ಉಡುಪಿ: ಮಳೆ ಕೊರತೆ, ಇಳುವರಿ ಕುಸಿತ, ರೋಗ ಬಾಧೆಯ ಕಾರಣಕ್ಕೆ ತರಕಾರಿ ಬೆಲೆಗಳ ದರ ಏರಿಕೆಯಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಗಗನಕ್ಕೇರಿದ್ದ ಬೀನ್ಸ್ ಹಾಗೂ ಕ್ಯಾರೆಟ್ ದರ ಇಳಿಕೆಯಾಗಿಲ್ಲ. ಮಳೆಗಾಲದಲ್ಲಿ ತರಕಾರಿಗಳ ಬೆಲೆ ಕೊಂಚ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಗ್ರಾಹಕರ ನಿರೀಕ್ಷೆ ಹುಸಿಯಾಗಿದ್ದು ಜೇಬಿಗೆ ಬಾರವಾಗಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಗುರುವಾರ ಕೆ.ಜಿ ಕ್ಯಾರೆಟ್‌ಗೆ ₹100ರಿಂದ ₹110 ದರ ಇದ್ದರೆ, ಬೀನ್ಸ್ ಕೆ.ಜಿಗೆ ₹100 ಬೆಲೆ ಇತ್ತು. ಕೆಲವು ಕಡೆ ಮಳೆ ಕೊರತೆ ಇದ್ದರೆ, ಕೆಲವು ಕಡೆ ಚಂಡಮಾರುತದ ಪ್ರಭಾವದಿಂದ ತರಕಾರಿ ಬೆಳೆ ಹಾಳಾಗಿದೆ. ಜಿಲ್ಲೆಗೆ ಪೂರೈಕೆಯಾಗುವ ಬಹುತೇಕ ತರಕಾರಿಗಳು ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಆಮದಾಗುತ್ತದೆ. ಆಯಾ ಪ್ರದೇಶಗಳ ಸ್ಥಿತಿಗತಿಗಳ ಆಧಾರದ ಮೇಲೆ ಬೆಲೆ ನಿಗಧಿಯಾಗುತ್ತದೆ ಎನ್ನುತ್ತಾರೆ ವ್ಯಾಪಾರಿ ಅಲ್ತಾಫ್.
ಇಳಿಯದ ಶುಂಠಿ ದರ: ಗಗನಕ್ಕೇರಿರುವ ಶುಂಠಿಯ ದರ ಇನ್ನೂ ಇಳಿಕೆಯಾಗಿಲ್ಲ. ಕೆ.ಜಿಗೆ ₹250 ರಿಂದ ₹280ರವರೆಗೂ ಮಾರಾಟವಾಗುತ್ತಿದ್ದು ಹೋಟೆಲ್ ಉದ್ಯಮಕ್ಕೆ ಶುಂಠಿ ದರ ಏರಿಕೆ ಬಿಸಿ ತಟ್ಟಿದೆ. ಶುಂಠಿ ಬೆಳೆ ನಾಶ, ರೋಗ ಬಾಧೆ, ಇಳುವರಿ ಕುಸಿತ ದರ ಏರಿಕೆಗೆ ಕಾರಣ. ಮಾರುಕಟ್ಟೆಗೆ ಹೊಸದಾಗಿ ಶುಂಠಿ ಪೂರೈಕೆಯಾದರೆ ಬೆಲೆ ಇಳಿಕೆಯಾಗುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.
15 ದಿನಗಳ ಹಿಂದೆ ಕೆ.ಜಿಗೆ ₹50ಕ್ಕೆ ಮಾರಾಟವಾಗುತ್ತಿದ್ದ ಕ್ಯಾಪ್ಸಿಕಂ ದರ ಶತಕದತ್ತ ಸಾಗಿದ್ದು ಸದ್ಯ ₹90ಕ್ಕೆ ಸಿಗುತ್ತಿದೆ. ಬದನೆಕಾಯಿ ದರವೂ ₹40ರಿಂದ ₹60ಕ್ಕೆ ಹೆಚ್ಚಾಗಿದೆ. ಬೆಳ್ಳುಳ್ಳಿ ₹150, ಹಸಿ ಮೆಣಸಿನಕಾಯಿ ₹130, ಸೋರೆಕಾಯಿ ₹40, ತೊಂಡೆಕಾಯಿ ₹50, ಬೆಂಡೆಕಾಯಿ ₹50 ದರ ಇತ್ತು.
ಟೊಮೆಟೊ ದರವೂ ಏರುಗತಿಯಲ್ಲಿ ಸಾಗಿದ್ದು ಕೆ.ಜಿಗೆ ₹45 ರಿಂದ ₹50 ಬೆಲೆ ಇದೆ. ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ವ್ಯಾಪಾರಿಗಳು. ಈರುಳ್ಳಿ ದರ ಸ್ಥಿರವಾಗಿದ್ದು ಕೆ.ಜಿಗೆ ₹25 ರಿಂದ ₹30 ಇದೆ. ಎಲೆಕೋಸು ₹25, ಹೂಕೋಸು ₹40 ಇದೆ.
ಹಣ್ಣಿನ ದರವೂ ಹೆಚ್ಚಳ: ಸಾಮಾನ್ಯವಾಗಿ ₹150ಕ್ಕೆ ಲಭ್ಯವಾಗುತ್ತಿದ್ದ ಉತ್ತಮ ಗುಣಮಟ್ಟದ ಸೇಬು ₹250ಕ್ಕೆ ಹೆಚ್ಚಾಗಿದೆ. ತಿಂಗಳ ಹಿಂದೆ ₹ 60ಕ್ಕೆ ಸಿಗುತ್ತಿದ್ದ ಏಲಕ್ಕಿ ಬಾಳೆ ಕೆ.ಜಿಗೆ ₹80 ಮುಟ್ಟಿದೆ. ದಾಳಿಂಬೆ ದರ ₹200 ರಿಂದ ₹240ಕ್ಕೆ ಜಿಗಿದಿದೆ. ಸೀಬೆ ₹120 ರಿಂದ ₹150, ಮೋಸಂಬಿ ₹100, ಪಪ್ಪಾಯ ₹35, ಅನಾನಸ್ ₹60ಕ್ಕೆ ಹೆಚ್ಚಾಗಿದೆ.
ಮಾವು ಕೊಂಚ ಇಳಿಕೆ: ಆರಂಭದಲ್ಲಿ ದುಬಾರಿಯಾಗಿದ್ದ ಮಾವು ಕೊಂಚ ಇಳಿಕೆಯಾಗಿದ್ದು ಬಾಗನ್‌ಪಲ್ಲಿ ₹70, ಮಲ್ಲಿಕಾ ₹100, ಬಾದಾಮಿ ₹100, ನೀಲಂ ₹80, ತೋತಾಪುರಿ ₹50 ದರ ಇದೆ.
ಸೊಪ್ಪು ದುಬಾರಿ: ಸೊಪ್ಪಿನ ದರವೂ ದುಬಾರಿಯಾಗಿದ್ದು ಹರಿವೆ, ದಂಟು, ಸಬ್ಬಸಿಗೆ, ಕೊತ್ತಂಬರಿ, ಕರಿಬೇವು, ಪಾಲಕ್ ಕಟ್ಟಿಗೆ (ಸಾಮಾನ್ಯ ದಪ್ಪ) ₹10 ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.