ಬೆಂಗಳೂರು: ‘ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್‌ಸಿ ಈಚೆಗೆ ನಡೆಸಿದ ಪರೀಕ್ಷೆಯಲ್ಲಿ ಭಾಷಾಂತರದ ತಪ್ಪುಗಳ ಕಾರಣದಿಂದ ಕನ್ನಡದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಹೀಗಾಗಿ ಮರುಪರೀಕ್ಷೆ ನಡೆಸಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
‘ಇದು ಬೇಜವಾಬ್ದಾರಿಯಿಂದ ಆಗಿರುವ ಅನ್ಯಾಯ. ಕೆಪಿಎಸ್‌ಸಿಯಂತಹ ಪ್ರತಿಷ್ಠಿತ ಸಂಸ್ಥೆಯು ಸೂಕ್ತ ಭಾಷಾಂತರಕಾರರ ನೆರವು ಪಡೆಯದೆ ಬೇಕಾಬಿಟ್ಟಿ ನಡೆದುಕೊಂಡಿದೆ. ಇದು ಸರ್ಕಾರಕ್ಕೂ ಕೆಟ್ಟ ಹೆಸರು ತರುತ್ತದೆ. ಹೀಗಾಗಿ ಸರ್ಕಾರ ಕೂಡಲೇ ತನಿಖೆಗೆ ಆದೇಶಿಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
‘ಮರುಪರೀಕ್ಷೆ ನಡೆಸುವುದು ಆದ್ಯತೆಯಾಗಬೇಕು. ಇಲ್ಲದೇ ಇದ್ದಲ್ಲಿ, ಭಾಷಾಂತರದಲ್ಲಿ ಅಪಾರ್ಥ ಕೊಡುತ್ತಿರುವ ಪ್ರಶ್ನೆಗಳನ್ನು ಭಾಷಾತಜ್ಞರಿಂದ ಪತ್ತೆಹಚ್ಚಿಸಬೇಕು. ಆ ಪ್ರಶ್ನೆಗಳಿಗೆ ಉತ್ತರಿಸಿರುವ ಅಭ್ಯರ್ಥಿಗಳಿಗೆ ಕೃಪಾಂಕ ನೀಡಬೇಕು’ ಎಂದು ಹೇಳಿದ್ದಾರೆ.