ನವದೆಹಲಿ: ಕೇಂದ್ರ ಪುರಸ್ಕೃತ ಯೋಜನೆಯಾದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನದ ಸಮರ್ಪಕ ಅನುಷ್ಠಾನಕ್ಕೆ ಇ–ರುಪಿ (E Rupi) ಜಾರಿ ಮಾಡುವುದು ಸೂಕ್ತ. ಅದನ್ನು ಕರ್ನಾಟಕ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು.
ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಈ ಕಾರ್ಯಕ್ರಮವನ್ನು 60: 40 ಅನುಪಾತದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. 2021–22ರಿಂದ ಕೇಂದ್ರ ಸರ್ಕಾರವು ತನ್ನ ಪಾಲಿನ ಶೇ 60ರಷ್ಟು ಮೊತ್ತವನ್ನು ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡುತ್ತಿದೆ. ಕೆಲವು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಗೆ ಶುಲ್ಕ ಮರುಪಾವತಿ ಮಾಡುತ್ತಿಲ್ಲ ಎಂಬ ದೂರುಗಳು ಬಂದಿವೆ’ ಎಂದರು.
‘2021–22ಕ್ಕೆ ಮೊದಲು, ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದ ಪರಿಶಿಷ್ಟ ಜಾತಿಯ ಎಲ್ಲ ವಿದ್ಯಾರ್ಥಿಗಳಿಗೂ ನೇರವಾಗಿ ಇಲಾಖೆಯಿಂದಲೇ ಶುಲ್ಕ ಮರುಪಾವತಿ ಮಾಡಲಾಗುತ್ತಿತ್ತು. ಈಗ ವಿದ್ಯಾರ್ಥಿ ವೇತನ ಮೊತ್ತ ವಿದ್ಯಾರ್ಥಿಗಳ ಖಾತೆಗೆ ಜಮೆಯಾಗುತ್ತಿರುವುದರಿಂದ ಸಮಸ್ಯೆಯಾಗಿದೆ’ ಎಂದರು.
‘ದಾಖಲಾತಿ ಸಮಯದಲ್ಲಿ ಶುಲ್ಕ ಪಾವತಿಗೆ ವಿದ್ಯಾರ್ಥಿಗಳಿಗೆ ಒತ್ತಾಯ ಮಾಡಬಾರದು ಎಂದು ಸಮಾಜ ಕಲ್ಯಾಣ ಹಾಗೂ ಉನ್ನತ ಶಿಕ್ಷಣ ಇಲಾಖೆಗಳು ಕೆಲವು ವರ್ಷಗಳ ಹಿಂದೆಯೇ ಸುತ್ತೋಲೆ ಹೊರಡಿಸಿವೆ. ಅದರ ಪ್ರಕಾರ, ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡದೆ ಕಾಲೇಜುಗಳು ಪ್ರವೇಶ ನೀಡಿದ್ದವು. ಆದರೆ, ಈಗ ವಿದ್ಯಾರ್ಥಿಗಳ ಖಾತೆಗೆ ವಿದ್ಯಾರ್ಥಿ ವೇತನದ ಮೊತ್ತ ಜಮೆ ಆಗುತ್ತಿದೆ. ಈ ಕಾರಣಕ್ಕೆ ದಾಖಲಾತಿ ಸಮಯದಲ್ಲೇ ಶುಲ್ಕ ಪಾವತಿಸುವಂತೆ ಶಿಕ್ಷಣ ಸಂಸ್ಥೆಗಳು ಒತ್ತಾಯ ಮಾಡುತ್ತಿವೆ. ಇದರಿಂದಾಗಿ, ಪರಿಶಿಷ್ಟ ಜಾತಿಯ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.