ನವದೆಹಲಿ: ಮಹದಾಯಿ ಜಲವಿವಾದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವರದಿ ಸಲ್ಲಿಸುವ ಸಂಬಂಧ ನ್ಯಾಯಮಂಡಳಿಯ ಅವಧಿಯನ್ನು ಆಗಸ್ಟ್ 20ರಿಂದ ಅನ್ವಯವಾಗುವಂತೆ ಆರು ತಿಂಗಳು ವಿಸ್ತರಿಸಲಾಗಿದೆ.
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ನಡುವಿನ ನೀರು ಹಂಚಿಕೆ ವಿವಾದಗಳನ್ನು ಪರಿಹರಿಸಲು ಸ್ಥಾಪಿಸಲಾದ ನ್ಯಾಯಮಂಡಳಿಯು ಹೆಚ್ಚಿನ ವರದಿ ನೀಡಲು ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಜಲಶಕ್ತಿ ಸಚಿವಾಲಯಕ್ಕೆ ಕೋರಿತ್ತು. ವರದಿ ನೀಡುವ ಅವಧಿಯನ್ನು ವಿಸ್ತರಿಸಿ ಸಚಿವಾಲಯ ಮಂಗಳವಾರ ಅಧಿಸೂಚನೆ ಹೊರಡಿಸಿದೆ.
ಮಹದಾಯಿ ವಿವಾದ ಬಗೆಹರಿಸಲು ಅಂತರ ರಾಜ್ಯ ನದಿ ನೀರು ವಿವಾದ ಕಾಯ್ದೆ 1956ರ ಸೆಕ್ಷನ್ 4ರ ಅನ್ವಯ ಮಹದಾಯಿ ನ್ಯಾಯಮಂಡಳಿ ಸ್ಥಾಪಿಸಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದ ಅನುಸಾರ ನ್ಯಾಯಮಂಡಳಿಯು ವರದಿ ನೀಡಿದೆ. ಈ ವರದಿಯ ಬಗ್ಗೆ 2020ರ ಫೆ.20ರಂದು ಅಧಿಸೂಚನೆ ಹೊರಡಿಸಲಾಗಿದೆ.