿಗಳಿದ್ದರು. ಅವರಿಗೆ ರಾಜರಿಗಿಂತಲೂ ಹೆಚ್ಚು ಗೌರವ ಲಭಿಸುತ್ತಿತ್ತು. ಅಂಥ ಪರಿಸ್ಥಿತಿ ಈಗ ನಿರ್ಮಾಣವಾಗಬೇಕಿದೆ.
ಬಿ. ಪ್ರಾಣೇಶ, ಹಾಸ್ಯ ಭಾಷಣಕಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT